ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇವಾಂಶ ಕೊರತೆ: ಜೋಳ, ಕಡಲೆಗೆ ಕುತ್ತು

ನಾಲವಾರ ವಲಯ: 33,000 ಹೆಕ್ಟೇರ್‌ ಜೋಳ, 2,400 ಹೆಕ್ಟೇರ್‌ ಕಡಲೆ ಬಿತ್ತನೆ
Last Updated 22 ಡಿಸೆಂಬರ್ 2020, 2:44 IST
ಅಕ್ಷರ ಗಾತ್ರ

ವಾಡಿ: ಹಿಂಗಾರು ಹಂಗಾಮನಿನಲ್ಲಿ ಬಿತ್ತಿದ ಜೋಳವು ತೇವಾಂಶದ ಕೊರತೆಯಿಂದ ಹುಲುಸಾಗಿ ಬೆಳೆಯುತ್ತಿಲ್ಲ. ಮಳೆ ಹಾಗೂ ಮಂಜಿನ ಕೊರತೆಯು ಬೆಳೆಗಳ ಸಹಜ ಬೆಳವಣಿಗೆಗೆ ತೀವ್ರ ಹಿನ್ನಡೆ ಉಂಟುಮಾಡಿದೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.

ನಾಲವಾರ ವಲಯದಲ್ಲಿ ಈ ಬಾರಿ ದಾಖಲೆಯ 3,300 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದರೆ, 2,400 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಕೆಂಪು ಮಿಶ್ರಿತ ಭೂಮಿ ಹೊಂದಿರುವ ರೈತರು ಜೋಳದ ಮೊರೆ ಹೋದರೆ ಕಪ್ಪುಭೂಮಿಯ ರೈತರು ಕಡಲೆ ಬಿತ್ತನೆ ಮಾಡಿದ್ದಾರೆ. ಆದರೆ ಹಿಂಗಾರು ಮಳೆಯ ತೀವ್ರ ಕೊರತೆಯಿಂದ ಬೆಳೆಗಳು ಬಾಡಿ ಹೋಗುತ್ತಿದ್ದು, ರೈತರ ಮುಖ ಕಪ್ಪಿಟ್ಟಿದೆ.

ವಿವಿಧ ಹಳ್ಳಿಗಳಲ್ಲಿ ಕಳೆದ ತಿಂಗಳು ಬಿತ್ತನೆ ಮಾಡಲಾಗಿರುವ ಜೋಳಕ್ಕೆ ಒಣ ತೇವಾಂಶ ತೀವ್ರ ಸವಾಲು ಒಡ್ಡುತ್ತಿದೆ. ಮುಂಗಾರಿನಲ್ಲಿ ಆರ್ಭಟಿಸಿ ನಂತರ ಮರೆಯಾದ ಮಳೆ, ಹಿಂಗಾರಿನಲ್ಲಿ ಕೈಕೊಟ್ಟಿದೆ. ಅಕ್ಟೋಬರ್ ತಿಂಗಳಿಲ್ಲಿ ಕಾಣಿಸಿಕೊಂಡಿದ್ದ ಮಳೆ ನಂತರ 60 ದಿನಗಳು ಕಳೆದರೂ ಮರಳಿ ಬರಲಿಲ್ಲ. ಇದು ರೈತರನ್ನು ಆತಂಕಕ್ಕೆ ತಳ್ಳಿದೆ.

ಮುಂಗಾರಿನಲ್ಲಿ ಸತತ ಮಳೆಗೆ ಸಿಲುಕಿ ಹಾಳಾಗಿದ್ದ ತೊಗರಿ, ಹತ್ತಿಯನ್ನು ಹರಗಿ ಹಿಂಗಾರು ಜೋಳ ಬಿತ್ತನೆ ಮಾಡಲಾಗಿದೆ. ಮುಂಗಾರಿನಲ್ಲಾದ ಆರ್ಥಿಕ ನಷ್ಟ ಹಿಂಗಾರು ಬೆಳೆಯಲ್ಲಾದರೂ ಸರಿದೂಗಲಿ ಎಂಬ ಆಶಯದಿಂದ ಜೋಳ ಬಿತ್ತಿದ್ದಾರೆ. ಆದರೆ, ಮಳೆಯ ಕೊರತೆಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲವೆಡೆ ಬಿತ್ತನೆ ಮಾಡಿದ್ದ ಬೀಜಗಳು ನೆಲ ಬಿಟ್ಟು ಮೇಲೇಳದೇ ಮುಟುರಿ ಹೋಗಿವೆ. ಬೆಳೆಯ ಸಾಲುಗಳ ನಡುವೆ ಅಂತರ ಸೃಷ್ಟಿಸಿವೆ. ಮುಂಗಾರಿನಲ್ಲಿ ಸುರಿದ ಸತತ ಮಳೆಯಿಂದ ಜಮೀನುಗಳು ಸರಿಯಾಗಿ ಹದಗೊಳ್ಳದೇ ಈಗ ಬಿರುಸಿಗೊಂಡಿವೆ. ಹದಗೊಂಡ ಭೂಮಿ ಮಾತ್ರ ತೇವಾಂಶ ಹಿಡಿದಿಟ್ಟುಕೊಂಡು ಬೆಳೆಗಳಿಗೆ ಬೇಕಾದ ಸೂಕ್ತ ವಾತಾವಾರಣ ನೀಡುತ್ತದೆ. ಒಣಗಿ ಗಟ್ಟಿಯಾದ ಭೂಮಿ ಜೋಳದ ಬೆಳವಣಿಗೆಗೆ ಅಡ್ಡಪರಿಣಾಮ ಬೀರುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.

ಬಾವಿ ಹೊಂದಿರುವ ಲಾಡ್ಲಾಪುರ, ಯಾಗಾಪೂರ, ಹಣ್ಣಿಕೇರಾ ಹಾಗೂ ತಾಂಡಾಗಳ ಕೆಲವು ರೈತರು ಸ್ಪ್ರಿಂಕ್ಲರ್‌ಗಳ ಮೂಲಕ ನೀರುಣಿಸಿ ಬೆಳೆಗೆ ಜೀವ ತುಂಬುತ್ತಿದ್ದಾರೆ.

ಇನ್ನೊಂದೆಡೆ, ತೇವಾಂಶದ ಕೊರತೆ ಎದುರಿಸುತ್ತಿರುವ ಜೋಳಕ್ಕೆ ಚಳಿಗಾಲದ ಮಂಜು ಕೂಡ ಕೈಕೊಟ್ಟಿದೆ. ಮಳೆ ಕೈಕೊಟ್ಟರೆ ಚಳಿಯ ಮಂಜಿನ ಆಸರೆಯಲ್ಲಿ ಜೋಳ ಬೆಳೆಯುತ್ತದೆ. ವಾತಾವರಣದ ಇಬ್ಬನಿ ಹೀರಿಕೊಂಡು ಬೆಳೆಯುವ ಸಾಮರ್ಥ್ಯ ಜೋಳಕ್ಕೆ ಇದೆ. ಆದರೆ, ಈಗ ಅದೂ ಕೈಗೂಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT