ಭಾನುವಾರ, ಆಗಸ್ಟ್ 14, 2022
22 °C

ಬಳಕೆಯಾಗದ ಕೆಕೆಆರ್‌ಡಿಬಿ ಅನುದಾನ; ಯೋಜನಾ ಇಲಾಖೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಘೋಷಿತ ₹ 1500 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಜನಪ್ರತಿನಿಧಿಗಳು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಬಿಡುಗಡೆಯಾದ ಅನುದಾನದ ಪೈಕಿ ಮಂಡಳಿಯು ಪ್ರಸಕ್ತ ವರ್ಷದ ನವೆಂಬರ್‌ ಅಂತ್ಯಕ್ಕೆ ಕೇವಲ ₹533.45 ಕೋಟಿ ಖರ್ಚು ಮಾಡಿದೆ ಎಂದು ಯೋಜನಾ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.

ಅಗತ್ಯ ಅನುದಾನ ನೀಡಿದರೂ ಕಡಿಮೆ ಖರ್ಚು ಮಾಡಿರುವುದನ್ನು ಆಕ್ಷೇಪಿಸಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಅವರು ಕೆಕೆಆರ್‌ಡಿಬಿ ಕಾರ್ಯದರ್ಶಿ ಡಾ.ಎನ್‌.ವಿ. ಪ್ರಸಾದ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಒಟ್ಟು ಬಿಡುಗಡೆಯಾದ ಹಣದ ಪೈಕಿ ಶೇ 78ರಷ್ಟು ಹಣವನ್ನು ಖರ್ಚು ಮಾಡದಿದ್ದರೆ ಮುಂದಿನ ಕಂತು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ನೀವೇ ಹೊಣೆಗಾರರಾಗುತ್ತೀರಿ’ ಎಂದು ಪ್ರಸಾದ್‌ ಅವರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.

‘2,344 ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿದ್ದು, ಬಾಕಿ ಇರುವ ಬಿಲ್ಲುಗಳನ್ನು ಪಾವತಿಸಿ ಆರ್ಥಿಕ ಪ್ರಗತಿಯನ್ನು ತೋರಿಸಬೇಕು’ ಎಂದು ಅವರು ತಾಕೀತು ಮಾಡಿದ್ದಾರೆ.

‘ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ 1200 ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು. ಹೀಗಾಗಿ  ಕೆಲಸಗಳು ನಿಂತಿದ್ದವು. ಈಗ ಎಲ್ಲ ಕಾಮಗಾರಿಗಳು ಆರಂಭವಾಗಿದ್ದು, ನಿಗದಿತ ಸಮಯದಲ್ಲಿ ಮುಕ್ತಾಯವಾಗಲಿವೆ. ಅದಕ್ಕೆ ತಕ್ಕಂತೆ ಹಣವೂ ವೆಚ್ಚವಾಗಲಿದೆ’ ಎಂದು ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ  ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು