ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣಾ ಫಲಿತಾಂಶ: ಕಲ್ಯಾಣದಲ್ಲಿ ‘ಕೈ’ ಭರ್ಜರಿ ಮತಬೇಟೆ

ಮತಗಳಿಕೆ: ಶೇ 7.29 ವೃದ್ಧಿಸಿಕೊಂಡ ಕಾಂಗ್ರೆಸ್‌ * ಶೇ 5.72 ಕಳೆದುಕೊಂಡ ಬಿಜೆಪಿ
Published 7 ಜೂನ್ 2024, 6:13 IST
Last Updated 7 ಜೂನ್ 2024, 6:13 IST
ಅಕ್ಷರ ಗಾತ್ರ

ಕಲಬುರಗಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಕನಿಷ್ಠ ಒಂದು ಕ್ಷೇತ್ರವನ್ನೂ ತನ್ನದಾಗಿಸಿಕೊಳ್ಳಲು ಸಾಧ್ಯವಾಗದೇ ನೆಲಕಚ್ಚಿದ್ದ ಕಾಂಗ್ರೆಸ್‌, ಈ ಬಾರಿ ‘ಫಿನಿಕ್ಸ್‌’ ನಂತೆ ಪುಟಿದೆದ್ದು ಬಂದಿದೆ. ‘ಕಲ್ಯಾಣ’ದ ಎಲ್ಲಾ ಐದು ಕ್ಷೇತ್ರಗಳನ್ನೂ ಗೆಲ್ಲುವ ಮೂಲಕ ‘ಕಮಲ’ವನ್ನು ಹೊಸಕಿಹಾಕಿದೆ.

ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ‘ಕಲ್ಯಾಣ’ದಲ್ಲಿ ಕಾಂಗ್ರೆಸ್‌ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಮತಗಳಿಕೆ ಪ್ರಮಾಣವನ್ನು ಶೇ 7.29ರಷ್ಟು ಹೆಚ್ಚಿಸಿಕೊಂಡಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಸೋಲು ಕಂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರ ತವರಿನಲ್ಲಿ ಈಗ ಪಕ್ಷದ ಬೇರನ್ನು ಇನ್ನಷ್ಟು ಆಳಕ್ಕಿಳಿಸಿದೆ.

ಇನ್ನೊಂದೆಡೆ ಕಳೆದ ಬಾರಿ ಎಲ್ಲಾ ಐದು ಸ್ಥಾನಗಳನ್ನೂ ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಮತಗಳಿಕೆಯಲ್ಲಿ ಶೇ 5.72ರಷ್ಟು ಕುಸಿತ ಕಂಡಿದ್ದರಿಂದ ‘ಕಲ್ಯಾಣ’ದ ಕೊಳದಲ್ಲಿ ‘ಕಮಲ’ ಮುದುಡಿ ಹೋಗಿದೆ. ಕಳೆದ ಚುನಾವಣೆಯಲ್ಲಿ ‘ಕೈ’ ನಾಯಕರಿಗೆ ಎದುರಾಗಿದ್ದ ದುಸ್ಥಿತಿ, ಈ ಬಾರಿ ‘ಕೇಸರಿ ಪಡೆ’ಯ ನಾಯಕರಿಗೆ ಬಂದಿದ್ದು, ಇತಿಹಾಸ ಮರುಕಳಿಸಿದಂತಾಗಿದೆ.

ಹೆಚ್ಚಾದ ‘ಕೈ’ಬಲ: 2019ರ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣದ ಐದು ಕ್ಷೇತ್ರಗಳಲ್ಲಿ ಒಟ್ಟು ಚಲಾವಣೆಗೊಂಡಿದ್ದ 58,43,186 ಮತಗಳ ಪೈಕಿ ಕಾಂಗ್ರೆಸ್‌ಗೆ 25,83,065 ಮತಗಳು (ಶೇ 44.20) ಬಂದಿದ್ದವು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜೊತೆಗೂಡಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ಸಂದರ್ಭದಲ್ಲಿ ‘ಕಲ್ಯಾಣ’ದ ಏಳು ಜಿಲ್ಲೆಗಳ ಒಟ್ಟು 41 ವಿಧಾನಸಭಾ ಕ್ಷೇತ್ರಗಳಲ್ಲಿ (ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಹರಪನಹಳ್ಳಿಯೂ ಸೇರಿ) ಕಾಂಗ್ರೆಸ್‌ನ 21 ಹಾಗೂ ಜೆಡಿಎಸ್‌ನ ನಾಲ್ವರು ಶಾಸಕರಿದ್ದರು. ಹೀಗಿದ್ದರೂ ಆಗ ‘ಕೈ’ಗೆ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.

‘ಗ್ಯಾರಂಟಿ’ ಯೋಜನೆಗಳ ಜನಪ್ರಿಯತೆಯಿಂದಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ಸಾಧಿಸಿತ್ತು. ಇದರಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಲ್ಯಾಣದಲ್ಲಿ ಕಾಂಗ್ರೆಸ್‌ ಶಾಸಕರ ಬಲ 27ಕ್ಕೆ ಹೆಚ್ಚಾಗಿತ್ತು. ಎಐಸಿಸಿ ಅಧ್ಯಕ್ಷ ಸ್ಥಾನವೂ ಈ ಭಾಗದ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲನ್ನೇರಿದ್ದರಿಂದ ಕಾಂಗ್ರೆಸ್‌ ಪಾಳಯದ ಶಕ್ತಿಯನ್ನು ವೃದ್ಧಿಸಿತ್ತು. ಇದರ ಪರಿಣಾಮ ಎಂಬಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ‘ಕಲ್ಯಾಣ’ದಲ್ಲಿ ಚಲಾವಣೆಗೊಂಡ ಒಟ್ಟು 65,71,268 ಮತಗಳ ಪೈಕಿ 33,83,960 ಮತಗಳು ‘ಕೈ’ ಪಾಲಾಗಿವೆ. ಶೇ 51.49ರಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಕಳೆದ ಬಾರಿಗಿಂತ ಶೇ 7.29ರಷ್ಟು ಹೆಚ್ಚು ಮತಗಳಿಸುವ ಮೂಲಕ ಎಲ್ಲಾ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ವಿಜಯ ಪತಾಕೆಯನ್ನು ಹಾರಿಸಿದೆ.

ಮುದುಡಿದ ತಾವರೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಗೊಂಡ ಒಟ್ಟು 58,43,186 ಮತಗಳ ಪೈಕಿ 30,04,000 ಮತಗಳೊಂದಿಗೆ (ಶೇ 51.41) ಬಿಜೆಪಿ ಎಲ್ಲಾ ಐದು ಕ್ಷೇತ್ರಗಳಲ್ಲೂ ‘ಕೇಸರಿ’ ಬಾವುಟವನ್ನು ಹಾರಿಸಿತ್ತು. ಆಗ ಕಲ್ಯಾಣ ವ್ಯಾಪ್ತಿಯಲ್ಲಿ ಬಿಜೆಪಿಯ 16 ಶಾಸಕರಿದ್ದರು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಬಿಜೆಪಿಯು ಚಲಾವಣೆಗೊಂಡ ಒಟ್ಟು 65,71,268 ಮತಗಳ ಪೈಕಿ 30,02,750 (ಶೇ 45.69) ಪಡೆದುಕೊಂಡಿದೆ. ಈ ಬಾರಿ ಬಿಜೆಪಿಯ 11 ಹಾಗೂ ಜೆಡಿಎಸ್‌ನ ಮೂವರು ಶಾಸಕರಿದ್ದರೂ ಯಾವೊಬ್ಬ ‘ಮೈತ್ರಿ ಅಭ್ಯರ್ಥಿ’ಯನ್ನೂ ಗೆಲುವಿನ ದಡಕ್ಕೆ ತರಲು ಸಾಧ್ಯವಾಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ನಾಮಬಲವನ್ನೇ ನೆಚ್ಚಿಕೊಂಡಿದ್ದ ಬಿಜೆಪಿಯು ಮತಗಳಿಕೆಯಲ್ಲಿ ಶೇ 5.72ರಷ್ಟು ಕುಸಿತ ಕಂಡು ‘ಶೂನ್ಯ ಸಾಧನೆ’ ಮಾಡಿರುವುದನ್ನು ನೋಡಿದರೆ, ‘ಕಲ್ಯಾಣ’ದಲ್ಲಿ ಮೋದಿ ಜನಪ್ರಿಯತೆ ತಗ್ಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಕಲ್ಯಾಣ ಕರ್ನಾಟಕ ನಕ್ಷೆ

ಕಲ್ಯಾಣ ಕರ್ನಾಟಕ ನಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT