ಭಾನುವಾರ, ಆಗಸ್ಟ್ 14, 2022
25 °C
ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಸಕರೊಂದಿಗೆ ಸಚಿವ ಮುರುಗೇಶ ನಿರಾಣಿ ಸಭೆ

‘ಬಸ್‌ಗಳಲ್ಲಿ ಕುಗ್ರಾಮಗಳಿಗೆ ಲಸಿಕೆ ಪೂರೈಕೆ’

ಪ್ರಜಾವಾಣಿ ವಾರ್ತೆ‌‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕುಗ್ರಾಮಗಳಲ್ಲಿ ಜನರಿಗೆ ಲಸಿಕೆ ಹಾಕುವ ಪ್ರಯತ್ನದಲ್ಲಿ, ಜಿಲ್ಲಾಡಳಿತ ಒಂದೆರಡು ಬಸ್‌ಗಳನ್ನು ಮೊಬೈಲ್ ಲಸಿಕೆ ಕೇಂದ್ರಗಳಾಗಿ ಪರಿವರ್ತಿಸಿದೆ. ಅಗತ್ಯ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರನ್ನು ಹೊಂದಿರುವ ಈ ಬಸ್ಸುಗಳು ದೂರದ ಕುಗ್ರಾಮಗಳಿಗೆ ಪ್ರಯಾಣಿಸಿ ಬುಡಕಟ್ಟು, ಗ್ರಾಮಸ್ಥರು, ಅಲೆಮಾರಿ ಮತ್ತು ಇತರ ದುರ್ಬಲ ವರ್ಗಗಳಿಗೆ ಲಸಿಕೆ ನೀಡುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಜಿಲ್ಲೆಯ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸೋಮವಾರ ವರ್ಚುವಲ್ ಸಭೆ ನಡೆಸಿದ ಅವರು, ಕೊವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಇನ್ನಷ್ಟು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಸಿಕೆ ಬಗ್ಗೆ ಗಮನ ಹರಿಸಿ ಇದನ್ನು ಇನ್ನಷ್ಟು ಮುಂದುವರೆಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಚಿಕಿತ್ಸೆ ಮತ್ತು ಲಸಿಕೆ ಪಡೆಯುವ ಸಲುವಾಗಿ ಹಳ್ಳಿಯ ಕಡೆಗೆ ವೈದ್ಯರ ನಡಿಗೆ ಕಾರ್ಯಕ್ರಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ಮಾಡಬೇಕು. ಜಿಲ್ಲೆಯಲ್ಲಿ ಈಗಾಗಲೇ ಲಾಕ್‌ಡೌನ್ ಪ್ರಕ್ರಿಯೆಯು ಸ್ಥಗಿತಗೊಂಡಿರುವುದರಿಂದ ಕೊರೊನಾ ವೈರಸ್ ಹರಡುವಿಕೆಯ ವಿರುದ್ಧ ಈಗ ತೆಗೆದುಕೊಂಡಿರುವ ಕ್ರಮಗಳಲ್ಲಿ ಸಡಿಲ ಮಾಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಕನಿಷ್ಠ ಮಟ್ಟದಲ್ಲಿ ಇಳಿಕೆಯಾಗಿವೆ. ಕಳೆದ ಏಳು ದಿನಗಳಲ್ಲಿ ಜಿಲ್ಲೆಯು ಶೇಕಡಾ 1.6ರಷ್ಟು ಸಕಾರಾತ್ಮಕತೆಯನ್ನು ಕಂಡಿದೆ. ಜಿಲ್ಲೆಯಲ್ಲಿ ಸುಮಾರು 3.8 ಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ’ ಎಂದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಸಚಿವ ನಿರಾಣಿ ಅವರು, ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಹೆಚ್ಚಿನ ಲಸಿಕೆಗಳನ್ನು ಪಡೆಯಬೇಕು’ ಎಂದು ಮನವಿ ಮಾಡಿದರು.

‘ಮೂರನೇ ಕೋವಿಡ್ ತರಂಗವು ಜಿಲ್ಲೆಯಲ್ಲಿ ಕಾಣಿಸಿಕೊಂಡರೆ ಮಕ್ಕಳು ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಪೌಷ್ಠಿಕಾಂಶಗಳನ್ನು ಪೂರೈಸುವ ಮೂಲಕ ಜಿಲ್ಲೆಯ ಅಪೌಷ್ಠಿಕತೆಯ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಸಲಹೆ ನೀಡಿದರು.

ಕಪ್ಪು ಶಿಲೀಂಧ್ರದಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧಿಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಪ್ರಿಯಾಂಕ್ ಹೇಳಿದರು.

ಸಚಿವ ನಿರಾಣಿ ಪ್ರತಿಕ್ರಿಯೆ ನೀಡಿದ ಅವರು, ‘ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರವು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಗ್ಗೆ ಯಾರಿಗೂ ಯಾವುದೇ ಆತಂಕ ಬೇಡ. ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಮತ್ತು ಮೂರನೇ ಆಲೆ ಸಂಭವಿಸಿದಲ್ಲಿ ಭವಿಷ್ಯದ ಸವಾಲನ್ನು ಎದುರಿಸಲು ಮಕ್ಕಳ ವಾರ್ಡ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು