ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ

Published 6 ಮೇ 2024, 14:14 IST
Last Updated 6 ಮೇ 2024, 14:14 IST
ಅಕ್ಷರ ಗಾತ್ರ

ಕಲಬುರಗಿ: ಕೊಲೆ ಪ್ರಕರಣದ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ನಾಲ್ವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಆದೇಶಿಸಿದ್ದಾರೆ. ಶಿಕ್ಷೆಗೆ ಒಳಗಾದವರೆಲ್ಲ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದವರು.

ಶರಣಬಸಪ್ಪ ಮಾದಗುಂಡ, ಸಾಯಿನಾಥ ಮಾದಗುಂಡ ಹಾಗೂ ಯೋಗಿನಾಥ ಮಾದಗುಂಡ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು. ರಾಜಪ್ಪ ಮಾದಗುಂಡ, ಕೇದಾರನಾಥ ಮಾದಗುಂಡ, ಓಂನಾಥ ಮಾದಗುಂಡ ಹಾಗೂ ಅಶೋಕ ರಾಜಾಪುರ ಏಳು ವರ್ಷಗಳ ಜೈಲು ಶಿಕ್ಷೆಗೆ ಒಳಗಾದವರು.

ನಾಲ್ಕು ಎಕರೆ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ದ್ವೇಷದಿಂದ ಕಡಗಂಚಿ ನಿವಾಸಿ, ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಶಿವಲಿಂಗಪ್ಪ ಬುಗಶೆಟ್ಟಿ ಅವರನ್ನು 2020ರ ನವೆಂಬರ್‌ 2ರಂದು ಕಲಬುರಗಿಯಲ್ಲಿ ಕೊಲೆ ಮಾಡಲಾಗಿತ್ತು. ಈ ಕುರಿತು ಮೃತರ ಸಹೋದರ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಅರುಣ ಎಸ್‌.ಮುರಗುಂಡಿ ಅವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ರಾಘವೇಂದ್ರ ನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಸಿದ್ದಣ್ಣ ಹಾಗೂ ಕಾನ್‌ಸ್ಟೆಬಲ್‌ ಮನೋಹರ್‌ ಪ್ರಕರಣದ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಾದ–ಪ್ರತಿವಾದ ಆಲಿಸಿ, ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ, ಅಪರಾಧಿಗಳಿಗೆ ಜೈಲು ಶಿಕ್ಷೆ ಹಾಗೂ ಒಟ್ಟು ₹48 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ. ಅಲ್ಲದೇ, ಮೃತರ ಪತ್ನಿಗೆ ₹40 ಸಾವಿರ ನೀಡಿ, ಹೆಚ್ಚಿನ ಪರಿಹಾರಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಮೂರನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT