ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ; ಮುಂದುವರಿದ ಗೊಂದಲ

ಎಐಸಿಸಿ ಅಧ್ಯಕ್ಷತೆ ಜೊತೆಗೆ ಇಂಡಿಯಾ ಒಕ್ಕೂಟದ ಜವಾಬ್ದಾರಿ ಹೆಚ್ಚಿಸಿದ ಕಾರ್ಯಭಾರ
Published 15 ಜನವರಿ 2024, 21:31 IST
Last Updated 15 ಜನವರಿ 2024, 21:31 IST
ಅಕ್ಷರ ಗಾತ್ರ

ಕಲಬುರಗಿ: ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಈವರೆಗೂ ನಿಗೂಢವಾಗಿಯೇ ಉಳಿದಿದೆ.

ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆಯೂ ಇನ್ನೂವರೆಗೆ ಸ್ಪಷ್ಟ ಸೂಚನೆಗಳು ಕಾಣಿಸಿಕೊಳ್ಳದ ಕಾರಣದಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮುಂದುವರಿದಿದೆ. ಖರ್ಗೆ ಅವರೂ ತಾವು ಸ್ಪರ್ಧಿಸುವ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಖರ್ಗೆ ಅವರು ಪಕ್ಷದ ಅಧ್ಯಕ್ಷ ಹುದ್ದೆಯ ಮಹತ್ವದ ಜವಾಬ್ದಾರಿಯ ಜೊತೆಗೆ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ‘ದ ಅಧ್ಯಕ್ಷರೂ ಆಗಿರುವುದರಿಂದ ದೇಶದಾದ್ಯಂತ ಸಂಚರಿಸಿ ಸಮನ್ವಯ ಸಾಧಿಸಬೇಕಿದೆ. ಹೀಗಾಗಿ, ಅವರು ಸ್ಪರ್ಧಿಸುವ ಬಗ್ಗೆ ಪಕ್ಷದ ನಾಯಕರಲ್ಲಿಯೇ ಅನುಮಾನಗಳು ವ್ಯಕ್ತವಾಗಿವೆ. ಈ ಬಾರಿ ಸ್ಪರ್ಧಿಸಬೇಕು ಎಂದು ಹಲವು ಮುಖಂಡರು ಭೇಟಿಯಾಗಿ ಖರ್ಗೆ ಅವರಿಗೆ ಮನವಿ ಮಾಡಿದ್ದರೂ, ಇನ್ನೂ ಖಚಿತ ಭರವಸೆ ನೀಡಿಲ್ಲ.

ಎರಡು ವಾರಗಳ ಹಿಂದೆ ಕೆಪಿಸಿಸಿ ಸೂಚನೆ ಮೇರೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಬಿ. ನಾಗೇಂದ್ರ ಅವರು ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಭೇಟಿ ಮಾಡಿ ಲೋಕಸಭೆಗೆ ಸ್ಪರ್ಧಿಸಲಿರುವ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಪಡೆದು ಹೋಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿ, ಮತದಾರರ ಕೈ–ಕಾಲು ಹಿಡಿದು ಮತ ಹಾಕಿಸಬೇಕು ಎಂಬ ಮಾತುಗಳನ್ನು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್‌. ಪಾಟೀಲ ಅವರು ಸಾರ್ವಜನಿಕವಾಗಿ ಆಡಿದ್ದರ ಹಿಂದೆ ಖರ್ಗೆ ಅವರೇ ಅಭ್ಯರ್ಥಿಯಾಗಬೇಕು ಎಂಬ ಬಲವಾದ ಕೂಗು ಕೇಳಿಬರುತ್ತಿದೆ.

‘ಎಲ್ಲರೂ ಒಕ್ಕೊರಲಿನಿಂದ ಮಲ್ಲಿಕಾರ್ಜುನ ಖರ್ಗೆ ಅವರೇ ಈ ಬಾರಿಯೂ ಸ್ಪರ್ಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದನ್ನು ರಾಜ್ಯ ಘಟಕದ ಅಧ್ಯಕ್ಷರ ಮೂಲಕ ಹೈಕಮಾಂಡ್‌ಗೆ ಕಳಿಸಲಾಗುತ್ತದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ‘ಪ್ರಜಾವಾಣಿ‘ಗೆ ತಿಳಿಸಿದರು.

ಸುದೀರ್ಘ ಅವಧಿಯವರೆಗೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದ ಖರ್ಗೆ ಅವರು 2009, 2014ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರು ಒಂದು ಕಾಲದಲ್ಲಿ ಅವರ ಶಿಷ್ಯರಾಗಿದ್ದ ಬಿಜೆಪಿಯ ಡಾ. ಉಮೇಶ ಜಾಧವ ಅವರ ಎದುರು ಭಾರಿ ಮತಗಳ ಅಂತರದಿಂದ ಸೋಲುಂಡರು. ಈ ಸೋಲು ಖರ್ಗೆ ಅವರಿಗೆ ಭಾರಿ ನಿರಾಸೆಯನ್ನು ಮೂಡಿಸಿತ್ತು. ಇದನ್ನು ಹಲವು ಬಾರಿ ವೇದಿಕೆಗಳಲ್ಲಿಯೂ ವ್ಯಕ್ತಪಡಿಸಿದ್ದಾರೆ. ಅದಾದ ಬಳಿಕ ರಾಜ್ಯಸಭೆ ಸದಸ್ಯತ್ವ ಪಡೆಯಲೂ ಹಿಂದೇಟು ಹಾಕಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

‘ಖರ್ಗೆ ಅವರು ಕಲಬುರಗಿಯಿಂದ ಸ್ಪರ್ಧಿಸಿದರೆ ಅವರ ಗೆಲುವಿನ ಜೊತೆಗೆ ರಾಜ್ಯದ ಇತರೆ ಸ್ಥಾನಗಳನ್ನೂ ಗೆಲ್ಲಿಸಿಕೊಂಡು ಬರುವ ಛಾತಿ ಅವರಿಗಿದೆ. ಹೀಗಾಗಿ, ಅವರೇ ಸೂಕ್ತ ಅಭ್ಯರ್ಥಿ ಎನ್ನುತ್ತಾರೆ’ ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು.

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಅಧ್ಯಕ್ಷರೇ ನಿರ್ಣಯ ಕೈಗೊಳ್ಳಬೇಕು: ಪ್ರಿಯಾಂಕ್

‘ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪರ್ಧಿಸಬೇಕು ಎಂಬುದು ಪಕ್ಷದ ಜಿಲ್ಲಾ ಮಟ್ಟದ ನಾಯಕರು ಕಾರ್ಯಕರ್ತರ ಅಪೇಕ್ಷೆಯಾಗಿದೆ. ಆದರೆ ಇದೀಗ ಅವರಿಗೆ ಕಾರ್ಯಭಾರವೂ ಹೆಚ್ಚಾಗಿದೆ. ತಾವು ಸ್ಪರ್ಧಿಸುವ ಬಗ್ಗೆ ಅಧ್ಯಕ್ಷರೇ ನಿರ್ಣಯ ಕೈಗೊಳ್ಳಬೇಕು’ ಎಂದು ಖರ್ಗೆ ಅವರ ಪುತ್ರರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ಮಲ್ಲಿಕಾರ್ಜುನ ಖರ್ಗೆ ಅವರು ‘ಇಂಡಿಯಾ’ ಒಕ್ಕೂಟದ ನೇತೃತ್ವ ವಹಿಸಿದ್ದರಿಂದ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಜವಾಬ್ದಾರಿಗಳೂ ಇವೆ. ಹೀಗಾಗಿ ಕಲಬುರಗಿಯಿಂದ ಸ್ಪರ್ಧಿಸಬೇಕೇ ಬೇಡವೇ ಎಂಬ ನಿರ್ಣಯವನ್ನು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರು ಅವರಿಗೇ ಬಿಟ್ಟಿದ್ದಾರೆ. ಫೆಬ್ರುವರಿ ಮಧ್ಯಭಾಗದಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದರು. ‘ಕಲಬುರಗಿ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುವ ಬಗ್ಗೆ ಚಿಂತನೆ ಮಾಡಿಲ್ಲ’ ಎಂದು ಪ್ರಿಯಾಂಕ್ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT