ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಚೀಟಿಗಳಲ್ಲಿ ಬಾಪೂ ನೆನಪು

ಅಖ್ತರ್ ಅಲಿ ಮುದ್ಗಲ್ ಅವರ ಗಾಂಧೀಜಿ ಪ್ರೀತಿ
Last Updated 1 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಸತ್ಯ, ಅಹಿಂಸೆ, ಶಾಂತಿ ಮತ್ತು ಸರಳ ವ್ಯಕ್ತಿತ್ವದಿಂದ ಜಗತ್ತಿನ ಮನೆ ಮಾತಾದ ಗಾಂಧೀಜಿ ವಿಚಾರಧಾರೆ ಇಂದಿಗೂ ಪ್ರಸ್ತುತ. ಮಹಾತ್ಮನ ಗೌರವಾರ್ಥಭಾರತ, ಇಂಗ್ಲೆಂಡ್, ಅಮೆರಿಕಾ ಸೇರಿದಂತೆ ಜಗತ್ತಿನ 150ಕ್ಕೂ ಹೆಚ್ಚು ರಾಷ್ಟ್ರಗಳು ಅವರ ಚಿತ್ರವಿರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿವೆ. ಜಗತ್ತಿನಲ್ಲಿ ಇಷ್ಟು ದೊಡ್ಡ ಗೌರವಕ್ಕೆ ಪಾತ್ರರಾದ ಅಪರೂಪದ ನಾಯಕ ಅವರು.

ರಾಷ್ಟ್ರಪಿತನ ಚಿತ್ರವುಳ್ಳ ಇಂಥ ಅಪರೂಪದ ಅಂಚೆ ಚೀಟಿಗಳನ್ನು ಸಂಗ್ರಹಿಸಿ, ಅವರ ವಿಚಾರಧಾರೆ, ಚಿಂತನೆಗಳನ್ನು ಎಲ್ಲರಿಗೂ ತಲುಪಿಸುವ ಕಾರ್ಯದಲ್ಲಿ ಕಲಬುರ್ಗಿಯ ಬನಶಂಕರಿ ಕಾಲೊನಿಯ ನಿವಾಸಿ ಅಖ್ತರ್ ಅಲಿ ಮುದ್ಗಲ್ ನಿರತರಾಗಿದ್ದಾರೆ. 30ಕ್ಕೂ ಹೆಚ್ಚು ರಾಷ್ಟ್ರಗಳು ಬಿಡುಗಡೆ ಮಾಡಿರುವ ಗಾಂಧೀಜಿ ಬಾವಚಿತ್ರವುಳ್ಳ ಅಂಚೆ ಚೀಟಿಗಳು ಅವರ ಸಂಗ್ರಹದಲ್ಲಿವೆ.

58 ವರ್ಷದ ಅಖ್ತರ್ ಅವರು ನಿವೃತ್ತ ಅಂಚೆ ಅಧಿಕಾರಿ. 1982ರಲ್ಲಿ ಅಂಚೆ ಇಲಾಖೆಗೆ ಸೇರಿದ ಅವರು ಅಲ್ಲಿಂದ ಇಲ್ಲಿಯವರೆಗೂ ಸಾವಿರಾರು ಅಂಚೆ ಚೀಟಿ, ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಗಾಂಧೀಜಿ ಭಾವಚಿತ್ರವುಳ್ಳ ಅಂಚೆ ಚೀಟಿ, ಲಕೋಟೆಗಳನ್ನು ಸಂಗ್ರಹಿಸುವ ಮೂಲಕ ಗಾಂಧಿ ಸ್ಮರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

1948ರಲ್ಲಿ ಭಾರತದ ಅಂಚೆ ಇಲಾಖೆ ₹10 ಮುಖಬೆಲೆಯ ಗಾಂಧೀಜಿ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಹೊರತಂದಿತು. ಅಲ್ಲಿಂದ ಇಲ್ಲಿಯವರೆಗೂ ವಿಶೇಷ ಸಂದರ್ಭಗಳಲ್ಲಿ ಬಾಪೂ ಚಿತ್ರವುಳ್ಳ ಅಂಚೆ ಚೀಟಿಗಳು ಹೊರ ಬಂದಿವೆ. ಕ್ವಿಟ್ ಇಂಡಿಯ ಚಳುವಳಿಗೆ 50 ವರ್ಷ ತುಂಬಿದಾಗ, ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ನೂರು ವರ್ಷ ತುಂಬಿದಾಗ, ಚಂಪಕಾರಣ್ಯ ಸತ್ಯಾಗ್ರಹಕ್ಕೆ 100 ವರ್ಷ ತುಂಬಿದಾಗ, ದಂಡಿ ಸತ್ಯಾಗ್ರಹಕ್ಕೆ 75 ವರ್ಷ ತುಂಬಿದಾಗ, 50ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧೀಜಿ ಅವರ ಶತಮಾನೋತ್ಸವ ಮತ್ತು 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಅಪರೂಪದ ಅಂಚೆ ಚೀಟಿಗಳ ಸಂಗ್ರಹ ಅಖ್ತರ್ ಅವರ ಬಳಿ ಇವೆ.

2007ರಲ್ಲಿ ವಿಶ್ವಸಂಸ್ಥೆಯು ಗಾಂಧೀಜಿ ಜನ್ಮದಿನಾಚರಣೆಯನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುವುದಾಗಿ ಘೋಷಣೆ ಮಾಡಿದಾಗ ಜಗತ್ತಿನ ಹಲವು ದೇಶಗಳು ಅವರ ಚಿತ್ರವುಳ್ಳ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದವು. ಭೂತಾನ್ ಬುದ್ಧನೊಂದಿಗೆ ಗಾಂಧೀಜಿ ಇರುವ ಅಂಚೆ ಚೀಟಿ ಬಿಡುಗಡೆ ಮಾಡಿದೆ. ವೆನಿಜುವೆಲಾ ಕರ್ನಾಟಕದ ವಾಸ್ತುಶಿಲ್ಪ, ವಿಧಾನಸೌಧದ ಚಿತ್ರವನ್ನು ಮಹಾತ್ಮನ ಜೊತೆಗೂಡಿಸಿ ಅಂಚೆ ಚೀಟಿ ಹೊರತಂದಿದೆ. ಇವೆಲ್ಲವೂ ಅಖ್ತರ್ ಅವರ ಸಂಗ್ರಹದಲ್ಲಿವೆ.

ನೇಪಾಳ, ಮಾರಿಷಸ್, ಪ್ಯಾಲೆಸ್ಟೈನ್, ರವಾಂಡಾ, ಬಾಂಗ್ಲಾ, ಅಮೆರಿಕಾ, ಅಂಟಿಗುವಾ ಮತ್ತು ಬರ್ಬುಡಾ, ಮಲವೈ, ಮೊಕಾಂಬಿಕಾ, ಅಫಘಾನಿಸ್ಥಾನ, ಕ್ಯುಬಾ, ಫುಜೆರಿಯಾ, ಉಗಾಂಡಾ, ಮಾಲ್ಟ, ದಕ್ಷಿಣ ಆಫ್ರಿಕಾ, ಮಯನ್ಮಾರ್, ಗಾಬೋನ್, ಮಲಾವಿ ಸೇರಿದಂತೆ ಹಲವು ದೇಶಗಳ ಅಂಚೆ ಚೀಟಿಗಳು ಅವರ ಬಳಿಯಿವೆ.

‘ದೆಹಲಿ, ಬೆಂಗಳೂರು, ಹೈದರಾಬಾದ್, ಬೀದರ್, ಮಂಗಳೂರು ಸೇರಿದಂತೆ ದೇಶದ ಹಲವೆಡೆ ಅಂಚೆ ಚೀಟಿಗಳ ಪ್ರದರ್ಶನದಲ್ಲಿ ಭಾಗವಹಿಸಿರುವೆ. ಶಾಲೆಗಳಿಗೆ ಹೋಗಿ ಅಂಚೆ ಚೀಟಿಗಳ ಇತಿಹಾಸ, ವಿಶೇಷತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದ್ದೇನೆ. ಗಾಂಧಿ ಚಿತ್ರವುಳ್ಳ ಅಂಚೆ ಚೀಟಿಗಳಲ್ಲಿ ಅವರ ಬಾಲ್ಯ, ದಾಂಪತ್ಯ, ಜೀವನ, ಸಾಧನೆ ಎಲ್ಲವನ್ನೂ ಚಿತ್ರಗಳ ಮೂಲಕ ನೋಡಿ ತಿಳಿಯಬಹುದು’ ಎನ್ನುತ್ತಾರೆ ಅಖ್ತರ್ ಅಲಿ.

ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಚಳವಳಿಯ ಮಹಾನ್ ನಾಯಕ. ಅವರ ತತ್ವ ಆದರ್ಶ, ಸಂದೇಶಗಳನ್ನು ಇಂದಿನ ಯುವಪೀಳಿಗೆಗೆ ತಲುಪಿಸಬೇಕಾಗಿದೆ
– ಅಖ್ತರ್ ಅಲಿ ಮುದ್ಗಲ್, ನಿವೃತ್ತ ಅಂಚೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT