ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ವರ್ಗ ಸೌಲತ್ತುಗಳಿಂದ ವಂಚಿತ: ಶರ್ಮಾ

Last Updated 6 ಡಿಸೆಂಬರ್ 2020, 14:38 IST
ಅಕ್ಷರ ಗಾತ್ರ

ಕಲಬುರ್ಗಿ: ದೇಶದ ಸಂಪತ್ತು ಸೃಷ್ಟಿ ಮಾಡುತ್ತಿರುವ ಅಸಂಖ್ಯಾತ ಕಾರ್ಮಿಕರು, ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ದುಡಿಯುವ ವರ್ಗ ತನ್ನ ಹಕ್ಕು ಪಡೆದುಕೊಳ್ಳಲು ಸಂಘಟಿತರಾಗಬೇಕು ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ ಹೇಳಿದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಹಾಗೂ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಭಾನುವಾರ ನಗರದ ಸಂಘಟನೆಯ ಕಚೇರಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ನೋಂದಾಯಿತ ಫಲಾನುಭವಿ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.

ದೇಶದ ಸಂಪತ್ತು ಉತ್ಪಾದಿಸುವ ಶ್ರಮಜೀವಿಗಳ ಬದುಕು ಬೀದಿಯಲ್ಲಿದೆ. ಮುಗಿಲೆತ್ತರ ಮಹಲುಗಳನ್ನು ಕಟ್ಟುವ ಕಾರ್ಮಿಕರ ಕುಟುಂಬ ರಸ್ತೆ ಬದಿಯ ತಗಡಿನ ಶೆಡ್‌ಗಳಲ್ಲಿ ಉಸಿರಾಡುತ್ತಿದೆ. ಸರ್ಕಾರದ ಯೋಜನೆಗಳು ದಲ್ಲಾಳಿಗಳ ಪಾಲಾಗುತ್ತಿರುವುದರಿಂದ ಕಾರ್ಮಿಕರು ದಿವಾಳಿಯಾಗುತ್ತಿದ್ದಾರೆ. ಅಸಂಘಟಿತ ಗಣಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ ಕಾರ್ಮಿಕರು, ಸಿಮೆಂಟ್ ಕಂಪನಿಗಳ ಗುತ್ತಿಗೆ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಆಟೊ ಚಾಲಕರು, ಬೀದಿ ವ್ಯಾಪಾರಿಗಳು ಹೀಗೆ ದುಡಿಯುವ ಎಲ್ಲ ಜನರು ಎಐಯುಟಿಯುಸಿ ನೇತೃತ್ವದಲ್ಲಿ ಸಂಘಟಿತರಾಗುವ ಮೂಲಕ ಹಕ್ಕುಗಳಿಗಾಗಿ ಹೋರಾಟಕ್ಕೆ ಮುಂದಾಗಬೇಕು ಎಂದರು.

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ನಗರ ಕಾರ್ಯದರ್ಶಿ ಮಹೇಶ್ ಎಸ್.ಬಿ. ಮಾತನಾಡಿ, ಕೆಲಸದ ಸಂದರ್ಭಗಳಲ್ಲಿ ಅಪಘಾತಕ್ಕೀಡಾದ ಕಟ್ಟಡ ಕಾರ್ಮಿಕರು ಕಚೇರಿಗಳನ್ನು ಅಲೆದರೂ ಪರಿಹಾರ ಸಿಗುತ್ತಿಲ್ಲ. ಬಟ್ಟೆ ನೇಯಿಯುವವರಿಗೆ ತೊಡಲು ಬಟ್ಟೆಯಿಲ್ಲ. ಕೃಷಿ ಕಾರ್ಮಿಕರಾಗಿ ಹೊಲ ಗದ್ದೆಗಳಲ್ಲಿ ಬೆವರು ಸುರಿಸಿ ದೇಹದಲ್ಲಿ ತೊಗಲು ಚರ್ಮ ಮಾತ್ರ ಉಳಿಸಿಕೊಂಡ ಅನ್ನದಾತರು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬ್ರಿಟಿಷರ ಆಡಳಿತಕ್ಕಿಂತಲೂ ಕ್ರೂರ ಆಡಳಿತ ಇಂದು ಭಾರತದಲ್ಲಿ ಕಾಣುತ್ತಿದ್ದೇವೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರು ದಂಗೆ ಏಳುವ ಕಾಲ ದೂರವಿಲ್ಲ ಎಂದರು.

ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ಸದಸ್ಯ ಭಾಗಣ್ಣ ಬುಕ್ಕಾ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಮಲ್ಲಿನಾಥ ಸಿಂಘೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಟ್ಟಡ ಕಾರ್ಮಿಕರಾದ ಸುಭಾಷ ಗುತ್ತೇದಾರ್, ಪ್ರಕಾಶ, ನಾಗಯ್ಯ, ಶಬ್ಬೀರ್, ಬಷೀರ್ ಪಟೇಲ್, ಫರೀದಾ ಬೇಗಂ, ಜುಲೇಖಾ ಬೇಗಂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT