ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರಿಗಾಗಿ ವಿಧಾನ ಪರಿಷತ್ ಕ್ಷೇತ್ರ ರಚಿಸಿ: ವಿಜಯಕುಮಾರ ಸೋನಾರೆ

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ
Last Updated 1 ಜುಲೈ 2021, 3:58 IST
ಅಕ್ಷರ ಗಾತ್ರ

ಕಲಬುರ್ಗಿ: ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರಗಳಂತೆ ಕಲಾವಿದರಿಗಾಗಿ ಪ್ರತ್ಯೇಕ ವಿಧಾನ ಪರಿಷತ್ ಕ್ಷೇತ್ರ ರಚನೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಕಲಾವಿದರ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವೆ ಇಲ್ಲದಂತಾಗಿದೆ. ಆದ್ದರಿಂದ ಕಲಾವಿದರನ್ನು ಪ್ರತಿನಿಧಿಸುವ ಜನಪ್ರತಿನಿಧಿ ಸ್ಥಾನ ಅವಶ್ಯಕವಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದ ಎಲ್ಲ ಕಲಾವಿದರಿಗೆ ಗುರುತಿ ಚೀಟಿ ನೀಡಬೇಕು ಹಾಗೂ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ರಂಗಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಕಲಾವಿದರ ಮಾಸಾಶನ ವಯೋಮಾನವನ್ನು 58ರಿಂದ 50ಕ್ಕೆ ಇಳಿಸಬೇಕು, ಮಾಸಾಶನ ಮೊತ್ತವನ್ನು ₹2 ಸಾವಿರದಿಂದ ₹5 ಸಾವಿರಕ್ಕೆ ಹೆಚ್ಚಿಸಬೇಕು. ತೆಲಂಗಾಣ ಮಾದರಿಯಲ್ಲಿ ರಾಜ್ಯದ ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದರಿಗೆ ₹10 ಸಾವಿರ ಮಾಸಾಶನ ನೀಡಬೇಕು ಎಂದರು.

ರಾಜ್ಯ ಸರ್ಕಾರದಿಂದ ನಡೆಯುವ ಉತ್ಸವಗಳಲ್ಲಿ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶ ನೀಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಅನುದಾನ ನೀಡಬೇಕು. ಇಲ್ಲಿನ ಕಡಕೋಳ ಮಡಿವಾಳಪ್ಪ ಅವರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಸಾಧಕರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು. ಕಲಬುರ್ಗಿ ರಂಗಾಯಣದ ಚಟುವಟಿಕೆಗಳನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಕಲಾವಿದರಿಗೆ ಸಿಗುವ ಸವಲತ್ತುಗಳು ಬೆಂಗಳೂರು ಕೇಂದ್ರಿತವಾಗಿದೆ. ಈ ಭಾಗದ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಈ ಭಾಗದ ಕಲಾವಿದರನ್ನು ಒಟ್ಟುಗೂಡಿಸಿ ಒಕ್ಕೂಟವನ್ನು ರಚನೆ ಮಾಡಲಾಗಿದ್ದು, ಮಂಜಮ್ಮ ಜೋಗತಿ ಅವರನ್ನು ಗೌರವಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಕಲಾವಿದರಾದ ಎಸ್.ಪಿ.ಹರಿಕೃಷ್ಣ, ಪ್ರಕಾಶ ಅಂಗಡಿ, ಡಿಂಗ್ರಿ ನರೇಶ, ಶರಣಪ್ಪ ವಡಿಗೇರ್, ಅಮರೇಶ ಇದ್ದರು.

‘ಸ್ಥಳೀಯ ಕಲಾವಿದರಿಗೆ ಸಿಗದ ಪ್ರೋತ್ಸಾಹ’

ಹೊರರಾಜ್ಯದ ಕಲಾವಿದರಿಗೆ ಸಿಗುತ್ತಿರುವ ಸಂಭಾವನೆ ಹಾಗೂ ಪ್ರೋತ್ಸಾಹ ರಾಜ್ಯದ ಸ್ಥಳೀಯ ಕಲಾವಿದರಿಗೆ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಜಾನದಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ ವ್ಯಕ್ತಪಡಿಸಿದರು.

ಬಹುತೇಕ ಕಲಾವಿದರು ಕಡುಬಡತನದಲ್ಲಿಯೆ ಜೀವನ ಸಾಗಿಸುತ್ತಿದ್ದಾರೆ. ಕಲಾವಿದರಿಗೆ ಸೌಕರ್ಯ, ಸಂಭಾವನೆ ನೀಡುವ ವಿಷಯದಲ್ಲಿ ತಾರತಮ್ಯ ನಿಲ್ಲಬೇಕು. ಸ್ಥಳೀಯ ಕಲಾವಿದರಿಗೂ ಸೌಕರ್ಯಗಳು ದೊರೆಯಬೇಕು ಎಂದು ಅವರು ಹೇಳಿದರು.

ಕೋವಿಡ್ ಸಂಕಷ್ಟ ಕಾಲದಲ್ಲಿ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಕಲಾವಿದರ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT