ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ | ಮಳೆಗೆ ಮೈದುಂಬಿದ ನಂದರಗಾ ಕೆರೆ

ನರೇಗಾ ಯೋಜನೆಯಡಿ ನಿರ್ಮಿಸಿದ್ದ ಕೆರೆ: ರೈತರಲ್ಲಿ ಸಂತಸ
Published 8 ಜೂನ್ 2024, 6:28 IST
Last Updated 8 ಜೂನ್ 2024, 6:28 IST
ಅಕ್ಷರ ಗಾತ್ರ

ಅಫಜಲಪುರ: ಕಳೆದ ಮೂರು ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಕೆರೆಕಟ್ಟೆಗಳು ಬತ್ತಿ ಹೋಗಿದ್ದವು. ಆದರೆ ಪ್ರಸ್ತುತ ವರ್ಷ ಜೂನ್ ತಿಂಗಳ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ನಂದರಗಾ ಗ್ರಾಮದ ಹತ್ತಿರ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ಕೆರೆ ಭರ್ತಿಯಾಗಿದ್ದು, ಈ ಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರು ಅನುಕೂಲವಾಗಿದೆ. ಜೊತೆಗೆ ಅಂತರ್ಜಲ ಮಟ್ಟ ಏರಿಕೆ ಆಗುತ್ತಿದೆ.

ತಾಲ್ಲೂಕಿನ ಅಲ್ಲಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜಮೀನಿನ ತೇವಾಂಶ ಹೆಚ್ಚಳವಾಗುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಜನರು ಮಳೆಯನ್ನು ಕಂಡಿರಲಿಲ್ಲ. ಆದರೆ ಪ್ರಸ್ತುತ ವರ್ಷ ಮೇ ತಿಂಗಳ ಕೊನೆಯ ವಾರದಿಂದ ಆಗುತ್ತಿರುವ ಮಳೆಯಿಂದ ರೈತರ ಜಮೀನಿನ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತಿರುವುದರಿಂದ ಅನುಕೂಲವಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಾಬುರಾವ್ ಜ್ಯೋತಿ ಮಾಹಿತಿ ನೀಡಿ, ‘ಕಳೆದ 15 ದಿನಗಳಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಅಲ್ಪ ಸ್ವಲ್ಪ ಕೃಷಿ ಹೊಂಡಗಳು, ಕೆರೆಗಳಿಗೆ ನೀರು ಬರುತ್ತಿರುವುದರಿಂದ ಮತ್ತು ಭೂಮಿ ತೇವಾಂಶ ಹೆಚ್ಚಳವಾಗುತ್ತಿರುವುದರಿಂದ ಬಿಸಿಲಿನ ತಾಪತ್ರಯವೂ ಕಡಿಮೆಯಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗಿದೆ. ನಿರಂತರವಾಗಿ ಮಳೆ ಬಂದರೆ ಅನುಕೂಲವಾಗುತ್ತದೆ’ ಎಂದರು.

‘ನಮ್ಮ ಗ್ರಾಮದ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ಕೆರೆ ಮಳೆ ನೀರಿನಿಂದ ತುಂಬಿಕೊಂಡಿದ್ದು ಇಡೀ ಗ್ರಾಮಸ್ಥರಿಗೆ ಸಂತೋಷವಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ಅನುಕೂಲವಾಗಿದೆ. ಗ್ರಾಮದ ಕೊಳವೆಬಾವಿಗಳು ಬತ್ತಿ ಹೋಗಿದ್ದವು. ನೀರಿನ ಸಮಸ್ಯೆ ಗಂಭೀರವಾಗಿತ್ತು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ದೊಡ್ಡಮನಿ ಹೇಳಿದರು.

ಸಂತೋಷ್  ದೊಡ್ಡಮನಿ
ಸಂತೋಷ್  ದೊಡ್ಡಮನಿ
ಹಣಮಂತರಾಯ ಬಿರಾದಾರ
ಹಣಮಂತರಾಯ ಬಿರಾದಾರ

ನರೇಗಾ ಯೋಜನೆ ಗ್ರಾಮಗಳ ಮತ್ತು ಕೃಷಿ ಅಭಿವೃದ್ಧಿಗೆ ಬಹಳ ಅನುಕೂಲವಾಗಿದೆ. ಅದಕ್ಕಾಗಿ ಸರ್ಕಾರ ಕೆರೆಗಳು ಒತ್ತುವರಿಯಾಗದಂತೆ ಸುತ್ತಲೂ ತಂತಿಬೆಲೆ ಹಾಕಬೇಕು.

-ಕೆರೆಗಳ ರಕ್ಷಣೆ ಮಾಡಬೇಕು. ಸಂತೋಷ್ ದೊಡ್ಡಮನಿ ಗ್ರಾ.ಪಂ. ಮಾಜಿ ಸದಸ್ಯ

ಕಳೆದ ಮೂರು ವರ್ಷಗಳಿಂದ ನಾವು ಕೆರೆಗೆ ನೀರು ಕಂಡಿರಲಿಲ್ಲ ಆದರೆ ಬುಧವಾರ ಸುರಿದ ಮಳೆಗೆ ನಂದರಗಾ ಗ್ರಾಮದ ಕೆರೆ ತುಂಬಿದ್ದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗಿದೆ

- ಹಣಮಂತರಾಯ ಬಿರಾದಾರ ಜೇವರ್ಗಿ (ಬಿ) ಗ್ರಾಮದ ರೈತ ಮುಖಂಡ

ಕೆರೆ ನಿರ್ಮಾಣಕ್ಕೆ ಅನುದಾನ ಬಳಸಿ’ ನರೇಗಾ ಯೋಜನೆ ಹೊರತುಪಡಿಸಿ ಇನ್ನಾವುದೇ ಯೋಜನೆ ಅಡಿಯಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲು ಗ್ರಾಮ ಪಂಚಾಯತಿಗಳಿಗೆ ಅನುದಾನ ಇರುವುದಿಲ್ಲ. ಅದಕ್ಕಾಗಿ ಈ ಯೋಜನೆಯಲ್ಲಿ ಕೆರೆಗಳ ನಿರ್ಮಾಣಕ್ಕೆ ಬೇಕಾದಷ್ಟು ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಯವರು ತಮ್ಮ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಕೆರೆಗಳ ನಿರ್ಮಾಣ ಕುರಿತು ಕಡ್ಡಾಯವಾಗಿ ಅನುದಾನ ನಿಗದಿಪಡಿಸಿದರೆ ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಮತ್ತು ಇದರಿಂದ ಕೃಷಿಗೂ ಅನುಕೂಲವಾಗುತ್ತದೆ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ್ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT