ಗುರುವಾರ , ಮಾರ್ಚ್ 30, 2023
32 °C

ರಂಜಿಸಿದ ಮೇರಾ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಅಖಿಲ ಭಾರತ ಬಂಜಾರಾ ಸೇವಾ ಸಂಘ ಹಾಗೂ ಅಖಿಲ ಭಾರತ ಬಂಜಾರಾ ಯುವ ಸೇವಾ ಸಂಘದ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಪ್ರದಾಯಿಕ ’ಮೇರಾ‘ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ಲಂಬಾಣಿ ಸಾಂಪ್ರದಾಯಿಕ ದಿರಿಸಿನಲ್ಲಿ ಬಂದ ಯುವತಿಯರ ತಂಡ ವೈವಿಧ್ಯಮಯ ಹಾಡುಗಳಿಗೆ ನೃತ್ಯ ಮಾಡಿ ಇನ್ನಿಲ್ಲದಂತೆ ಸಂಭ್ರಮಿಸಿದರು.

ದೀಪಾವಳಿ ಹಬ್ಬದಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಬಾ ಎಂದು ಪ್ರಾರ್ಥಿಸುವ ವಿಶಿಷ್ಟ ಕಾರ್ಯಕ್ರಮವೇ ‘ಮೇರಾ’. ತಾಂಡಾಗಳಲ್ಲಿ ಆಚರಿಸಲಾಗುವ ಈ ಹಬ್ಬವನ್ನು ನಗರವಾಸಿಗಳಿಗಾಗಿಯೇ ಆಯೋಜಿಸಲಾಗಿತ್ತು. ನಗರದ ವಿವಿಧ ಭಾಗ ಹಾಗೂ ಸಮೀಪದ ತಾಂಡಾಗಳಿಂದ ಬಂದಿದ್ದ ತರುಣಿಯರು, ಹೆಣ್ಣುಮಕ್ಕಳು ತಮ್ಮ ಹಿರಿಯರಿಗೆ ಆರತಿ ಬೆಳಗಿ ಹಾಡಿ, ಹರಸಿದರು. ಮಕ್ಕಳು, ಮಹಿಳೆಯರು ಲಂಬಾಣಿಗರ ವಿವಿಧ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು.

‘ವರ್ಷೆದಾಡ್‌ ಕೋರ್‌ ದವಾಳಿ ಬಾಪು ತೋನ ಮೇರಾ, ವರ್ಷೆದಾಡ್‌ ಕೋರ್‌ ದವಾಳಿ ನಾಯಕ್‌ ತೋನ ಮೇರಾ, ವರ್ಷೆದಾಡ್‌ ಕೋರ್‌ ದವಾಳಿ ಸೇವಾಭಾಯ ತೋನ ಮೇರಾ, ವರ್ಷೆದಾಡ್‌ ಕೋರ್‌ ದವಾಳಿ ಗೋರ್‌ಭಾಯಿ ತೋನ್‌ ಮೇರಾ...’ ಎಂದು ಸಾಮೂಹಿಕವಾಗಿ ಹಾಡುವ ಮೂಲಕ ಕನ್ಯೆಯರು ತಮ್ಮ ಸಂಪ್ರದಾಯ ಮೆರೆದರು.

ಮೊದಲಿಗೆ ವೇದಿಕೆಗೆ ಬಂದ ಅನ್ನಪೂರ್ಣಾ ಹಾಗೂ ಸಂಗಡಿಗರ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮಕ್ಕೆ ಹೊಸ ಹುಮ್ಮಸ್ಸು ನೀಡಿತು. ನಂತರ ಸೃಷ್ಟಿ ಹಾಗೂ ಸಂಗಡಿಗರ ಗುಜರಾತಿ ಜನಪದ ಹಾಡು, ಖುಷಿ ಹಾಗೂ ಸಂಗಡಿಗರು, ಸುನಿತಾ ಹಾಗೂ ಸಂಗಡಿಗರ ಮಾರವಾಡಿ ನೃತ್ಯ, ಪೂಜಾ ಹಾಗೂ ಗೆಳತಿಯರ ಭದ್ರುಕಿ ಹಾಡು– ನೃತ್ಯ... ಹೀಗೆ ಒಬ್ಬರಿಗಿಂತ ಒಬ್ಬರ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಿದವು.

ಉದ್ಘಾಟನೆ: ಸಿದ್ಧಲಿಂಗ ಮಠದ ಚೇಮಸಿಂಗ್‌ ಮಹಾರಾಜರು, ಚೌಡಾಪುರದ ಮುರಾಹರಿ ಮಹಾರಾಜ, ಶ್ರೀನಿವಾಸ ಸರಡಗಿಯ ಗಣಪತಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಬಂಜಾರ ಸೇವಾ ಸಂಘದ ಅಧ್ಯಕ್ಷ ಬಾಬುರಾವ್‌ ಚವಾಣ್‌ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಮುಖಂಡರಾದ ಬಾಬು ಹೊನ್ನನಾಯಕ, ಬಿ.ಬಿ. ನಾಯಕ, ಛತ್ರು ರಾಠೋಡ, ಬಿಕ್ಕುಸಿಂಗ್‌ ರಾಠೋಡ ಹಾಗೂ ಸಂಘದ ಪದಾಧಿಕಾರಿಗಳು ವೇದಿಕೆ ಮೇಲಿದ್ದರು. ಪಾಲಿಕೆ ಸದಸ್ಯರಾದ ಲತಾ ರವಿ ರಾಠೋಡ, ಕೃಷ್ಣಾ ನಾಯಕ ಹಾಗೂ ಸಹಾಯಕ ಪ್ರಾಧ್ಯಾಪಕ ರಾಜಶೇಖರ ರಾಠೋಡ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.