ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಕಾಏಕಿ ಪರೀಕ್ಷೆ ಮಂದೂಡಿಕೆ: ಕೆಪಿಎಸ್‌ಸಿ ನಿರ್ಧಾರಕ್ಕೆ ಅಭ್ಯರ್ಥಿಗಳು ಕಂಗಾಲು

Published : 14 ಸೆಪ್ಟೆಂಬರ್ 2024, 6:58 IST
Last Updated : 14 ಸೆಪ್ಟೆಂಬರ್ 2024, 6:58 IST
ಫಾಲೋ ಮಾಡಿ
Comments

ಕಲಬುರಗಿ: ಈಚೆಗೆ ನಡೆದ ಕೆಎಎಸ್‌ ಪರೀಕ್ಷೆಯಲ್ಲಿ ಭಾಷಾಂತರ ಮಾಡುವಲ್ಲಿ ಎಡವಟ್ಟು ಮಾಡಿದ್ದ ಕರ್ನಾಟಕ ಲೋಕಸೇವಾ ಆಯೋಗವು ಸೆ.14 ಮತ್ತು 15ರಂದು ನಡೆಸಲು ಉದ್ದೇಶಿಸಿದ್ದ ವಿವಿಧ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಪರೀಕ್ಷೆ ಮುಂದೂಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

14ರಂದು ಮಧ್ಯಾಹ್ನ 2ಕ್ಕೆ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 15ರಂದು ಬೆಳಿಗ್ಗೆ 10ರಿಂದ 11.30ರವರೆಗೆ ಸಾಮಾನ್ಯ ಪತ್ರಿಕೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ನಿರ್ದಿಷ್ಟ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಲ್ಲ ವಿದ್ಯಾರ್ಥಿಗಳು ಪ್ರವೇಶಪತ್ರ ಪಡೆದುಕೊಂಡು ಪರೀಕ್ಷೆ ಬರೆಯಲು ತೆರಳುತ್ತಿದ್ದರು.

ಏಕಾಏಕಿ ಶುಕ್ರವಾರ ಸಂಜೆ ವೇಳೆ ಪರೀಕ್ಷೆ ಮುಂದೂಡಲಾಗಿದೆ ಎಂದು ಕೆಪಿಎಸ್‌ಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವುದು, ವಿದ್ಯಾರ್ಥಿಗಳನ್ನು ಕಂಗಾಲಾಗಿಸಿದೆ. ಕಳೆದ ಕೆಎಎಸ್‌ ಪರೀಕ್ಷೆಯಿಂದ ಜಿಲ್ಲಾವಾರು ಪರೀಕ್ಷಾ ಕೇಂದ್ರ ನೀಡುವ ಬದಲು ಜಿಲ್ಲೆಗಳ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರವನ್ನು ಅದಲು ಬದಲು ಮಾಡಿ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಸಿಲುಕಿದಂತಾಗಿದೆ.

ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರ ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರ ಬೀದರ್‌ಗೆ ನೀಡಲಾಗಿದೆ. ರಾಯಚೂರು ಜಿಲ್ಲೆಯ ವಿದ್ಯಾರ್ಥಿಯೊಬ್ಬರ ಪರೀಕ್ಷಾ ಕೇಂದ್ರ ಬೀದರ್‌ನಲ್ಲಿ ಪರೀಕ್ಷಾ ಕೇಂದ್ರ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಮುಂಚಿತವಾಗಿ ಬಸ್‌ ಹಾಗೂ ರೈಲು ಬುಕ್‌ಮಾಡಿ ತೆರಳಿದ್ದಾರೆ. ಇನ್ನೂ ಕೆಲವರು ಬಸ್‌ ಟಿಕೆಟ್ ಬುಕ್‌ ಮಾಡಿದ್ದಾರೆ.

‘40 ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳಿಗೆ 1,68,452 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಕನಿಷ್ಟ 1.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಇತ್ತು. ಆತುರದ ನಿರ್ಣಯ ತೆಗೆದುಕೊಂಡು ಕೆಪಿಎಸ್‌ಸಿ ಪರೀಕ್ಷೆ ಮುಂದೂಡಿದೆ. ಆದರೆ ಎರಡು ದಿನಗಳ ಮೊದಲು ಪರೀಕ್ಷೆ ಮುಂದೂಡಿಕೆ ಮಾಡಲು ಆದೇಶ ಹೊರಡಿಸಿದ್ದರೆ ಅಭ್ಯರ್ಥಿಗಳ ಹಣ ಹಾಗೂ ಸಮಯ ಉಳಿತಾಯವಾಗುತ್ತಿತ್ತು’ ಎಂದು ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.

‘ಪ್ರತಿವರ್ಷ ಸರ್ಕಾರಿ ಹುದ್ದೆಗಳು ನೋಟಿಫಿಕೇಶನ್‌ ಆಗದೆ ಇರುವುದರಿಂದ ಹಲವು ವರ್ಷಗಳಿಂದ ವಿದ್ಯಾರ್ಥಿಗಳು ರೂಮ್‌ ಬಾಡಿಗೆ ಹಿಡಿದು ಓದುತ್ತಿದ್ದಾರೆ. ಮೊದಲೇ ಆರ್ಥಿಕ ಸಂಕಟದಲ್ಲಿರುವ ಅಭ್ಯರ್ಥಿಗಳಿಗೆ ಬೇರೆ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ ನೀಡಿ ಇನ್ನಷ್ಟು ಆರ್ಥಿಕ ಹೊರೆ ಮಾಡುತ್ತಿದ್ದಾರೆ’ ಎಂದು ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪರೀಕ್ಷೆ ಬರೆಯಲು ಕೊಪ್ಪಳಕ್ಕೆ ಪ್ರಯಾಣ ಬೆಳೆಸಿದ್ದೆ. ಸಂಜೆ 6ಕ್ಕೆ ಪರೀಕ್ಷೆ ಮುಂದೂಡಿಯಾಗಿದೆ ಎಂದು ತಿಳಿದು ಹತಾಶೆಯಾದೆ
ಉದಯಕುಮಾರ್ ಸೂರಿ ಪರೀಕ್ಷೆ ಎದುರಿಸುತ್ತಿದ ಅಭ್ಯರ್ಥಿ
ಕೈಗಡ ಹಣ ಪಡೆದುಕೊಂಡು ಪರೀಕ್ಷೆ ಬರೆಯಲು ಹೊಸಪೇಟೆಗೆ ತೆರಳುತ್ತಿದೆ. ಅರ್ಧ ದಾರಿಯಲ್ಲಿ ಪರೀಕ್ಷೆ ಇಲ್ಲ ಎಂದರೆ ಪರಿಸ್ಥಿತಿ ಏನು?
ರಾಮಲಿಂಗ ದೊಡ್ಡಮನಿ ಕಮಲಾಪುರದ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT