ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ‘ನಮ್ಮ ಕ್ಲಿನಿಕ್‌’ಗೆ ಪ್ರಚಾರದ ಕೊರತೆ

ಜಿಲ್ಲೆಯ 11 ಕಡೆ ಸ್ಥಾಪನೆ: ನಗರ ಪ್ರದೇಶದ ಬಡವರು, ದಿನಗೂಲಿ ಕಾರ್ಮಿಕರಿಗೆ ಪ್ರಾಥಮಿಕ ಆರೋಗ್ಯ ಸೇವೆ
Published 29 ಜುಲೈ 2023, 5:31 IST
Last Updated 29 ಜುಲೈ 2023, 5:31 IST
ಅಕ್ಷರ ಗಾತ್ರ

ಕಲಬುರಗಿ: ಕಾರ್ಮಿಕ ಬಾಲಚಂದ್ರ ಅವರು ಕಿವಿ ನೋವಿನಿಂದ ಬಳಲುತ್ತಿರುವ ಪತ್ನಿ ಕರೆದುಕೊಂಡು ರಾಜಾಪುರದ ಗಲ್ಲಿಗಳನ್ನು ತಿರುಗಿ ಅಲ್ಲಿಯ ಹಲವರನ್ನು ವಿಚಾರಿಸಿ ‘ನಮ್ಮ ಕ್ಲಿನಿಕ್‌’ನ ಬಾಗಿನಲ್ಲಿ ನಿಂತಿದ್ದರು.

ಯೋಗ ಕೊಠಡಿಯಲ್ಲಿಯೇ ಅವರನ್ನು ವಿಚಾರಿಸಿದ ನರ್ಸ್‌, ಜಿಮ್ಸ್‌ಗೆ ತೆರಳಲು ಹೇಳಿ ಅವರನ್ನು ಸಾಗಹಾಕಿದರು. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ದಂಪತಿ ಭಾರವಾದ ಹೆಜ್ಜೆ ಹಾಕಿದರು. ಬೆಳಿಗ್ಗೆ 9ಕ್ಕೆ ಆರಂಭವಾದ ನಮ್ಮ ಕ್ಲಿನಿಕ್‌ಗೆ 10.30 ರವರೆಗೆ ಈ ಇಬ್ಬರು ಮಾತ್ರ ಬಂದಿದ್ದರು. ವೈದ್ಯರ ಕುರ್ಚಿ ಖಾಲಿ ಇತ್ತು. ರಜೆ ಮೇಲಿದ್ದಾರೆ ಎಂದು ಸಿಬ್ಬಂದಿ ಉತ್ತರಿಸಿದರು. ಔಷಧಾಲಯದಲ್ಲಿ ಯಾರೂ ಇರಲಿಲ್ಲ. ಸಿಬ್ಬಂದಿ ವಿಚಾರಿಸಿದಾಗ ಆರೋಗ್ಯ ಇಲಾಖೆಯ ಸಮೀಕ್ಷೆಗೆ ತೆರಳಿದ್ದಾರೆ ಎಂದು ತಿಳಿಸಿದರು.

ಇದು ಕೇವಲ ರಾಜಾಪುರದ ‘ನಮ್ಮ ಕ್ಲಿನಿಕ್‌’ನ ಕಥೆ ಮಾತ್ರವಲ್ಲ. ನಗರದ ಏಳೂ ಕ್ಲಿನಿಕ್‌ಗಳು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಪ್ರಚಾರದ ಕೊರತೆ ಈ ಕೇಂದ್ರಗಳನ್ನು ಕಾಡುತ್ತಿದೆ. ಬಡವರು ಹಾಗೂ ದಿನಗೂಲಿ ಕಾರ್ಮಿಕರು ಹೆಚ್ಚು ವಾಸವಾಗಿರುವ ಇಕ್ಕಾಟದ ಮನೆಗಳಿರುವ ಗಲ್ಲಿಗಳ ಬಾಡಿಗೆ ಹಾಗೂ ಸರ್ಕಾರಿ ಕಟ್ಟಡಗಳಲ್ಲಿ ಇವುಗಳನ್ನು ಆರಂಭಿಸಲಾಗಿದೆ. ಬಹುತೇಕರಿಗೆ ತಮ್ಮ ಪ್ರದೇಶಗಳಲ್ಲಿ ಈ ಕ್ಲಿನಿಕ್‌ಗಳ ಇರುವಿಕೆಯೂ ತಿಳಿದಿಲ್ಲ.

ನಗರ ಪ್ರದೇಶದ ಬಡವರು, ದಿನಗೂಲಿ ಕಾರ್ಮಿಕರಿಗೆ ಅವರಿರುವ ಸ್ಥಳದಲ್ಲಿಯೇ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲು ಹಿಂದಿನ ಬಿಜೆಪಿ ಸರ್ಕಾರ 2022ರ ಡಿಸೆಂಬರ್‌ನಲ್ಲಿ ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗಳ ಮಾದರಿಯಲ್ಲಿ 15,000ರಿಂದ 20,000 ಜನ ವಾಸವಿರುವ ಪ್ರದೇಶಗಳಿಗೆ ಒಂದರಂತೆ ಕ್ಲಿನಿಕ್‌ಗಳನ್ನು ಆರಂಭಿಸಿತು. ಜಿಲ್ಲೆಯ 11 ಕಡೆ ಈ ಕ್ಲಿನಿಕ್‌ ತೆರೆಯಲಾಗಿದೆ. ನಗರದ ಸಂತ್ರಾಸವಾಡಿಯ ನಯಾ ಮೊಹಲ್ಲಾ, ಕಪನೂರು ಕೈಗಾರಿಕಾ ಪ್ರದೇಶ, ಹಾಗರಗಾ ಕ್ರಾಸ್‌ ಹತ್ತಿರ, ರಾಜಾಪುರ, ಕೋಟನೂರು, ಬಂಬೂ ಬಜಾರ್ ಹಾಗೂ ಶ್ರೀರಾಮನಗರದಲ್ಲಿ ಕ್ಲಿನಿಕ್ ಆರಂಭಿಸಲಾಗಿದೆ. ಇಲ್ಲಿ 12 ಪ್ರಾಥಮಿಕ ಆರೋಗ್ಯ ಸೇವೆಗಳು ದೊರೆಯುತ್ತವೆ.

ಶ್ರೀರಾಮನಗರದ ನಮ್ಮ ಕ್ಲಿನಿಕ್‌ ಅನ್ನು 2022ರ ಡಿಸೆಂಬರ್‌ನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಉದ್ಘಾಟಿಸಿದ್ದರು. ಈ ಕ್ಲಿನಿಕ್‌ನಲ್ಲಿಯೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿಲ್ಲ. ಈ ಕ್ಲಿನಿಕ್‌ಗೂ ಹೆಚ್ಚಿನ ಜನ ಬರುತ್ತಿಲ್ಲ. ಇಲ್ಲಿಯ ಹಲವು ನಿವಾಸಿಗಳಿಗೆ ಈ ಕ್ಲಿನಿಕ್ ಇರುವುದೇ ತಿಳಿದಿಲ್ಲ. ಕೋಟನೂರು, ಕಪನೂರು, ಸಂತ್ರಾಸವಾಡಿ, ಬಂಬೂ ಬಜಾರ್‌ನಲ್ಲಿಯೂ ಕ್ಲಿನಿಕ್‌ಗಳು ಇಂತಹ ಸಮಸ್ಯೆಗಳಿಂದ ಬಳಲುತ್ತಿವೆ.

ನೆಗಡಿ, ಕೆಮ್ಮಿನ ಮಾತ್ರೆ ಕೊರತೆ: ಅಧಿಕ ರಕ್ತದೊತ್ತಡ, ಮಧುಮೇಹ, ನೆಗಡಿ ಹಾಗೂ ಕೆಮ್ಮಿನಿಂದ ಬಳಲುವವರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಇಲ್ಲಿ ನೆಗಡಿ ಹಾಗೂ ಕೆಮ್ಮಿನ ಮಾತ್ರೆಗಳ ಕೊರತೆ ಇದೆ. ಈ ಮಾತ್ರೆ ಸಿಗದ ಕಾರಣ ಜನ ಹಣ ನೀಡಿ ಹೊರಗಡೆಯ ಔಷಧಾಲಯಗಳಲ್ಲಿ ತೆಗೆದುಕೊಳ್ಳುತ್ತಾರೆ. ಔಷಧ ಲಭ್ಯ ಇರುವಂತೆ ನೋಡಿಕೊಂಡರೆ ಅನುಕೂಲವಾಗಲಿದೆ ಎಂಬುದು ಜನರ ಒತ್ತಾಯ.

ಔಷಧಾಲಯ ಸಿಬ್ಬಂದಿ ಇಲ್ಲ: ಈ ಕ್ಲಿನಿಕ್‌ಗಳಲ್ಲಿ ಔಷಧಾಲಯಗಳಿವೆ. ಆದರೆ ಅವುಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಇಲ್ಲ. ಪ್ರಯೋಗಾಲಯದ ತಂತ್ರಜ್ಞರಿಗೆ ಈ ಜವಾಬ್ದಾರಿ ನೀಡಲಾಗಿದೆ. ಅವರನ್ನು ಸಹ ಆರೋಗ್ಯ ಇಲಾಖೆಯ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಕ್ಲಿನಿಕ್‌ಗಳಲ್ಲಿ ವೈದ್ಯರು, ಸ್ಟಾಫ್‌ನರ್ಸ್‌ ಹಾಗೂ ‘ಡಿ’ ಗ್ರೂಪ್ ನೌಕರರಿರುತ್ತಾರೆ. ಕೆಲವೊಮ್ಮೆ ವೈದ್ಯರೂ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಸ್ಟಾಫ್‌ನರ್ಸ್‌ ಮಾತ್ರೆ ವಿತರಿಸುತ್ತಾರೆ.

ಕ್ಷೇಮ ಕೇಂದ್ರದ ಜವಾಬ್ದಾರಿ ಸಾಫ್ಟ್‌ ನರ್ಸ್‌ಗೆ: ಇಲ್ಲಿಗೆ ಆರೋಗ್ಯ ತಪಾಸಣೆಗೆ ಬರುವವರಿಗೆ ಯೋಗದಂಥ ಚಟುವಟಿಕೆಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಲಿನಿಕ್‌ಗಳಲ್ಲಿ ಕ್ಷೇಮ ಕೇಂದ್ರ ನಿರ್ಮಿಸಲಾಗಿದೆ. ಇದಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಆದ್ದರಿಂದ ಇಲ್ಲಿನ ಸ್ಟಾಫ್‌ ನರ್ಸ್‌ಗೆ ಯೋಗ ತರಬೇತಿ ನೀಡಲಾಗುತ್ತದೆ. ವಾರಕ್ಕೊಮ್ಮೆ ಅವರೇ ಯೋಗ ಮಾಡಿಸುತ್ತಾರೆ. ಕೆಲವು ಕಡೆ ಯೋಗಾಸನ ಮಾಡಿಸುವುದಿಲ್ಲ ಎನ್ನುವ ದೂರುಗಳಿವೆ.

‘ಕ್ಲಿನಿಕ್‌ಗೆ ಪ್ರತಿದಿನ 30ರಿಂದ 40 ಜನ ಬರುತ್ತಾರೆ. ಪ್ರಾಥಮಿಕ ಆರೋಗ್ಯ ಸಮಸ್ಯೆಗಳಾಗಿದ್ದರೆ ಇಲ್ಲಿಯೇ ಚಿಕಿತ್ಸೆ ನೀಡುತ್ತೇವೆ. ಇಲ್ಲದಿದ್ದರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕ್ಲಿನಿಕ್‌ನ ಸಿಬ್ಬಂದಿಯೊಬ್ಬರು ತಿಳಿಸಿದರು.

ಕಲಬುರಗಿಯ ರಾಜಾಪುರದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಮಹಿಯೊಬ್ಬರು ಕಿವಿ ತಪಾಸಣೆ ಮಾಡಿಸಿಕೊಂಡರು
ಕಲಬುರಗಿಯ ರಾಜಾಪುರದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಮಹಿಯೊಬ್ಬರು ಕಿವಿ ತಪಾಸಣೆ ಮಾಡಿಸಿಕೊಂಡರು
ಬಾಲಚಂದ್ರ
ಬಾಲಚಂದ್ರ
ಡಾ.ರಾಜಶೇಖರ ಮಾಲಿ
ಡಾ.ರಾಜಶೇಖರ ಮಾಲಿ

Quote - ನಮ್ಮ ಕ್ಲಿನಿಕ್‌ನಿಂದ ಅನುಕೂಲವಾಗಿದೆ. ಪ್ರಾಥಮಿಕ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇಲ್ಲಿ ಚಿಕಿತ್ಸೆ ನೀಡಲಾಗದಿದ್ದರೆ ಜಿಮ್ಸ್‌ಗೆ ಕಳುಹಿಸುತ್ತಾರೆ ಗುರುದೇವಮ್ಮ ಕಾರ್ಮಿಕ ಮಹಿಳೆ

Quote - ಕ್ಲಿನಿಕ್‌ನಲ್ಲಿ ಎಲ್ಲ ಔಷಧ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಇದರಿಂದ ಹಣ ಕೊಟ್ಟು ಹೊರಗಡೆ ತೆಗೆದುಕೊಳ್ಳುವುದು ತಪ್ಪುತ್ತದೆ. ಕ್ಲಿನಿಕ್‌ ಕುರಿತು ಪ್ರಚಾರ ಮಾಡಬೇಕು ಬಾಲಚಂದ್ರ ಕಾರ್ಮಿಕ

Cut-off box - ‘ಕ್ಲಿನಿಕ್‌ನ ಸಮಯ ವಿಸ್ತರಿಸಿ’ ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ನಮ್ಮ ಕ್ಲಿನಿಕ್‌ಗಳನ್ನು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2 ಗಂಟೆಯಿಂದ 4.30ರವರೆಗೆ ತೆರೆಯಲಾಗುತ್ತದೆ. ಬಹುತೇಕ ಕಾರ್ಮಿಕರು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳಿ ಸಂಜೆ 5 ಅಥವಾ 6 ಗಂಟೆಗೆ ಮನೆಗೆ ಮರಳುತ್ತಾರೆ. ಕೆಮ್ಮು ನೆಗಡಿಯಂಥ ಪ್ರಾಥಮಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಕ್ಲಿನಿಕ್‌ಗೆ ತೆರಳಿದರೆ ಬಾಗಿಲು ಹಾಕಲಾಗಿರುತ್ತದೆ. ಆದ್ದರಿಂದ ಕ್ಲಿನಿಕ್‌ನ ಸಮಯವನ್ನು ಸಂಜೆ 6ರವರೆಗೆ ವಿಸ್ತರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ‘ನಿಲ್ಲಿಸಲು ಆದೇಶ ಬಂದಿಲ್ಲ’ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿನ ಸರ್ಕಾರ 14 ಯೋಜನೆಗಳನ್ನು ನಿಲ್ಲಿಸಿದೆ. ಅದರಲ್ಲಿ ನಮ್ಮ ಕ್ಲಿನಿಕ್‌ ಯೋಜನೆಯೂ ಸೇರಿದೆ ಎಂದು ಸುದ್ದಿಯಾಗಿತ್ತು. ಆದರೆ ಆರೋಗ್ಯ ಇಲಾಖೆಯಿಂದ ಆ ತರಹದ ಆದೇಶ ಬಂದಿಲ್ಲ. ನಮ್ಮ ಕ್ಲಿನಿಕ್ ಯೋಜನೆಗೆ ಜಿಲ್ಲೆಯ ಕೆಲವು ಕಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನಗರದಲ್ಲಿ ಕ್ಲಿನಿಕ್‌ಗಳ ಕುರಿತು ಪ್ರಚಾರ ನಡೆಸಲಾಗುವುದು. ಸಿಬ್ಬಂದಿ ತಡವಾಗಿ ಬರುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಔಷಧ ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದರು.

Cut-off box - ಲಭ್ಯವಿರುವ ಸೇವೆಗಳು 1. ಗರ್ಭಿಣಿಯರ ಆರೋಗ್ಯ ತಪಾಸಣೆ 2. ಮಕ್ಕಳ ಮತ್ತು ಹದಿಹರೆಯದವರಿಗೆ ಪ್ರಾಥಮಿಕ ಆರೋಗ್ಯ ಸೇವೆ 3. ಜನನ ಸಮಯದ ಆರೈಕೆ 4. ಬಾಣಂತಿ ಆರೋಗ್ಯ ತಪಾಸಣೆ 5. ನವಜಾತ ಶಿಶು ಆರೈಕೆ ಮತ್ತು ಚುಚ್ಚುಮದ್ದು 6. ಕುಟುಂಬ ಕಲ್ಯಾಣ ಸೇವೆಗಳು 7. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅನುಷ್ಠಾನ 8. ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ನಿರ್ವಹಣೆ 9. ಹಿರಿಯ ನಾಗರಿಕರ ಆರೈಕೆ 10. ಕಣ್ಣು ದಂತ ಹಾಗೂ ತುರ್ತು ವೈದ್ಯಕೀಯ ಸೇವೆ 11. ಗಾಯಾಳುಗಳಿಗೆ ತುರ್ತು ಚಿಕಿತ್ಸೆ 12. ಮಾನಸಿಕ ಅರೋಗ್ಯ ಸೇವೆ ಕ್ಲಿನಿಕ್‌ನಲ್ಲಿರಬೇಕಾದ ಸಿಬ್ಬಂದಿ 1. ವೈದ್ಯಾಧಿಕಾರಿ 2. ಪ್ರಯೋಗಾಲಯ ತಂತ್ರಜ್ಞ 3. ಸ್ಟಾಫ್‌ ನರ್ಸ್‌ 4. ಗ್ರೂಪ್ ‘ಡಿ’ ನೌಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT