ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಿ ಸಮಾಜ ವಿರುದ್ಧ ದೌರ್ಜನ್ಯ: ಪೂರ್ವಭಾವಿ ಸಭೆ 3ರಂದು

Published 28 ಡಿಸೆಂಬರ್ 2023, 7:29 IST
Last Updated 28 ಡಿಸೆಂಬರ್ 2023, 7:29 IST
ಅಕ್ಷರ ಗಾತ್ರ

ಕಲಬುರಗಿ: ‘ಜಿಲ್ಲೆಯಲ್ಲಿ ಕೋಲಿ ಸಮಾಜದ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಜನವರಿ ಕೊನೆಯ ವಾರದಲ್ಲಿ ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಕೋಲಿ ಸಮಾಜ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದವರ ಮೇಲಿನ ದೌರ್ಜನ್ಯ ವಿರುದ್ಧ ಹೋರಾಡಲು ಜನವರಿ 3ರಂದು ನಗರದ ಧರಿಯಾಪುರದ ಕೋಲಿ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪೊಲೀಸರ ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿ ಆತ್ಮಸ್ಥೈರ್ಯ ಕಳೆದುಕೊಂಡು 9 ಜನ ಕೋಲಿ ಸಮಾಜದ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನಿನ ಭಯವಿಲ್ಲದೆ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ನಗರದಲ್ಲಿ ಹಗಲು ಸಮಯದಲ್ಲಿ ಕಳ್ಳತನ ಮಾಡಲಾಗುತ್ತಿದೆ’ ಎಂದು ದೂರಿದರು.

‘ತಾಲ್ಲೂಕಿನ ತಾಡತೆಗನೂರು ಗ್ರಾಮದ ಶಿವಶರಣ ಎಂಬ ಯುವಕನನ್ನು ಹೆದರಿಸಿ ಆತನಲ್ಲಿದ್ದ ಬಂಗಾರ ಆಭರಣ ಕಸಿದುಕೊಂಡು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ತಾಪುರದ ಕಲಗುರ್ತಿಯ ಯುವತಿಯನ್ನು ‍ಅಪಹರಿಸಿದ್ದರು. ಅದನ್ನು ಪತ್ತೆ ಹಚ್ಚುವಂತೆ ಪ್ರತಿಭಟನೆ ಮಾಡಿದರೆ ನಮ್ಮ ಮೇಲೆ ಮೂರು ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಆರೋಪಿಸಿದರು.

‘ಜೇವರ್ಗಿ, ಕಲಗುರ್ತಿ, ಸೇಡಂ ತಾಲ್ಲೂಕಿನ ಪ್ರಕರಣಗಳನ್ನು ಫೈಖ್‌ ಎಂಬ ಸಿಡಿಐ ಅಧಿಕಾರಿಗೆ ನೀಡಲಾಗಿದೆ. ತನಿಖೆ ಸಂಪೂರ್ಣ ಹಳ್ಳ ಹಿಡಿದಿದೆ. ಜಿಲ್ಲೆಯಲ್ಲಿ ಗೂಂಡಾಗಿರಿ, ದೌರ್ಜನ್ಯ ದಬ್ಬಾಳಿಕೆ ಮಿತಿ ಮೀರಿದೆ. ಜೇವರ್ಗಿ ಶಾಸಕ ಅಜಯಸಿಂಗ್‌ ಅವರ ಆಪ್ತ ಸಹಾಯಕರೊಬ್ಬರು ನೆಲೋಗಿ ಗ್ರಾಮದ ಸಿದ್ದಪ್ಪ ಅವರಳ್ಳಿ ಅವರ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ’ ಎಂದು ದೂರಿದರು.

‘ಈ ಕೂಡಲೇ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ಸಿಂಗ್‌ ಅವರು ಮುತುವರ್ಜಿ ವಹಿಸಿ ಜಮೀನು ಬಿಡಿಸಿಕೊಡಬೇಕು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಈ ಕುರಿತು ದೂರು ನೀಡಿದ್ದೇವೆ. ಕ್ರಮ ಕೈಗೊಂಡು ಜಮೀನು ಬಿಡಿಸಿಕೊಡಬೇಕು. ಇಲ್ಲವಾದರೆ ಸಮಾಜದವರು ಹೋಗಿ ಸಾಗುವಳಿಗೆ ಅನುಕೂಲ ಮಾಡಲಾಗುವುದು’ ಎಂದರು.

ಬಸವರಾಜ ಬೂದಿಹಾಳ, ರಮೇಶ ನಾಟೀಕಾರ, ಅಂಬು ಡಿಗ್ಗಿ, ರವಿ ಡೊಂಗರಗಾಂವ, ಸಂತೋಷ ತಳವಾರ, ಪ್ರೇಮ ಕೋಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ದೇವಾನಂದ ಆತ್ಮಹತ್ಯೆ ಪ್ರಕರಣ: ಆರೋಪಿ ರಕ್ಷಣೆ

‘ದೇವಾನಂದ ಆತ್ಮಹತ್ಯೆ ಪ್ರಕರಣದ ಆರೋಪಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದೆ. ಆದರೆ ಈವರೆಗೆ ಆತನನ್ನು ಬಂಧಿಸಿಲ್ಲ’ ಎಂದು ಅವ್ವಣ್ಣ ಮ್ಯಾಕೇರಿ ಅಸಮಾಧಾನ ವ್ಯಕ್ತಪಡಿಸಿದರು. ‘ಈಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆಯವರ ಜೊತೆ ಆರೋಪಿ ಚಹಾ ಕುಡಿದು ಮಜಾ ಮಾಡುತ್ತಿದ್ದ. ಆರೋಪಿಗಳನ್ನು ಪಕ್ಕಕ್ಕೆ ಇಟ್ಟುಕೊಂಡು ಅಪರಾಧಗಳಿಗೆ ಕಡಿವಾಣ ಹಾಕಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. ‘ಸಚಿವರ ಮಾತಿಗೆ ವಿಶ್ವಾಸ ಇಟ್ಟು ಪ್ರತಿಭಟನೆ ಕೈಬಿಟ್ಟಿದ್ದೆವು. ವೈಯಕ್ತಿಕ ಸರ್ಕಾರದಿಂದ ಪರಿಹಾರ ಹಾಗೂ ಕೆಲಸದ ಭರವಸೆ ನೀಡಿದ್ದರು. ಆದರೆ ಕೆಲಸ ಮಾತ್ರ ಕೊಡಿಸಿದ್ದಾರೆ. ಆತ್ಮಹತ್ಯೆಗೆ ಕಾರಣರಾದ ಪೊಲೀಸ್‌ ಅಧಿಕಾರಿಗಳನ್ನು ಒಂದು ವಾರ ಅಮಾನತು ಮಾಡಿ ಈಗ ಅದೇ ಠಾಣೆಗೆ ನಿಯೋಜನೆ ಮಾಡಿದ್ದಾರೆ’ ಎಂದರು. ‘ಸಚಿವರು ಮಾತಿಗೊಮ್ಮೆ ಸಂವಿಧಾನ ಬುದ್ಧ ಬಸವ ಅಂಬೇಡ್ಕರ್‌ ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ. ಈಗೆಲ್ಲ ಆ ಮಾತು ಎಲ್ಲಿಗೆ ಹೋದವು? ನಿಮ್ಮ ಮಾತಿಗೆ ನೀವು ಬದ್ಧರಾಗಬೇಕು’ ಎಂದರು.

- ‘ಆತ್ಮಹತ್ಯೆ ಪ್ರಕರಣ ತನಿಖೆಯಾಗಲಿ’

‘ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ಸಿಂಗ್‌ ಅವರ ಕಲಬುರಗಿ ನಿವಾಸದ ಮುಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮನೆಯ ಅಡುಗೆ ಸಿಬ್ಬಂದಿ ದೇವಪ್ಪ ಅವರ ಸಾವಿನ ಕುರಿತು ತನಿಖೆ ಮಾಡಬೇಕು’ ಎಂದು ಮುಖಂಡ ಬಸವರಾಜ ಹರವಾಳ ಆಗ್ರಹಿಸಿದರು. ‘ಶಾಸಕರ ಮನೆಯಲ್ಲಿರುವ ಅಡುಗೆ ಸಿಬ್ಬಂದಿ ಮಾಡುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ್ದ. ಆದ್ದರಿಂದ ಆತನಿಗೆ ಕೆಲಸ ಬಿಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂಬುದು ತಿಳಿದು ಬಂದಿದೆ. ಆತ್ಮಹತ್ಯೆ ಪ್ರಕರಣವನ್ನು ತನಿಖೆ ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಆತನ ಸಹೋದರನಿಗೆ ಸರ್ಕಾರ ನೌಕರಿ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT