ಮಹಿಳಾ ಉತ್ತರಾಧಿಕಾರಿ ನೇಮಕ ರದ್ದು: ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ

ಕಲಬುರ್ಗಿ: ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಕೋರಣೇಶ್ವರ ವಿರಕ್ತಮಠಕ್ಕೆ ನೀಲಲೋಚನಾ ತಾಯಿ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದ ಪೀಠಾಧಿಪತಿ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಅವರು, ಈಗ ಈ ನೇಮಕ ರದ್ದುಗೊಳಿಸಿದ್ದಾಗಿ ತಿಳಿಸಿದ್ದಾರೆ.
‘ಖಜೂರಿ ಮಠವು ಚಿತ್ರದುರ್ಗದ ಮುರುಘಾಮಠದ ಶಾಖೆಯಾಗಿದ್ದು, ಉತ್ತರಾಧಿಕಾರಿ ನೇಮಕದ ಅಧಿಕಾರ ಮುರುಘಾಮಠಕ್ಕೆ ಮಾತ್ರ ಇರುತ್ತದೆ. ಉತ್ತರಾಧಿಕಾರಿ ನೇಮಕದ ನಮ್ಮ ಘೋಷಣೆ ಹಿಂದಕ್ಕೆ ಪಡೆದಿದ್ದೇವೆ. ಮುರುಘಾಮಠ ಹಾಗೂ ಮಠದ ಭಕ್ತರು ಉತ್ತರಾಧಿಕಾರಿಯ ಆಯ್ಕೆ ಮಾಡಿಕೊಳ್ಳಲಿದ್ದಾರೆ’ ಎಂದು ಖಜೂರಿ ಸ್ವಾಮೀಜಿ ತಿಳಿಸಿದ್ದಾರೆ.
‘ಉತ್ತರಾಧಿಕಾರಿಯನ್ನು ಘೋಷಣೆ ಮಾಡುವ ಅಧಿಕಾರ ಚಿತ್ರದುರ್ಗದ ಮುರುಘಾಶರಣರಿಗೆ ಮಾತ್ರ ಇದೆ. ಆ ನಿಯಮವನ್ನು ಮೀರಿ
ನೀಲಲೋಚನಾ ತಾಯಿಯವರನ್ನು ಘೋಷಣೆ ಮಾಡಲಾಗಿತ್ತು. ಮಠದ ಉತ್ತರಾಧಿಕಾರಿಗಳು ಹಿಂದಿನ ಸ್ವಾಮೀಜಿಗಳ
ಸಂಬಂಧಿಯಾಗಿರುವಂತಿಲ್ಲ. ಆದರೆ, ನೀಲಲೋಚನಾ ತಾಯಿ ಅವರು ಹಿಂದೆ ಮಠದ ಪೀಠಾಧಿಪತಿಯಾಗಿದ್ದ ಸ್ವಾಮೀಜಿ ಅವರ ಸಂಬಂಧಿಯಾಗಿದ್ದಾರೆ. ಹೀಗಾಗಿ, ಈ ನಿರ್ಧಾರದ ಬಗ್ಗೆ ಚಿತ್ರದುರ್ಗ ಮುರುಘಾಮಠದವರು ಅತೃಪ್ತಿ ವ್ಯಕ್ತಪಡಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
ಜೊತೆಗೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವಾಗ ತಮ್ಮೊಂದಿಗೆ ಏಕೆ ಚರ್ಚೆ ನಡೆಸಿಲ್ಲ ಎಂದು ಖಜೂರಿ ಗ್ರಾಮಸ್ಥರು ಆಕ್ಷೇಪ
ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ. ಇದರಿಂದಾಗಿ
ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.