ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ನೋಟಾ ‘ಅಸ್ತ್ರ’ದತ್ತ ಹೆಚ್ಚುತ್ತಿದೆ ಆಕರ್ಷಣೆ

Published 25 ಏಪ್ರಿಲ್ 2024, 1:11 IST
Last Updated 25 ಏಪ್ರಿಲ್ 2024, 1:11 IST
ಅಕ್ಷರ ಗಾತ್ರ

ಕಲಬುರಗಿ: ‘ಪಕ್ಷಗಳು ಸರಿಯಿಲ್ಲ, ಅಭ್ಯರ್ಥಿಗಳೂ ಅಷ್ಟೇ... ಯಾರಿಗೆ ಮತಹಾಕಬೇಕು...?’ ಹೀಗೆ ಯೋಚಿಸುವ ಮತದಾರರಿಗಾಗಿ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಹೆಸರಿನ ಪಟ್ಟಿಯ ಕೊನೆಗೆ ಇವಿಎಂಗಳಲ್ಲಿ ‘ನೋಟಾ’ ಗುಂಡಿಯನ್ನು ಚುನಾವಣಾ ಆಯೋಗ ನೀಡಿರುತ್ತದೆ. ಮತದಾರ ಪ್ರಭುಗಳು ನೋಟಾ (‘ಈ ಮೇಲಿನ ಯಾರಿಗೂ ಇಲ್ಲ’ –ಎನ್‌ಒಟಿಎ) ಗುಂಡಿ ಒತ್ತಿ ತಮ್ಮ ನಿರ್ಧಾರ ಪ್ರಕಟಿಸುವ ಅವಕಾಶವಿದೆ. ಹಾಗಾದರೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಇದನ್ನು ಬಳಸಿ ಆಕ್ರೋಶ ಹೊರಹಾಕಿದವರೆಷ್ಟು ಗೊತ್ತಾ?

ಸುಪ್ರೀಂ ಕೋರ್ಟ್‌ 2013ರ ಸೆ. 27ರಂದು ನೀಡಿದ ಆದೇಶದಂತೆ ಕೇಂದ್ರ ಚುನಾವಣಾ ಆಯೋಗವು ‘ನೋಟಾ’ ಆಯ್ಕೆ ಅವಕಾಶವನ್ನು ದೇಶದ ಮತದಾರರಿಗೆ ನೀಡಿತು. ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ನಡೆದ 2014ರ ಲೋಕಸಭಾ ಚುನಾವಣೆ, 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆ, 2023ರ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಬಳಕೆಯಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಅಂಚೆ ಮತ ಸೇರಿ 9,888 ಮತದಾರರು ನೋಟಾ ಗುಂಡಿ ಒತ್ತಿದ್ದರು. ಬಳಿಕ ನಡೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10,009 ನೋಟಾಗೆ ಮತ ನೀಡಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಐದು ಅಂಚೆ ಮತಗಳು ಸೇರಿದಂತೆ 10,487 ಮತದಾರರು ನೋಟಾ ಗುಂಡಿ ಒತ್ತಿ ಪಕ್ಷಗಳು ಹಾಗೂ ಅಭ್ಯರ್ಥಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,734 ಮಂದಿ ನೋಟಾ ಗುಂಡಿ ಒತ್ತಿದ್ದರು.

ನೋಟಾದತ್ತ ಮತದಾರರ ಆಕರ್ಷಣೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಸಾಗುತ್ತಿದೆ. 2018 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ವಿಧಾನಸಭಾ ಕ್ಷೇತ್ರದಲ್ಲಿ ‘ನೋಟಾ’ ನಾಲ್ಕನೇ ಸ್ಥಾನ ಪಡೆದಿದ್ದು ವಿಶೇಷ. ಮತ್ತೊಂದೆಡೆ, ಮೊದಲೆಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಲು ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗುತ್ತಿದ್ದರು. ಈಗ ಸಾಮೂಹಿಕವಾಗಿ ನೋಟಾಗೆ ಮತಹಾಕುವತ್ತ ಜನರ ಚಿತ್ತ ಹರಿಯುತ್ತಿರುವುದು ಸದ್ಯದ ಟ್ರೆಂಡ್‌.

ಕ್ಷೇತ್ರ: 2014 ; 2019 ; 2018 ; 2023
ಅಫಜಲಪುರ: 1,270 ; 1,362 ; 1,243 ; 1,608
ಜೇವರ್ಗಿ: 1,358 ; 1,389 ; 1,310 ; 1,146
ಗುರುಮಠಕಲ್: 1,783 ; 2,132 ; 2,418 ;1,416
ಚಿತ್ತಾಪುರ: 1,286 ; 1,164 ; 1,052 ; 816
ಸೇಡಂ: 1,253 ; 1,320 ; 1,260 ; 691
ಕಲಬುರಗಿ ಗ್ರಾಮೀಣ: 1,170 ; 1,285 ; 1,612 ; 839
ಕಲಬುರಗಿ ದಕ್ಷಿಣ: 925 ; 968 ; 1,114 ; 1,284
ಕಲಬುರಗಿ ಉತ್ತರ: 842 ; 862 ; 1,116 ; 834

ಆಧಾರ: ಕೇಂದ್ರ ಚುನಾವಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT