ಭಾನುವಾರ, ಮೇ 9, 2021
19 °C

ಕಲಬುರ್ಗಿ: ಮಾ.27ರಂದು ಮೆಗಾ ಲೋಕ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕರ್ನಾಟಕ ಹೈಕೋರ್ಟ್‌ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಎಲ್ಲಾ ವರ್ಗದ ಕಕ್ಷಿದಾರರ ಅನುಕೂಲಕ್ಕಾಗಿ ಮಾರ್ಚ್ 27 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಆರ್. ಶೆಟ್ಟರ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್.ಜೆ.ಸತೀಶ್‍ಸಿಂಗ್ ಅವರು ತಿಳಿಸಿದ್ದಾರೆ.

ಮೆಗಾ ಲೋಕ ಅದಾಲತ್‍ದಲ್ಲಿ ಆಸ್ತಿಗೆ ಸಂಬಂಧಿಸಿದ ಸಿವಿಲ್ ವಾಜ್ಯಗಳು, ಚೆಕ್‍ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ವಿಚ್ಛೇದನ ಪ್ರಕರಣ ಹೊರತುಪಡಿಸಿ ಕೌಟುಂಬಿಕ ವ್ಯಾಜ್ಯಗಳು, ಜೀವನಾಂಶ ಪ್ರಕರಣಗಳು, ದೂರವಾಣಿ ಬಾಕಿ ಬಿಲ್ಲ ಪ್ರಕರಣಗಳು, ನೀರಿನ ಬಿಲ್‌ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂ ಸ್ವಾಧೀನ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು ಸೇರಿದಂತೆ ಎಲ್ಲಾ ತರಹದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು.

ಜಿಲ್ಲಾ ನ್ಯಾಯಾಲಯ ಹಾಗೂ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಪೀಠಗಳನ್ನು ರಚಿಸಲಾಗುವುದು. ಸದರಿ ಪೀಠದಲ್ಲಿ ಸಂಧಾನಕಾರರಾಗಿ ಒಬ್ಬರು ನ್ಯಾಯಾಧೀಶರು ಹಾಗೂ ಒಬ್ಬರು ನ್ಯಾಯಾಂಗೇತರ ಸದಸ್ಯರು ಇರುತ್ತಾರೆ.

ನ್ಯಾಯಾಲಯದಲ್ಲಿ ಚಾಲ್ತಿ ಇರುವ ಪ್ರಕರಣಗಳಲ್ಲದೇ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗುವುದು. ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಂಡ ಪ್ರಕರಣಗಳಲ್ಲಿ ಕಕ್ಷಿದಾರರು ತುಂಬಿದ ನ್ಯಾಯ ಶುಲ್ಕವನ್ನು ಸಂಪೂರ್ಣವಾಗಿ ಹಿಂದಿರುಗಿಸಲಾಗುವುದು. ಲೋಕ್ ಅದಾಲತ್‍ನಲ್ಲಿ ರಾಜೀ ಸಂಧಾನ ಮಾಡಿಕೊಳ್ಳುವುದರಿಂದ ಕಕ್ಷಿದಾರ ಸಮಯ, ಹಣ ಉಳಿಯುವುದಲ್ಲದೇ ಪರಸ್ಪರ ಸಾಮರಸ್ಯ ಮುಂದುವರೆಯುತ್ತದೆ.

ಮುಕ್ತಾಯಗೊಂಡ ಪ್ರಕರಣಗಳಲ್ಲಿ ಹೊರಡಿಸಲಾಗುವ ಆದೇಶಕ್ಕೆ ನ್ಯಾಯಾಲಯದಲ್ಲಿ ಹೊರಡಿಸಲಾದ ಡಿಕ್ರಿಯಷ್ಟೇ ಮಾನ್ಯತೆ ಇರುತ್ತದೆ. ಲೋಕ್ ಅದಾಲತ್‍ನಲ್ಲಿ ಹೊರಡಿಸಲಾಗುವ ಆದೇಶದ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ. 2021ರ ಮಾರ್ಚ್ 27 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜರುಗುವ ಮೆಗಾ ಲೋಕ್ ಅದಾಲತ್‍ನ ಸದುಪಯೋಗ ಪಡೆದುಕೊಳ್ಳುವಂತೆ ಕಕ್ಷಿದಾರರು ಹಾಗೂ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು