ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತ ಕಾಪಾಡುವಲ್ಲಿ ಎಲ್ಲಾ ಪಕ್ಷ ವಿಫಲ

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಶಾಸಕ ರಾಜಶೇಖರ ಪಾಟೀಲ ಟೀಕೆ
Last Updated 18 ಸೆಪ್ಟೆಂಬರ್ 2020, 6:46 IST
ಅಕ್ಷರ ಗಾತ್ರ

ಚಿಟಗುಪ್ಪ: ‘ರಾಜ್ಯ, ಕೇಂದ್ರದಲ್ಲಿ ಇದುವರೆಗೂ ಯಾವುದೇ ಪಕ್ಷದ ಸರ್ಕಾರ ಅಧಿಕಾರ ಮಾಡಿದ್ದರೂ ವಾಸ್ತವದಲ್ಲಿ ರೈತರಿಗೆ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಯಾವುದೇ ಯೋಜನೆ ರೂಪಿಸಿಲ್ಲ. ಎಲ್ಲ ಸರ್ಕಾರಗಳು ರೈತರ ಬಗ್ಗೆ ನಿಜವಾದ ಕಾಳಹಿ ವ್ಯಕ್ತಪಡಿಸುವಲ್ಲಿ ವಿಫಲವಾಗಿವೆ’ ಎಂದು ಶಾಸಕ ರಾಜಶೇಖರ ಪಾಟೀಲ ಟೀಕಿಸಿದರು.

ಇಲ್ಲಿಯ ತಹಶೀಲ್‌ ಕಚೇರಿ ಆವರಣದಲ್ಲಿ ಗುರುವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾರ ಅವಧಿಯಲ್ಲಿ ಬೀದರ್‍ ಸಹಕಾರ ಸಕ್ಕರೆ ಕಾರ್ಖಾನೆಗೆ ಅನ್ಯಾಯವಾಗಿದೆ ಎಂಬ ಬಗ್ಗೆ ಇಷ್ಟು ಕಾಲ ಅಧಿಕಾರ ನಡೆಸಿದ ಎಲ್ಲ ಪಕ್ಷಗಳ ಕಾರ್ಖಾನೆಯ ಅಧ್ಯಕ್ಷರು ವೇದಿಕೆಗೆ ಬಂದು ಬಹಿರಂಗ ಚರ್ಚೆ ನಡೆಸಲಿ. ನಾನು ಭಾಗವಹಿಸಲು ಸಿದ್ಧ’ ಎಂದು ಸವಾಲು ಹಾಕಿದರು.

‘ಜಿಲ್ಲೆಯ ಬೀದರ್‍ ಸಹಕಾರ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಕಾರ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲೆಗೆ ಭೇಟಿ ನೀಡಿದಾಗ ಜಿಲ್ಲೆಯ ಪ್ರಗತಿಗೆ, ಸಹಕಾರ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ₹100 ಕೋಟಿ ಅನುದಾನ ಕೊಡುವುದಾಗಿ ಘೋಷಿಸಿದ್ದರು. ಇದುವರೆಗೂ ಯಾವುದೇ ಅನುದಾನ ಬಂದಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತು ಕಾರ್ಖಾನೆ ಆರಂಭಕ್ಕೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬೀರಪ್ಪ, ಉಪಾಧ್ಯಕ್ಷೆ ನಿರ್ಮಲಾಬಾಯಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀಮಂತ ಪಾಟೀಲ, ಮನೋಜ ಕುಮಾರ್, ಪುರಸಭೆ ಸದಸ್ಯರಾದ ಮುಜಾಫರ್ ಪಟೇಲ್, ತಬರೇಜ್ ಜಲಿಸಾ ಬೇಗಂ, ಹಬೀಬ್, ಕ್ರಿಸ್ತಾನಂದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ಕನಕ, ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ್ ಪುರೋಹಿತ್, ರಾಯ ಬಸವಂತರಾಯ್ ದೇಶಮುಖ ಇದ್ದರು.

ತಹಶೀಲ್ದಾರ್ ಮಹ್ಮದ್ ಜಿಯಾವೊದ್ದೀನ್ ಧ್ವಜಾರೋಹಣ ನೆರವೇರಿಸಿದರು. ಮಾಧ್ಯಮ ಪ್ರತಿನಿಧಿಗಳಿಗೆ ಕೊರೊನಾ ವಾರಿಯರ್ಸ್‌ ಎಂದು ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಅಶೋಕ ಚನ್ನಕೋಟೆ ನಿರೂಪಿಸಿದರು.

ತಾ.ಪಂ ಕಚೇರಿ: ಇಲ್ಲಿಯ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬೀರಪ್ಪ ಸರ್ದಾರ್‍ ವಲ್ಲಭಾಯಿ ಪಟೇಲ್ ಹಾಗೂ ವಿಶ್ವಕರ್ಮ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ಕನಕ ಧ್ವಜಾರೋಹಣ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT