ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಹಿರಿಯ ನಾಗರಿಕರು, ಅಂಗವಿಕಲರಿಂದ ಮತದಾನ

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಜಿಲ್ಲಾ ಚುನಾವಣಾಧಿಕಾರಿ ಚಾಲನೆ
Published 26 ಏಪ್ರಿಲ್ 2024, 4:29 IST
Last Updated 26 ಏಪ್ರಿಲ್ 2024, 4:29 IST
ಅಕ್ಷರ ಗಾತ್ರ

ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಪ್ರಯುಕ್ತ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆಗೆ ಗುರುವಾರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಚಾಲನೆ‌ ನೀಡಿದರು.

ಕಲಬುರಗಿ ಉತ್ತರ ಕ್ಷೇತ್ರಕ್ಕೆ ಸೇರಿದ ನೆಹರು ಗಂಜ್ ಪ್ರದೇಶದ ಗಾಂಧಿ ನಗರದ ನಿವಾಸಿ ಶಾಂತಮ್ಮ (85) ಅವರ ಮನೆಗೆ ಚುನಾವಣಾ ಸಿಬ್ಬಂದಿ ಮತ್ತು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಭುವನೇಶ ಪಾಟೀಲ ಅವರೊಂದಿಗೆ ತೆರಳಿ ಮನೆಯಿಂದ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಜೀವಿಗಳ ಆರೋಗ್ಯ ವಿಚಾರಿಸಿದರು.

ಕಲಬುರಗಿ ದಕ್ಷಿಣ ಕ್ಷೇತ್ರದ ಜಯನಗರ ಮತಗಟ್ಟೆ ಸಂಖ್ಯೆ 220ಕ್ಕೆ ಸೇರಿದ ಮತದಾರರ‌ ಮನೆಯಿಂದ ಮತದಾನ ಕಾರ್ಯ ವೀಕ್ಷಿಸಿದರು. ನಂತರ ಇದೇ ಕ್ಷೇತ್ರದ ರೆಹಮತ್‌ ನಗರ ನಿವಾಸಿ ಜುಬೇದಾಬೀ ಮತ ಚಲಾವಣೆ ಪ್ರಕ್ರಿಯೆಗೂ ಸಾಕ್ಷಿಯಾದರು.

ಕಲಬುರಗಿ ಗ್ರಾಮೀಣ ಕ್ಷೇತ್ರದ ಕುಸನೂರ ತಾಂಡಾ ನಿವಾಸಿ ಚಾಂದಿಬಾಯಿ ಖೂಬು (96) ಅವರು ಮನೆಯಿಂದ ಮತದಾನ ಮಾಡಿದರು.

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಳೇ ರಾಘವೇಂದ್ರ ಕಾಲೊನಿ‌ ನಿವಾಸಿ ವಿಮಲಾಬಾಯಿ (85) ಮತ ಚಲಾಯಿಸಿದರು. ಚಿತ್ತಾಪುರ ಕ್ಷೇತ್ರದ ಲಾಡ್ಲಾಪುರದಲ್ಲಿ ಪಾರ್ಶ್ವವಾಯು ಪೀಡಿತ ವಿಜ್ಜಮ್ಮ ಸಾಬಣ್ಣಾ ಲಾಡ್ಲಾಪುರ (75) ಮನೆಯಲ್ಲಿಯೇ ತಮ್ಮ ಹಕ್ಕು ಚಲಾಯಿಸಿದರು. ಚುನಾವಣಾಧಿಕಾರಿ ನವೀನ್ ಯು. ಉಪಸ್ಥಿತರಿದ್ದರು.

ಅಫಜಲಪುರ ಪಟ್ಟಣದಲ್ಲಿ ಪುನರ್ವಸತಿ ಕಾರ್ಯಕರ್ತ ಜಬ್ಬಾರ್ ಅಲಿ (45) ಅವರು ಮನೆಯಲ್ಲಿಯೇ ಮತದಾನ ಮಾಡಿದರು. ಶೇ 75 ರಷ್ಟು ಚಲನವಲನ‌ ಅಂಗವಿಕಲತೆ ಹೊಂದಿರುವ ಅವರು ಇತ್ತೀಚೆಗೆ ರಸ್ತೆ ಅಪಘಾತಕ್ಕೂ ತುತ್ತಾದ ಕಾರಣ ಮನೆಯಿಂದ ಮತದಾನಕ್ಕೆ ಆಯ್ಕೆ ಮಾಡಿಕೊಂಡಿದ್ದರು.

ಅಫಜಲಪುರ ಕ್ಷೇತ್ರದ ಗೊಬ್ಬರವಾಡಿ ನಿವಾಸಿ 87 ವರ್ಷದ ವಯೋವೃದ್ಧೆ ಭಾಗೀರಥಿ ಮತ್ತು ಚಿಣಮಗೇರಾ ಗ್ರಾಮದ 86 ವರ್ಷದ ವೃದ್ದೆ ತಿಮ್ಮವ್ವ ಮತ ಚಲಾಯಿಸಿದರು.

ಸೇಡಂ‌‌ ವಿಧಾನಸಭಾ ಕ್ಷೇತ್ರದ ಅಳ್ಳೊಳ್ಳಿಯಲ್ಲಿ ಅಂಗವಿಕಲೆ ವಿಜಯಲಕ್ಷ್ಮಿ ಸಾಬಣ್ಣ (45) ಮತ್ತು ನಾಡೆಪಲ್ಲಿ ಗ್ರಾಮದ 85 ವರ್ಷ ಮೇಲ್ಪಟ್ಟ ದೇವಮ್ಮಾ ನರಸಪ್ಪ ಮತ ಚಲಾಯಿಸಿದರು.

ಕಳೆದ‌ ವಿಧಾನಸಭಾ ಚುನಾವಣೆ‌ ಸಂದರ್ಭದಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಆಟೊ ವ್ಯವಸ್ಥೆ, ಮತಗಟ್ಟೆಯಲ್ಲಿ ತ್ರಿಚಕ್ರ ವಾಹನ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಚುನಾವಣಾ ಆಯೋಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಮತದಾನ ಪ್ರಮಾಣ ಹೆಚ್ಚಿಸಲು ಮನೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ.

ಸಕಲ ಸಿದ್ಧತೆ: ಜಿಲ್ಲೆಯಾದ್ಯಂತ ಗುರುವಾರದಿಂದ ಎರಡು ದಿನಗಳ ಕಾಲ ನಡೆಯಲಿರುವ ಮನೆಯಿಂದ ಮತದಾನ ಪ್ರಕ್ರಿಯೆಗೆ ಜಿಲ್ಲೆಯಾದ್ಯಂತ ಸುಮಾರು 81 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದೊಂದಿಗೆ ಪಿಆರ್‌ಓ, ಎಪಿ‌ಆರ್‌ಓ, ಮೈಕ್ರೊ ವೀಕ್ಷಕರು, ಸೆಕ್ಟರ್ ಅಧಿಕಾರಿಗಳು ಇರಲಿದ್ದು, ಮನೆ‌ ಮನೆಗೆ ಪೋಸ್ಟಲ್ ಬಾಕ್ಸ್‌ನೊಂದಿಗೆ ತೆರಳಿ ಮತದಾನ ಮಾಡಿಸಿಕೊಳ್ಳಲಿದ್ದಾರೆ. ಇಲ್ಲಿ ಮತದಾನದ ಗೋಪ್ಯತೆ ಸಹ ಕಾಪಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.

1545 ಜನ ಮನೆಯಿಂದ ಮತದಾನ

ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 18233 ಹಿರಿಯ ನಾಗರಿಕರು ಮತ್ತು 22123 ಅಂಗವಿಕಲರಿದ್ದು 1149 ಹಿರಿಯ ನಾಗರಿಕರು ಮತ್ತು 396 ಅಂಗವಿಕಲರು ಸೇರಿದಂತೆ ಒಟ್ಟು 1545 ಜನ ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಕ್ಷೇತ್ರವಾರು ಹಿರಿಯ ನಾಗರಿಕರು ಮತ್ತು ಅಂಗವಿಕಲಕರು ಕ್ರಮವಾಗಿ ಅಫಜಲಪುರ 177 ಮತ್ತು 90 ಚಿತ್ತಾಪುರ 24 ಮತ್ತು 15 ಕಲಬುರಗಿ ದಕ್ಷಿಣ 149 ಮತ್ತು 28 ಕಲಬುರಗಿ ಗ್ರಾಮೀಣ 151 ಮತ್ತು 43 ಕಲಬುರಗಿ ಉತ್ತರ 121 ಮತ್ತು 20 ಜೇವರ್ಗಿ 164 ಮತ್ತು 74 ಸೇಡಂ 200 ಮತ್ತು 91 ಹಾಗೂ ಗುರುಮಠಕಲ್ 163 ಮತ್ತು 35 ಜನ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT