ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ ಮಾಡದೇ ಶಿಫಾರಸು ಮಾಡದಿರಲು ಒತ್ತಾಯ

ನ್ಯಾ.ಸದಾಶಿವ ಆಯೋಗದ ವರದಿ; ಶಾಸಕಿ ಕನೀಜ್ ಅವರಿಗೆ ಮನವಿ ಸಲ್ಲಿಕೆ
Last Updated 18 ಸೆಪ್ಟೆಂಬರ್ 2020, 5:27 IST
ಅಕ್ಷರ ಗಾತ್ರ

ಕಲಬುರ್ಗಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆಗೆ ಬಿಡದೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಒತ್ತಾಯಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ನಾಡಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಐಕ್ಯತೆ ಉಳಿಸಿಕೊಳ್ಳಬೇಕಿದೆ. ಎಲ್ಲರಿಗೂ ಸಮಾನ ಅವಕಾಶಗಳು ಸಿಗುವಂತಾಗಲು ಸರ್ಕಾರಗಳು ಪಾರದರ್ಶಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆದರೆ, ಕೆಲ ದುಷ್ಟ ಶಕ್ತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸಮುದಾಯಗಳಲ್ಲಿ ಪರಸ್ಪರ ದ್ವೇಷ ಹುಟ್ಟುಹಾಕಲು ಯತ್ನಿಸುತ್ತಿವೆ. ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಜಾತಿಗಳನ್ನು ಎಸ್‌.ಸಿ. ಪಟ್ಟಿಯಿಂದ ತೆಗೆದು ಹಾಕಬೇಕು ಎಂಬ ಅನಗತ್ಯ ಚರ್ಚೆಯನ್ನು ಹುಟ್ಟುಹಾಕಲಾಗಿದೆ. ಆದ್ದರಿಂದ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಪರಿಶಿಷ್ಟ ಜಾತಿಯ 101 ಸಮುದಾಯದವರಿಗೆ ಹಾಗೂ ಆಸಕ್ತರಿಗೆ ಈ ವರದಿಯ ದೃಢೀಕೃತ ಪ್ರತಿಯನ್ನು ನೀಡಬೇಕು. ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ಶಿಫಾರಸು ಮಾಡಿರುವ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯನ್ನು ಪ್ರಕಟಿಸಬೇಕು. ಹಿಂದಿನ ಸರ್ಕಾರ ಕೈಗೊಂಡಿದ್ದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕು. ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದರು.

ಒಕ್ಕೂಟದ ಮುಖಂಡರಾದ ವಿಠ್ಠಲ ಜಾಧವ, ಪ್ರೇಮಕುಮಾರ ರಾಠೋಡ, ಹೋಬಸಿಂಗ್, ಧೇನು ಸಿಂಗ್ ಚವ್ಹಾಣ, ತಿಪ್ಪಣ್ಣ ಒಡೆಯರಾಜ, ರಾಘು ರಾಠೋಡ, ಭೀಮಾಶಂಕರ ಭಂಕೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT