ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ‘ಅರಿವಿನ ಮನೆ’ಗಳಿಗೆ ಬೇಕಿದೆ ಸೌಕರ್ಯದ ಬಲ

Published 4 ಮಾರ್ಚ್ 2024, 5:52 IST
Last Updated 4 ಮಾರ್ಚ್ 2024, 5:52 IST
ಅಕ್ಷರ ಗಾತ್ರ

ಕಲಬುರಗಿ: ನಿರ್ವಹಣೆ ಇಲಾಖೆ ಬದಲಾದರೂ ಅರಿವಿನ ಮನೆಯ ಸಮಸ್ಯೆಗಳು ಮಾತ್ರ ದೂರವಾಗಿಲ್ಲ. ಮೂಲ ಸೌಕರ್ಯ ಒದಗಿಸಲು ಸರ್ಕಾರ ಇನ್ನೂ ಪ್ರಯಾಸಪಡುತ್ತಿದೆ.

ಗ್ರಾಮೀಣ ಭಾಗದಲ್ಲಿ ಓದುವ ಸಂಸ್ಕೃತಿ ಉತ್ತೇಜಿಸಲು ಸರ್ಕಾರ ಗ್ರಾಮ ಪ‍ಂಚಾಯಿತಿ ಕೇಂದ್ರಗಳಲ್ಲಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳನ್ನು ಆರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 260 ಗ್ರಂಥಾಲಯ ಮತ್ತು ಅರಿವು ಕೇಂದ್ರಗಳಿವೆ.

2015ರಲ್ಲಿ ಹೊಸ ಗ್ರಾಮ ಪಂಚಾಯಿತಿ ಕೇಂದ್ರಗಳನ್ನು ರಚಿಸಲಾಯಿತು. ಈ ವೇಳೆ ಜಿಲ್ಲೆಯಲ್ಲಿ 41 ಕೇಂದ್ರಗಳನ್ನು ತೆರೆಯಲಾಯಿತು. ಇವುಗಳಲ್ಲಿ ಬಹುತೇಕ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿಲ್ಲ. ಮೇಲ್ವಿಚಾರಕರಿಲ್ಲದ್ದಕ್ಕೆ ಓದುಗರಿಗೆ ಮುಕ್ತವಾಗಿಲ್ಲ.

ಹಳೆ ಪಂಚಾಯಿತಿಗಳಲ್ಲಿ ಎಲ್ಲ ಕಡೆ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಿವೆ. 219ರ ಪೈಕಿ 78 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಉಳಿದವುಗಳು ಶಾಲೆ, ಸರ್ಕಾರಿ ಕಟ್ಟಡ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯ ಕೊಠಡಿಯಲ್ಲಿ ನಡೆಯುತ್ತಿವೆ. ಮಳೆಗಾಲದಲ್ಲಿ ತೊಟ್ಟಿಕ್ಕುತ್ತವೆ. ಕೆಲವು ಕಡೆ ಪುಸ್ತಕಗಳು ಹಾಳಾದ ಉದಾಹರಣೆಯೂ ಇದೆ.

ಮೂಲ ಸೌಕರ್ಯ ಕೊರತೆ: ಮೂಲ ಸೌಕರ್ಯ ಕೊರತೆ ಈ ಕೇಂದ್ರಗಳ ಮುಖ್ಯ ಸಮಸ್ಯೆಯಾಗಿದೆ. ಕಡ್ಡಿಪೆಟ್ಟಿಗೆ ಆಕಾರದ ಕಟ್ಟಡಗಳ ಅರ್ಧ ಭಾಗವನ್ನ ಪುಸ್ತಕಗಳು ಆವರಿಸಿಕೊಂಡಿವೆ. ಉಳಿದ ಭಾಗದಲ್ಲಿ ಮೂರು–ನಾಲ್ಕು ಜನ ಕುಳಿತು ಓದಬಹುದು. ಮೇಜು ಹಾಗೂ ಆಸನ ಹಾಕಿದರೆ ಆ ಸಂಖ್ಯೆಯೂ ಕಡಿಮೆಯಾಗುತ್ತದೆ.

ಕೆಲ ಕೇಂದ್ರಗಳಲ್ಲಿ ಮೇಜು ಹಾಗೂ ಆಸನದ ವ್ಯವಸ್ಥೆ ಇಲ್ಲ. ನೆಲದ ಮೇಲೆ ಕುಳಿತು ಓದಬೇಕು. ಮೂತ್ರಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ನೋಡಲೂ ಸಿಗುವುದಿಲ್ಲ. ಮಕ್ಕಳ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳ ಕೊರತೆ ಇದೆ. ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳೂ ನಿಯಮಿತವಾಗಿ ಬರುವುದಿಲ್ಲ.

ಬೆರಳೆಣಿಕೆಯಷ್ಟು ಕೇಂದ್ರಗಳು ಮಾತ್ರ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ ವ್ಯವಸ್ಥೆ ಹೊಂದಿವೆ. ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಬಿಲ್‌ ಪಾವತಿಸದ ಕಾರಣ ಕೆಲ ಕಡೆ ಅವುಗಳನ್ನು ಹಾಕುವುದನ್ನು ನಿಲ್ಲಿಸಲಾಗಿದೆ. ಆದ್ದರಿಂದ ಜನರು ನೋಂದಣಿಗೆ ಆಸಕ್ತಿ ತೋರುತ್ತಿಲ್ಲ.

ಮಕ್ಕಳಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಸರ್ಕಾರ ‘ಓದುವ ಬೆಳಕು’, ‘ಗಟ್ಟಿ ಓದು’ ಸೇರಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಲ್ಲಿ ಸೌಕರ್ಯಗಳಿಲ್ಲದ ಕಾರಣ ಈ ಕಾರ್ಯಕ್ರಮಗಳ ಅನುಷ್ಠಾನ ಯಶಸ್ವಿಯಾಗಿಲ್ಲ.

ಸೌಕರ್ಯ ವಂಚಿತ ಗ್ರಂಥಾಲಯಗಳು

ಚಿಂಚೋಳಿ: ತಾಲ್ಲೂಕಿನ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. 25 ಕೇಂದ್ರಗಳಿವೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಗಾರಂಪಳ್ಳಿ, ಕುಪನೂರ, ಜಟ್ಟೂರು, ಗರಗಪಳ್ಳಿಯಲ್ಲಿ ಕೇಂದ್ರಗಳು ಇನ್ನೂ ಕಾರ್ಯ ನಿರ್ವಹಿಸುತ್ತಿಲ್ಲ.

ದೇಗಲಮಡಿ ಮತ್ತು ಹಸರಗುಂಡಗಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಲ್ಲಿ ಸೌಕರ್ಯಗಳಿವೆ. ಓದುಗರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಉಳಿದ ಕಡೆ ಗ್ರಂಥಾಲಗಳು ಇದ್ದರೂ ಜನರಿಗೆ ಸಮರ್ಪಕ ಸೌಲಭ್ಯಗಳಿಲ್ಲ. ಚಿಕ್ಕ ಕೋಣೆಗಳಲ್ಲಿ ನಡೆಯುತ್ತಿವೆ. ಕಂಪ್ಯೂಟರ್, ಪುಸ್ತಕ, ವೃತ್ತ ಪತ್ರಿಕೆ, ಓದುಗರು ಕುಳಿತುಕೊಳ್ಳಲು ಆಸನ, ಮೇಜು ಮೊದಲಾದ ಸಾಮಗ್ರಿ ಇಡುವುದಕ್ಕೂ ಸ್ಥಳ ಇಲ್ಲದಂತಾಗಿದೆ.

25 ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಲ್ಲಿ 9 ಮೇಲ್ವಿಚಾರಕರು ಮಹಿಳೆಯರಾಗಿದ್ದಾರೆ. ಇವರಿಗೂ ಮೂತ್ರಾಲಯ ಇಲ್ಲದಿರುವುದು ದುರಂತ. ಬಹುತೇಕ ಕೇಂದ್ರಗಳು ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನಡೆಯುತ್ತಿವೆ. ಪ್ರತ್ಯೇಕ ಕಟ್ಟಡಗಳ ಅಗತ್ಯ ಇದೆ. ಪತ್ರಿಕೆ ಬಿಲ್, ಸಾದಿಲ್ವಾರು ಖರ್ಚು ಭರಿಸಲು ಅಧಿಕಾರಿಗಳು ಸ್ಪಂದಿಸಿಲ್ಲ.

ಸೌಕರ್ಯ ಕಲ್ಪಿಸಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಿಂದ ಪ್ರತಿ ಗ್ರಂಥಾಲಯಕ್ಕೆ ತಲಾ ₹ 5,648 ರಂತೆ ಒಟ್ಟು ₹ 3.33 ಕೋಟಿ ಬಿಡುಗಡೆಯಾಗಿದೆ.

ಬೇಕಿದೆ ಸ್ವಂತ ಕಟ್ಟಡ

ಆಳಂದ: ತಾಲ್ಲೂಕಿನಲ್ಲಿ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಒಳಪಟ್ಟ 39 ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಲ್ಲಿ ಬಹುತೇಕ ಸ್ವಂತ ಕಟ್ಟಡ ಹೊಂದಿಲ್ಲ. ಗ್ರಾಮ ಪಂಚಾಯಿತಿ ಕಚೇರಿ, ಹಳೆ ಸರ್ಕಾರಿ ಕಟ್ಟಡ, ಶಾಲೆ ಹಾಗೂ ಅಂಗನವಾಡಿಗಳ ಹಳೆಯ ಕಟ್ಟಡಗಳಲ್ಲಿ ನಡೆಯುತ್ತಿವೆ.

ಗ್ರಂಥಾಲಯ ಇಲಾಖೆಯಿಂದ ಪ್ರತಿ ಗ್ರಂಥಾಲಯಕ್ಕೆ ಅಂದಾಜು 2 ಸಾವಿರದಿಂದ 3 ಸಾವಿರದಷ್ಟು ಪುಸ್ತಕಗಳು ಬಂದಿವೆ. ಬಹುತೇಕ ಗ್ರಾಮೀಣ ಗ್ರಂಥಾಲಯಗಳು ಸಂಜೆ ತೆರೆದಿರುವುದಿಲ್ಲ. ಹಲವು ಮೇಲ್ವಿಚಾರಕರು ಬೆಳಿಗ್ಗೆ ಬಂದು ಒಂದು ಗಂಟೆ ತೆರೆದು ಹೋಗುವುದೇ ಹೆಚ್ಚು ಎಂದು ಓದುಗ ತಡೋಳಾದ ಅಷ್ಪಾಕ್ ಮುಲ್ಲಾ ಹೇಳಿದರು.

ತಾಲ್ಲೂಕಿನ ರುದ್ರವಾಡಿ, ಭೋದನ, ಸಾವಳೇಶ್ವರ ಗ್ರಾಮದಲ್ಲಿ ಸ್ವಂತ ಕಟ್ಟಡಗಳಿವೆ. ಉಳಿದಂತೆ ಕೊರಳ್ಳಿ ಗ್ರಾಮದಲ್ಲಿ ಬಸ್ ತಂಗುದಾಣವೇ ಈಗ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಮಾದನ ಹಿಪ್ಪರಗಿ, ಹಳ್ಳಿ ಸಲಗರ, ನಿಂಬಾಳ, ನಿರಗುಡಿ, ಮುನ್ನೋಳಿಯಲ್ಲಿ ಗ್ರಂಥಾಲಯಕ್ಕೆ ಪಂಚಾಯಿತಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಬಳಿ, ಕೊಡಲ ಹಂಗರಗಾ, ಪಡಸಾವಳಿ ಮತ್ತಿತರ ಹೊಸ ಪಂಚಾಯಿತಿ ಕೇಂದ್ರಗಳಲ್ಲಿನ ಗ್ರಾಮಗಳಲ್ಲಿ ಗ್ರಂಥಾಲಯಕ್ಕೆ ಕಟ್ಟಡ ಇಲ್ಲದಾಗಿದೆ.

ಹಲವು ಗ್ರಾಮಗಳಲ್ಲಿ ಪುಸ್ತಕ ಇದ್ದರೂ ದಿನ ಪತ್ರಿಕೆಗಳು ಸಿಗುವುದಿಲ್ಲ. ಹೀಗಾಗಿ ಹಿರಿಯರು, ರೈತರು ಗ್ರಂಥಾಲಯದತ್ತ ಸುಳಿಯುವುದಿಲ್ಲ.

ನಮ್ಮ ಕೇಂದ್ರಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ‌ ಜನ ಬರುತ್ತಾರೆ. ಪತ್ರಿಕೆ ಹಾಗೂ ಪುಸ್ತಕ ಓದುತ್ತಾರೆ. ಒಂದು ದಿನ‌ಪತ್ರಿಕೆ ಬರದಿದ್ದರೂ ಜನ ಗ್ರಾ.ಪಂ.ಗೆ ಹೋಗಿ ಪ್ರಶ್ನಿಸುತ್ತಾರೆ. ಹೀಗಾಗಿ ಒಂದು ದಿನವೂ ಪತ್ರಿಕೆ ನಿಲ್ಲುವುದಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಅಭಿವೃದ್ಧಿ ಅಧಿಕಾರಿಗಳ ಸಹಕಾರ ಉತ್ತಮವಾಗಿದೆ - ಗುಂಡಪ್ಪ ಮೇಲ್ವಿಚಾರಕ, ಗ್ರಾ.ಪಂ.ಅರಿವು ಕೇಂದ್ರ ದೇಗಲಮಡಿ ಚಿಂಚೋಳಿ

ಗ್ರಾ.ಪಂ. ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಲು ವಿವಿಧ ಯೋಜನೆಗಳಡಿ ಅನುದಾನ‌ ಒದಗಿಸಲಾಗುವುದು- ಶಂಕರ ರಾಠೋಡ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ. ಚಿಂಚೋಳಿ

ಗ್ರಾಮೀಣ ಗ್ರಂಥಾಲಯಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕ ಮತ್ತು ರೈತರ ಆಸಕ್ತಿಗೆ ಅನುಗುಣವಾಗಿ ದಿನಪತ್ರಿಕೆ ಹಾಗೂ ವಾರಪತ್ರಿಕೆಯ ವ್ಯವಸ್ಥೆ ಮಾಡಬೇಕು - ಶ್ರೀಶೈಲ ತೊಗರೆ, ಸಹ ಗ್ರಂಥಪಾಲಕ ನಗರ ಗ್ರಂಥಾಲಯ ಆಳಂದ

ಸರ್ಕಾರ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು. ವರ್ಷಕ್ಕೊಮ್ಮೆಯಾದರೂ ಪತ್ರಿಕೆಗಳ ಬಿಲ್ ಮಂಜೂರು ಮಾಡಬೇಕು. ಮೇಲ್ವಿಚಾರಕರಿಗೆ ನಿಯಮಿತವಾಗಿ ಗೌರವಧನ ನೀಡಬೇಕು - ಅಪ್ಪಾಸಾಹೇಬ್ ಪಟೇಲ್, ಗ್ರಂಥಪಾಲಕರ ಸಂಘದ ತಾಲ್ಲೂಕು ಅಧ್ಯಕ್ಷ ಅಫಜಲಪುರ

ಆರ್‌ಡಿಪಿಆರ್‌ ಇಲಾಖೆ ತೆಕ್ಕೆಗೆ

ಈ ಗ್ರಂಥಾಲಯಗಳು ಮೊದಲು ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದ್ದವು. 2019ರ ಮಾರ್ಚ್‌ ಬಳಿಕ ಪಂಚಾಯತ್ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬಳಿಕ ಇವುಗಳ ಹೆಸರನ್ನು ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಎಂದು ಬದಲಿಸಿತು. ಈಗ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಎಂದು ಬದಲಾಯಿಸಲಾಗಿದೆ.

ಅಂತಿಮ ಹಂತದಲ್ಲಿ ಮೇಲ್ವಿಚಾರಕರ ನೇಮಕ 

ಜಿಲ್ಲೆಯ 43 ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳ ಮೇಲ್ವಿಚಾರಕರ ನೇಮಕ ಅಂತಿಮ ಹಂತದಲ್ಲಿದೆ. ಪ್ರಕ್ರಿಯೆ ಮುಗಿದ ತಕ್ಷಣ ಅವರಿಗೆ ಆದೇಶ ಪತ್ರ ನೀಡಲಾಗುತ್ತದೆ. ಬಳಿಕ ಆ ಕೇಂದ್ರಗಳು ಜನರ ಓದಿಗೆ ಮುಕ್ತವಾಗಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆಲಗೂಡ ಬಂಕಲಗಾ ಬಸವಪಟ್ಟಣ ಬೆಡಸೂರ ಧನ್ನೂರ ಡೋಣಗಾಂವ ಗರಗಪಳ್ಳಿ ಗಾರಂಪಳ್ಳಿ ಘತ್ತರಗಾ ಹಾಗರಗಾ ಹಾಳ ತಡಕಲ್ ಹೆಬಳಿ ಹಿತ್ತಲ ಶಿರೂರ ಹುಲ್ಲೂರ ಇವಣಿ ಜೆಟ್ಟೂರ ಕಾಚಪುರ ಕರದಳ್ಳಿ ಕರ್ಕಿದಳ್ಳಿ ಕೆರೆ ಅಂಬಲಗಾ ಕುಪನೂರ ಮಡಕಿ ಕಮಲಾಪುರ ಮದರಿ ಮದರಾ (ಬಿ) ಮಿಣಜಗಿ ಮುಗಳನಾಗಾಂವ ಮೋಘಾ (ಕೆ) ಮೋಘಲ್ ನಂದರಗಾ ನೇದಲಗಿ ರಾಮನಗರ ರಾಮಪುರಹಳ್ಳಿ ರಂಜಣಗಿ ಸರಡಗಿ (ಬಿ) ಸಾತಖೇಡ ಶೇಳಗಿ ಸಿಂಧನಮಡು ಸುಂಬಡ ತಡೋಳಾ ತೆಲ್ಲೂರ ಯಡಗಾ ಪಡಸಾವಳಿ ಮಾಶ್ಯಾಳ ಕೊಡಲಹಂಗರಗಾ ಹಾಗೂ ಮಹಾಗಾಂವ ಗ್ರಾಮ ಪಂಚಾಯಿತಿಗಳಿಗೆ ಮೇಲ್ವಿಚಾರಕರ ನೇಮಕ ಮಾಡಲಾಗುತ್ತಿದೆ ಎಂದು ಹೇಳಿದರು.

ಮೂಲ ಸೌಕರ್ಯಕ್ಕೆ ದೇಣಿಗೆ ಸಂಗ್ರಹ

ಅಫಜಲಪುರ: ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳಿವೆ. 20 ಪಂಚಾಯಿತಿ ಕೇಂದ್ರಗಳಲ್ಲಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಿವೆ. ಹೊಸದಾಗಿ ಎಂಟು ಕಡೆ ಕೇಂದ್ರ ತೆರೆಯಲು ಮಂಜೂರಾತಿ ದೊರೆತಿದೆ. 15 ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. ಮಾಶಾಳ ದೇವಲ ಗಾಣಗಾಪುರ ಗ್ರಂಥಾಲಯಗಳಿಗೆ ಮೇಲ್ವಿಚಾಲಕರಿಲ್ಲ. ಮೂರು ವರ್ಷಗಳಿಂದ ಸರ್ಕಾರ ಪತ್ರಿಕೆಗಳ ಬಿಲ್ ನೀಡಿಲ್ಲ. ಮೇಲ್ವಿಚಾರಕರೇ ಸ್ವಂತ ಹಣ ನೀಡಿ ಪತ್ರಿಕೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಬಂದಿರುವ ಗಜಾನನ ಬಾಳೆ ಅವರು ‘ನನ್ನ ಜನ ನನ್ನ ಋಣ’ ಅಭಿಯಾನ ಆರಂಭಿಸಿ ಕೇವಲ 15 ದಿನಗಳಲ್ಲಿ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಚೌಡಾಪುರ ಬಳ್ಳೂರಗಿ ಮಾಶಾಳ ಕರಜಗಿ ಹಾಗೂ ಉಡಚಣ ಸೇರಿ 5 ಗ್ರಾಮಗಳ ಗ್ರಂಥಾಲಯ ಆಯ್ಕೆ ಮಾಡಿಕೊಂಡು ಅವುಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಐದು ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿ ಕೊಟ್ಟಿದ್ದಾರೆ. ದೇವಲಗಾಣಗಾಪುರ ದೊಡ್ಡ ಗ್ರಾಮವಾಗಿದೆ. ಸರ್ಕಾರ ಹೊಸದಾಗಿ ಕಟ್ಟಡ ಮಂಜೂರು ಮಾಡಬೇಕು ಎಂದು ಗ್ರಾಮದ ಮುಖಂಡ ಶ್ರೀಪಾದ ರಾವ್ ಮಾಳಿಗೆ ಒತ್ತಾಯಿಸಿದರು.

ನಾಲವಾರದಲ್ಲಿ ಮಾದರಿ ಕೇಂದ್ರ

ಚಿತ್ತಾಪುರ ತಾಲ್ಲೂಕಿನ ನಾಲವಾರದಲ್ಲಿರುವ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿದೆ. ಈ ಕೇಂದ್ರ ಮಕ್ಕಳ ಸ್ನೇಹಿಯಾಗಿದ್ದು ಓದುಗರನ್ನು ಆಕರ್ಷಿಸುತ್ತಿದೆ. ಮಕ್ಕಳು ಹಾಗೂ ಓದುಗರಿಗೆ ಆಸನ ಹಾಗೂ ಮೇಜಿನ ವ್ಯವಸ್ಥೆ ಇದೆ. ಸಾಕಷ್ಟು ಪುಸ್ತಕಗಳು ಲಭ್ಯ ಇವೆ. ಕೇಂದ್ರವನ್ನು ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಇಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ ಇರುವುದು ವಿಶೇಷ. ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳ ಮಾಹಿತಿಯನ್ನೂ ಪ್ರದರ್ಶಿಸಲಾಗಿದೆ.

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಜಗನ್ನಾಥ ಡಿ ಶೇರಿಕಾರ, ಸಂಜಯ ಪಾಟೀಲ

ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಗ್ರಂಥಾಲಯ ಕಟ್ಟಡ ಸೋರುತ್ತಿರುವುದರಿಂದ ಪುಸ್ತಕಗಳನ್ನು ಗಂಟು ಕಟ್ಟಿ ಮೂಲೆಯಲ್ಲಿ ಇಡಲಾಗಿರುವುದು
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಗ್ರಂಥಾಲಯ ಕಟ್ಟಡ ಸೋರುತ್ತಿರುವುದರಿಂದ ಪುಸ್ತಕಗಳನ್ನು ಗಂಟು ಕಟ್ಟಿ ಮೂಲೆಯಲ್ಲಿ ಇಡಲಾಗಿರುವುದು
ಚಿಂಚೋಳಿ ತಾಲ್ಲೂಕಿನ ಚಂದನಕೇರಾದಲ್ಲಿರುವ ಗ್ರಂಥಾಲಯ
ಚಿಂಚೋಳಿ ತಾಲ್ಲೂಕಿನ ಚಂದನಕೇರಾದಲ್ಲಿರುವ ಗ್ರಂಥಾಲಯ
ಚಿತ್ತಾಪುರ ತಾಲ್ಲೂಕಿನ ನಾಲವಾರದಲ್ಲಿರುವ ಗ್ರಂಥಾಲಯ
ಚಿತ್ತಾಪುರ ತಾಲ್ಲೂಕಿನ ನಾಲವಾರದಲ್ಲಿರುವ ಗ್ರಂಥಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT