ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ತ್ಯಜಿಸುವ ಬಗ್ಗೆ ಆತುರದ ನಿರ್ಧಾರ ಇಲ್ಲ: ಶಾಸಕ ಜಾಧವ

Last Updated 24 ಜನವರಿ 2019, 13:58 IST
ಅಕ್ಷರ ಗಾತ್ರ

ಕಲಬುರ್ಗಿ: ಹತ್ತು ದಿನಗಳ ನಂತರ ಕ್ಷೇತ್ರಕ್ಕೆ ಮರಳಿರುವ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ, ಕಾಂಗ್ರೆಸ್‌ ತ್ಯಜಿಸುವ ಬಗ್ಗೆ ಯಾವ ನಿರ್ಧಾರವನ್ನೂ ಪ್ರಕಟಿಸಲಿಲ್ಲ. ತಾವು ಇನ್ನೂ ಗೊಂದಲದಲ್ಲಿದ್ದು, ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದರು.

ಕಾಳಗಿ ತಾಲ್ಲೂಕಿನ ಬೆಡಸೂರು ತಾಂಡಾದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು ₹50 ಕೋಟಿಗೆ ಮಾರಾಟವಾಗಿದ್ದೇನೆ ಎಂದು ಹುಯಿಲೆಬ್ಬಿಸಿರುವವರ ಬಾಯಲ್ಲಿ ಹುಳು ಬೀಳಲಿ’ ಎಂದು ಸ್ವಪಕ್ಷೀಯರಿಗೆ ಹಿಡಿಶಾಪ ಹಾಕಿದರು. ನೀತಿಕತೆಯ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹೆಸರಿಗೆ ಶಾಸಕನಾಗಿ ಇರುವುದರಿಂದ ಪ್ರಯೋಜನವೇನು? ಇನ್ನೆರಡು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಈಗ ನನಗೆ ಸಚಿವ ಸ್ಥಾನ ನೀಡಿದರೆ ತೆಗೆದುಕೊಂಡು ಏನು ಮಾಡಲಿ’ ಎಂದು ಕೇಳಿದರು.

ಮನವೊಲಿಕೆ: ‘ಉಮೇಶ ಜಾಧವ ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಅವರ ಮನವೊಲಿಸಿ ಎಂದು ಪಕ್ಷದ ಮುಖಂಡರುನನ್ನನ್ನು ಇಲ್ಲಿಗೆ ಕಳಿಸಿದ್ದಾರೆ. ಉಮೇಶ ಅವರ ನೋವನ್ನು ವರಿಷ್ಠರಿಗೆ ತಿಳಿಸುತ್ತೇನೆ. ಅವರು ಆ ನಂತರ ನಿರ್ಧಾರ ಕೈಗೊಳ್ಳಲಿ’ ಎಂದು ಉಮೇಶ ಅವರ ಸಂಬಂಧಿಯೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಹೇಳಿದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಉಮೇಶ, ‘ನಾನು ಎರಡೆರಡು ಗಂಟೆ ಚೇಂಬರ್‌ ಎದುರು ನಿಂತರೂ ಒಳಗೆ ಕರೆಯುತ್ತಿರಲಿಲ್ಲ. ನಾನು ಈಗ ಬೇಕಾದನೇ’ ಎಂದು ಪಕ್ಷದ ಮುಖಂಡರ ವಿರುದ್ಧ ಹರಿಹಾಯ್ದರು.

ಮೋದಿ ಗುಣಗಾನ: ಎಲ್ಲರೂ ತಂದೆ–ತಾಯಿಯನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ತಾಯಿಯ ದರ್ಶನಕ್ಕೆ ತೆರಳಿದರು. ನಾವೂ ಅವರಂತಾಗಬೇಕು. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಏಳು ತಿಂಗಳಾದರೂ ನನ್ನ ಕ್ಷೇತ್ರಕ್ಕೆ ಬಂದಿಲ್ಲ’ ಎಂದು ದೂರಿದರು.

ಈ ಸಮಾರಂಭದಲ್ಲಿ ಕಾಂಗ್ರೆಸ್‌ನ ಕೆಲ ಮುಖಂಡರು ಪಾಲ್ಗೊಂಡಿದ್ದರು. ಆದರೆ, ಬಿಜೆಪಿಯ ಯಾರೊಬ್ಬರೂ ಉಪಸ್ಥಿತರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT