ಮಂಗಳವಾರ, ಮೇ 17, 2022
23 °C

ಕಲಬುರಗಿ- ರಾಮನವಮಿ: ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ರಾಜ್ಯದ ಕೆಲವೆಡೆ ಧರ್ಮದ ಆಧಾರದಲ್ಲಿ ಜನರನ್ನು ಪ್ರತ್ಯೇಕಿಸುವ ಪ್ರಯತ್ನಗಳು ನಡೆಯುತ್ತಿರುವ ಮಧ್ಯೆಯೇ ನಗರದಲ್ಲಿ ಭಾನುವಾರ ರಾಮನವಮಿ ಅಂಗವಾಗಿ ಆಯೋಜಿಸಿದ್ದ ಶ್ರೀರಾಮನ ಮೂರ್ತಿಯ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಮರು ಸ್ವಯಂಪ್ರೇರಿತರಾಗಿ ಮಜ್ಜಿಗೆ, ಪಾನಕ ಹಾಗೂ ನೀರು ವಿತರಿಸಿ ದಾಹ ತಣಿಸಿದರು.

ನಗರದ ಆಳಂದ ಚೆಕ್‌ಪೋಸ್ಟ್‌ನಿಂದ ಜಗತ್ ವೃತ್ತದವರೆಗೆ ರಾಮನವಮಿ ಉತ್ಸವ ಸಮಿತಿ ಹಾಗೂ ಶ್ರೀರಾಮಸೇನೆ ಆಯೋಜಿಸಿದ್ದ ಬೃಹತ್ ಮೆರವಣಿಯು ಶೇಖ್‌ ರೋಜಾದ ಖಾದ್ರಿ ಚೌಕ್‌ ಮಸೀದಿ ಬಳಿ ಬರುತ್ತಿದ್ದಂತೆಯೇ ಅಲ್ಲಿಯೇ ಟೆಂಟ್ ಹಾಕಿದ್ದ ಮುಸ್ಲಿಂ ಸಮುದಾಯದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಮಜ್ಜಿಗೆ, ಪಾನಕ ವಿತರಿಸಿದರು. ಕೆಲವರು ಟೆಂಟ್ ಬಳಿಯೇ ಬಂದು ಮಜ್ಜಿಗೆ, ಪಾನಕ ಕುಡಿದರೆ ಇನ್ನು ಕೆಲವರಿಗೆ ಮುಸ್ಲಿಂ ಸ್ವಯಂಸೇವಕರು ಅವರಿದ್ದಲ್ಲಿಗೇ ತೆರಳಿ ನೀರಿನ ಪ್ಯಾಕೆಟ್ ವಿತರಿಸಿದರು.

ಮುಸ್ಲಿಂ ಸಮುದಾಯದವರ ಈ ಸೌಹಾರ್ದ ಭಾವ ಕಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಕೈ ಕುಲುಕಿ ಅವರಿಗೆ ಧನ್ಯವಾದ ಅರ್ಪಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಸಮುದಾಯದ ಮುಖಂಡ ರಹೀಂ ಸಾಬ್ ಮುಲ್ಲಾ, ‘ಕಳೆದ ನಾಲ್ಕು ವರ್ಷಗಳಿಂದ ನಾವು ನಮ್ಮ ಹಿಂದೂ ಸಹೋದರರಿಗೆ ಮಜ್ಜಿಗೆ, ಪಾನಕ ವಿತರಿಸುತ್ತಿದ್ದೇವೆ. ನಮಗೆ ಧರ್ಮ ಮುಖ್ಯವಲ್ಲ. ಬಾಯಾರಿಕೆಯಿಂದ ಬಂದವರಿಗೆ ದಾಹ ನೀಗಿಸುವುದೇ ಮುಖ್ಯವಾಗುತ್ತದೆ. ಹೀಗಾಗಿ, ಯುವಕರ ತಂಡವನ್ನು ಕಟ್ಟಿಕೊಂಡಿದ್ದೇನೆ. ರಾಮನವಮಿ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಹೊರಟಿರುವವರಿಗೆ ಪಾನಕ ಕೊಡುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.