ಶುಕ್ರವಾರ, ಆಗಸ್ಟ್ 6, 2021
22 °C
ಅಧಿಕಾರಿಗಳ ಜತೆಗೆ ವಿಡಿಯೊ ಸಂವಾದ

ಪ್ರವಾಹ- ಹಳ್ಳಿಗಳಲ್ಲೇ ಉಳಿದು ಸಿದ್ಧತೆ ಮಾಡಿಕೊಳ್ಳಿ: ಸಚಿವ ಮುರುಗೇಶ್ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ನಿಯಂತ್ರಣಕ್ಕೆ ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು. ಅಯಾ ಹಳ್ಳಿಕಗಳಲ್ಲೇ ಇದ್ದು, ಜನರ ಪ್ರಾಣ– ಆಸ್ತಿಪಾಸ್ತಿ ಆನಿ ಆಗದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮುಂಗಾರು ಪ್ರವಾಹ ಪರಿಸ್ಥಿತಿ ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಅನೇಕ ಕಡೆ ನದಿ, ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದು ಪ್ರವಾಹ ಉಂಟಾಗಿದೆ. ಕಲಬುರ್ಗಿಯಲ್ಲೂ ನೆರೆ ಹಾವಳಿ ಉಂಟಾಗದಂತೆ ತಕ್ಷಣವೇ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಲೆಕ್ಕಿಗರು, ಕಂದಾಯ ನೀರಿಕ್ಷಕರು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಿ, ಪರಿಸ್ಥಿತಿ ನಿಭಾಯಿಸಬೇಕು. ಕಾಳಜಿ ಕೇಂದ್ರಕ್ಕೆ ಬರುವ ನಿರಾಶ್ರಿತ ಜನರಿಗೆ ಸರ್ಕಾರದಿಂದ ಹೊರಡಿಸಲಾಗಿರುವ ಕೋವಿಡ್-19 ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರವಾಹ ಸಂದರ್ಭದಲ್ಲಿ ಕಾಳಜಿ ಕೆಂದ್ರಗಳನ್ನು ತೆರೆಯಬೇಕಾದಲ್ಲಿ ಬಿಸಿಎಂ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ಉಪಯೋಗಿಸಲು ಅನುಕೂಲವಾಗುವಂತೆ ಕಾಳಜಿ ಕೇಂದ್ರಗಳ ಮಾಹಿತಿಯನ್ನು ಪಡೆದುಕೊಂಡು ಮೂಲಭೂತ ಸೌಕರ್ಯವನ್ನು ಒದಗಿಸಲು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು’ ಎಂದರು.

‘ಜೊತೆಗೆ, ಕಾಳಜಿ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಅಗತ್ಯ ಪ್ರಾಥಮಿಕ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ಅವಶ್ಯಕತೆ ಇರುವ ಎಲ್ಲಾ ರೀತಿ ಸಲಕರಣೆಗಳು, ಔಷಧಿಗಳನ್ನು ಸಂಗ್ರಹಿಸಿಡಬೇಕು’ ಎಂದು ಅವರು ತಿಳಿಸಿದರು.

ಕಾಳಜಿ ಕೇಂದ್ರ ತೆರೆಯಿರಿ: ಒಂದು ವೇಳೆ ಪ್ರವಾಹ ಉಂಟಾದಲ್ಲಿ ಪುರುಷರು, ಮಹಿಳೆಯರು, 60 ವರ್ಷ ಮೇಲ್ಪಟ್ಟ ವಯಸ್ಕರು, ಗರ್ಭಿಣಿಯರು ಹಾಗೂ ಜಾನುವಾರುಗಳ ಮಾಹಿತಿಯನ್ನು ಪಡೆದು ಅವರಿಗೆ ಕಾಳಜಿ ಕೇಂದ್ರದ ವ್ಯವಸ್ಥೆ ಮಾಡಬೇಕು. ಜೊತೆಗೆ ಜಿಲ್ಲೆಯಲ್ಲಿ ನಡುಗಡ್ಡೆ ಇದ್ದಲ್ಲಿ ಅಂತಹ ಸ್ಥಳಗಳಲ್ಲಿ ವಾಸವಾಗಿರುವ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಆಗತ್ಯ ಕ್ರಮ ಕೈಗೊಳ್ಳಲು’ ಎಂದು ಸೂಚಿಸಿದರು.

ಆಹಾರ ಇಲಾಖೆಯವರು, ಕಾಳಜಿ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ, ಅಡುಗೆ ಮಾಡಲು ಅನಿಲ ವ್ಯವಸ್ಥೆ, ಅಡುಗೆ ಮಾಡುವವರು, ಜಾನುವರುಗಳಿಗೆ ಶೆಡ್ ವ್ಯವಸ್ಥೆ, ಆಸ್ಪತ್ರೆಗಳ ವ್ಯವಸ್ಥೆ, ಸಾಗಾಣಿಕೆ, ಸಾಮಾಜಿಕ ಅಂತರದೊಂದಿಗೆ ಮಾಡುವುದು ಹಾಗೂ ಜೆಸ್ಕಾಂ ಇಲಾಖೆ, ಲೋಕೋಪಯೋಗಿ, ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇವರು ಜನರೇಟರ್ ವ್ಯವಸ್ಥೆ ಮಾಡುವಂತೆ ಸಭೆಯ ಗಮನಕ್ಕೆ ತಂದರು. ತುರ್ತು ಸಂದರ್ಭದಲ್ಲಿ 5 ಅಧಿಕಾರಿಗಳುಳ್ಳ ಟಾಸ್ಕ್ ಪೋರ್ಸ್‌ ಸಮಿತಿ ರಚಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸಮನ್ವಯ ಸಾಧಿಸಿ: ‘ಜಿಲ್ಲೆಗೆ ಹೊಂದಿಕೊಂಡಿರುವ ನೆರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿಕೊಳ್ಳಲು ಸಂಬಂಧಪಟ್ಟ ಎಲ್ಲರೂ ಸಜ್ಜಾಗಬೇಕು’ ಎಂದು ಅವರು ತಿಳಿಸಿದರು.

ಪ್ರವಾಹ ಪರಿಸ್ಥಿತಿಗೊಳಗಾದ ಗ್ರಾಮಗಳ ನಿರಾಶ್ರಿತರಿಗೆ ಕಾಳಜಿ ಕೇಂದ್ರಕ್ಕೆ ತರಬೇಕಾಗಿರುವುದರಿಂದ ತಾಲ್ಲೂಕು ಕೇಂದ್ರಗಳಲ್ಲಿ 200 ಕಿಟ್‍ಗಳ ತಯಾರಿಕೆ, ಗ್ರಾಮದ ರಸ್ತೆ ಸಂಪೂರ್ಣ ಮುಳುಗಡೆಯಾದಾಗ ಪರ್ಯಾಯ ಮಾರ್ಗವಾಗಿ ಗ್ರಾಮಕ್ಕೆ ಸಂಪರ್ಕ ಸಾಧಿಸಲು ಬೇರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು