ಮಂಗಳವಾರ, ನವೆಂಬರ್ 30, 2021
20 °C

‘ಸಾಲ ಮಾಡಿಯಾದರೂ ಅನುದಾನ ಕೊಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಭಾಗದ ಅಭಿವೃದ್ಧಿ ಕಾರ್ಯಗಳನ್ನು ಸರಾಗವಾಗಿ ನೆರವೇರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನವನ್ನು ₹ 2 ಸಾವಿರ ಕೋಟಿಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಕೊರೊನಾ ನೆಪ ಹೇಳಿ ಕಳೆದ ಬಾರಿಗಿಂತಲೂ ಕಡಿಮೆ ಅನುದಾನ ನಿಗದಿ ಮಾಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರ ಸಾಲ ಮಾಡಿಯಾದರೂ ₹ 2 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲೇ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕದ ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಬೀದರ್ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ. ಮಾನವ ಅಭಿವೃದ್ಧಿಯ ಸೂಚ್ಯಂಕದ ಹೆಚ್ಚಳವೇ ಅಭಿವೃದ್ಧಿಯ ನಿಜವಾದ ಮಾನದಂಡ. ಈ ಮಾನದಂಡದಲ್ಲಿ ಕಲ್ಯಾಣ ಕರ್ನಾಟಕ ಸಾಕಷ್ಟು ಹಿಂದುಳಿದಿರುವ ಬಗ್ಗೆ ಡಾ.ಡಿ.ಎಂ.ನಂಜುಂಡಪ್ಪ ಅವರು 1999ರಲ್ಲಿಯೇ ವರದಿ ನೀಡಿದ್ದರು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಕಲ್ಯಾಣ ಮಂಡಳಿಯನ್ನು ಹೆಚ್ಚು ಬಲಪಡಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಬೇಕು’ ಎಂದರು.

ಸಂಘ ಅಗತ್ಯವಿರಲಿಲ್ಲ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಸ್ತಿತ್ವದಲ್ಲಿರುವಾಗಲೇ ಬಸವರಾಜ ಪಾಟೀಲ ಸೇಡಂ ಅವರಿಗೆ ಸ್ಥಾನ ಕಲ್ಪಿಸುವುದಕ್ಕಾಗಿ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ’ವನ್ನು ಸ್ಥಾಪಿಸುವ ಅಗತ್ಯವೇ ಇರಲಿಲ್ಲ. ಇದರಿಂದಾಗಿ ಕೆಕೆಆರ್‌ಡಿಬಿಯು ಮುಂದಿನ ದಿನಗಳಲ್ಲಿ ತನ್ನ ಮಹತ್ವ ಕಳೆದುಕೊಳ್ಳಬಹುದು. ಅದಕ್ಕಾಗಿ, ಕೆಕೆಆರ್‌ಡಿಬಿಯನ್ನು ಬಲಪಡಿಸುವ ಕೆಲಸ ಈಗಿನಿಂದಲೇ ಆಗಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.