ಕಲಬುರಗಿ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಅವಮಾನಕರ ಹೇಳಿಕೆ ನೀಡಿದ ಸಚಿವ ಎಂ.ಬಿ. ಪಾಟೀಲ ಅವರು ಕ್ಷಮೆ ಕೇಳಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಕಾಂಗ್ರೆಸ್ ಸರ್ಕಾರ, ಸಚಿವ ಎಂ.ಬಿ. ಪಾಟೀಲಗೆ ಧಿಕ್ಕಾರ, ದಲಿತ ವಿರೋಧಿ ಎಂ.ಬಿ. ಪಾಟೀಲಗೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸರ್ಕಾರದ ಭ್ರಷ್ಟಾಚಾರ ಬಗ್ಗೆ ಮಾತನಾಡಿದರೆ ಅವರಿಗೆ ಅಪಮಾನ ಮಾಡುವ ಮಾತುಗಳನ್ನು ಆಡಿದ ಸಚಿವ ಎಂ.ಬಿ. ಪಾಟೀಲ ಅವರು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, ‘ದಲಿತ ನಾಯಕ ನಾರಾಯಣಸ್ವಾಮಿ ಅವರಿಗೆ ಅಪಮಾನಕರ ಹೇಳಿಕೆ ನೀಡಿ ದಲಿತ, ಶೋಷಿತ ಜನಾಂಗಕ್ಕೆ ಸಚಿವ ಎಂ.ಬಿ. ಪಾಟೀಲ ಅವರು ಅವಮಾನ ಮಾಡಿದ್ದಾರೆ. ತಕ್ಷಣವೇ ರಾಜೀನಾಮೆ ಕೊಡಬೇಕು. ಈ ಹೇಳಿಕೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಬೇಕು’ ಎಂದು ಆಗ್ರಹಿಸಿದರು.
‘ಬಡ ದಲಿತರಿಗೆ ಸಿಗಬೇಕಾದ ಭೂಮಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಟುಂಬದ ಪಾಲಾಗಿದೆ. ಆ ಹುಳುಕನ್ನು ಮುಚ್ಚಿಕೊಳ್ಳಲು ಪ್ರಿಯಾಂಕ್ ಅವರು ಎಂ.ಬಿ. ಪಾಟೀಲ ಅವರ ಬಗ್ಗೆ ಮಾತನಾಡುತ್ತಿಲ್ಲ. ಆದರೆ ದಲಿತ, ಹಿಂದುಳಿದ ವರ್ಗದ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾವು ಸುಮ್ಮನಿರುವುದಿಲ್ಲ’ ಎಂದು ಹೇಳಿದರು.
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಮಾತನಾಡಿ, ‘ದಲಿತ ಬಡವರಿಗೆ ಸರ್ಕಾರದ ಜಾಗ ನೀಡಿ ಎಂದು ಪ್ರಶ್ನೆ ಮಾಡಿದ ನಾರಾಯಣಸ್ವಾಮಿ ಅವರ ವಿರುದ್ಧ ಎಲ್ಲ ಕಾಂಗ್ರೆಸ್ ನಾಯಕರು ಮುಗಿ ಬೀಳುತ್ತಿದ್ದಾರೆ. ಅಪಮಾನ ಮಾಡಿದ ಸಚಿವ ಎಂ.ಬಿ.ಪಾಟೀಲ ವಿರುದ್ಧ ಎಸ್‌ಸಿ, ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು’ ಎಂದು ಆಗ್ರಹಿಸಿದರು.
‘ಸಚಿವ ಪ್ರಿಯಾಂಕ್ ಖರ್ಗೆ ಅವರು, ಅವರ ಸಹೋದರ ಪಡೆದ ಜಮೀನು ವಾಪಸ್ ನೀಡಿ ಅಂಬೇಡ್ಕರ್ ಅನುಯಾಯಿ ಎಂದು ತೋರಿಸಿಕೊಡಬೇಕು. ಇಲ್ಲವಾದರೆ ನಿಮಗೆ ಬಿ.ಆರ್. ಅಂಬೇಡ್ಕರ್ ಸಿದ್ಧಾಂತದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅಂಬೇಡ್ಕರ್ ಅವರು ಯಾವುದೇ ಆಸೆ ಪಡದೇ ತಮ್ಮ ಕುಟುಂಬಕ್ಕೆ ಏನು ಮಾಡಿಕೊಂಡಿಲ್ಲ. ಈಗಿನವರು ಎಲ್ಲ ಕುಟುಂಬಗಳಿಗೆ ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ, ಮಾಜಿ ಸಚಿವ ಬಾಬುರಾವ ಚವ್ಹಾಣ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ, ಮಹಾನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಯೋಗಿ ನಾಗನಳ್ಳಿ, ಅಶೋಕ ಬಗಲಿ, ನಿಂಗರಾಜ ಬಿರಾದಾರ, ಅರುಣಕುಮಾರ್ ಪಾಟೀಲ ಕೊಡಲಹಂಗರಗಾ, ಬಸವರಾಜ ಬೆಣ್ಣೂರು, ಶರಣಪ್ಪ ತಳವಾರ, ಅಂಬಾರಾಯ ಚಲಗೇರಿ, ಮಹೀಂದ್ರಕುಮಾರ ಪೂಜಾರಿ, ಆನಂದ, ಶಿವಪುತ್ರ, ಲಕ್ಷ್ಮಿ ಗೊಬ್ಬುರಕರ್, ಭಾಗೀರತಿ ಗುನ್ನಾಪುರ, ಉಮೇಶ ಪಾಟೀಲ, ಮಹಾದೇವ ಬೆಳಮಗಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ದಲಿತ ವ್ಯಕ್ತಿ ನಾರಾಯಣಸ್ವಾಮಿ ಅವರನ್ನು ಅಪಮಾನಿಸಿದ್ದು ಸರಿಯಲ್ಲ. ಸಚಿವ ಎಂ.ಬಿ. ಪಾಟೀಲ ರಾಜೀನಾಮೆ ನೀಡಬೇಕುಅವಿನಾಶ ಜಾಧವ ಚಿಂಚೋಳಿ ಶಾಸಕ
ಸಚಿವ ಎಂ.ಬಿ. ಪಾಟೀಲ ಅವರು ತಾನು ಮುಖ್ಯಮಂತ್ರಿಯಾಗಬೇಕು ಎಂಬ ರಾಜಕೀಯ ಸ್ಟಂಟ್ ಮಾಡಿ ಈ ಹೇಳಿಕೆ ನೀಡಿದ್ದಾರೆಚಂದು ಪಾಟೀಲ ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ
‘ಪಕ್ಷಪಾತ ಮಾಡುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ರಸ್ಟ್‌ಗೆ ಭೂಮಿ ಮಂಜೂರು ಮಾಡಿಸಿಕೊಂಡು ಸ್ವಜನಪಕ್ಷಪಾತ ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಮಾಧ್ಯಮ ಸದಸ್ಯ ವೆಂಕಟಪ್ರಸಾದ ಆರೋಪಿಸಿದರು. ‘ಪಾಲಿಭಾಷೆ ಕಲಿಸುವುದಾಗಿ 19 ಎಕರೆ ಜಾಗವನ್ನು ಪಡೆದುಕೊಂಡಿದ್ದಾರೆ. ಆದರೆ ಎಷ್ಟು ಜನರಿಗೆ ಪಾಲಿ ಭಾಷೆ ಕಲಿಸೀರಿ ಎಷ್ಟು ಜನರಿಗೆ ನೌಕರಿ ನೀಡಿರಿ. ನೀವು ಏನೂ ಮಾಡಿಲ್ಲ’ ಎಂದು ದೂರಿದರು. ‘ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಇದ್ದು ಅವರ ಕರ್ತವ್ಯವನ್ನು ನಾರಾಯಣಸ್ವಾಮಿ ನಿರ್ವಹಿಸಿದ್ದಾರೆ. ಅವರ ಏಳಿಗೆ ಸಹಿಸದ ಕಾಂಗ್ರೆಸ್‌ನವರು ಅಪಮಾನ ಮಾಡಿ ತಮ್ಮ ಸಂಸ್ಕೃತಿ ಏನು ಎಂಬುದು ತೋರುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.