ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ತದ ಕೊರತೆಯಿಂದ ದೇಶದಲ್ಲಿ 12 ಸಾವಿರಕ್ಕೂ ಹೆಚ್ಚು ಸಾವು: ಡಾ. ಮಂಜುನಾಥ್

Published 25 ಜೂನ್ 2024, 15:24 IST
Last Updated 25 ಜೂನ್ 2024, 15:24 IST
ಅಕ್ಷರ ಗಾತ್ರ

ಕಲಬುರಗಿ: ‘ಭಾರತದಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಪ್ರತಿದಿನ 12 ಸಾವಿರಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ದೇಶದ ಬ್ಲಡ್‌ಬ್ಯಾಂಕ್ ಮತ್ತು ಆಸ್ಪತ್ರೆಗಳಲ್ಲಿ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ಬಹುದೊಡ್ಡ ಅಂತರವಿದೆ’ ಎಂದು ಮೂತ್ರಪಿಂಡಶಾಸ್ತ್ರಜ್ಞ ಮತ್ತು ಚಿರಾಯು ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ದೋಶೆಟ್ಟಿ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ರಕ್ತದಾನ ಕುರಿತು ಉಪನ್ಯಾಸ ನೀಡಿದ  ಅವರು, ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದ ಕೊರತೆ ತೀವ್ರವಾಗಿದೆ. ಇದು ದೇಶದ ಆಸ್ಪತ್ರೆಗಳಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು, ಪ್ರತಿ ದಿನ 1.46 ಕೋಟಿ ಯೂನಿಟ್ ರಕ್ತದ ಬೇಡಿಕೆ ಇದ್ದು,  ಬ್ಲಡ್‌ಬ್ಯಾಂಕ್ ಮತ್ತು ಆಸ್ಪತ್ರೆಗಳಲ್ಲಿ ರಕ್ತದ ಲಭ್ಯತೆಯು ಕೇವಲ 1.25 ಕೋಟಿ ಯೂನಿಟ್ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘ರಕ್ತದಾನದ ಬಗ್ಗೆ ಅರಿವಿನ ಕೊರತೆಯಿದ್ದು, ಒಂದು ಅಂದಾಜಿನ ಪ್ರಕಾರ ಅರ್ಹರಲ್ಲಿ ಶೇಕಡ 90ರಷ್ಟು ಜನರು ರಕ್ತದಾನ ಮಾಡುವುದಿಲ್ಲ’ ಎಂದು ಡಾ. ದೋಶೆಟ್ಟಿ ಹೇಳಿದರು. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು, ಕಳೆದ ಆರು ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರು, ಅನಿಯಂತ್ರಿತ ಅಧಿಕ ರಕ್ತದೊತ್ತಡ ಹೊಂದಿರುವವರು ಮತ್ತು ಇನ್ಸುಲಿನ್ ಅಗತ್ಯವಿರುವ ಮಧುಮೇಹ ರೋಗಿಗಳು ಹಾಗೂ ಅನಿಯಂತ್ರಿತ ಬಿಪಿ ಹೊಂದಿರುವವರು ಸೇರಿದಂತೆ ಇತರರು ರಕ್ತದಾನ ಮಾಡಲು ಅರ್ಹರಲ್ಲ ಎಂದು ಅವರು ಮಾಹಿತಿ ನೀಡಿದರು.

ಶರಣಬಸವ ವಿಶ್ವವಿದ್ಯಾಲಯ ಮತ್ತು ಚಿರಾಯು ಆಸ್ಪತ್ರೆಯ ಜೀವನ್ ಆಧಾರ್ ರಕ್ತ ಕೇಂದ್ರವು ಜಂಟಿಯಾಗಿ ವಿಶ್ವವಿದ್ಯಾಲಯ ಆವರಣದಲ್ಲಿ ರಕ್ತದಾನ ಶಿಬಿರವನ್ನು ಬುಧವಾರ (ಜೂ. 26) ಆಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT