ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಹಿತಕ್ಕಾಗಿ ಸಂಶೋಧನೆ ಮಾಡಿ; ಡಾ. ಅನುಪಮಾ

Last Updated 2 ಜುಲೈ 2022, 4:42 IST
ಅಕ್ಷರ ಗಾತ್ರ

ಕಲಬುರಗಿ: ‘ವಿದ್ಯಾರ್ಥಿಗಳು ಸಮಾಜದ ಹಿತ ಗಮನದಲ್ಲಿ ಇರಿಸಿಕೊಂಡುಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಬಯೋಕಾನ್ ಫೌಂಡೇಷನ್‌ನ ಮಿಷನ್ ಡೈರೆಕ್ಟರ್ ಡಾ. ಅನುಪಮಾ ಶೆಟ್ಟಿ ಸಲಹೆ ನೀಡಿದರು.

ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಶುಕ್ರವಾರ ನಡೆದ ‘ಬಹುಶಿಸ್ತೀಯ ಸಂಶೋಧನೆಯಲ್ಲಿ ಇತ್ತೀಚಿನ ಆವಿಷ್ಕಾರಗಳು’ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಆರೋಗ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣದಂಥ ಸೇವೆಗಳನ್ನು ಸಮಾಜಕ್ಕೆ ತಲುಪಿಸಲು ಬಯೋಕಾನ್‌ ಫೌಂಡೇಷನ್‌ ಸಾಕಷ್ಟು ಸಂಶೋಧನೆ ಮತ್ತು ಅಧ್ಯಯನ ಮಾಡಿದೆ. ನೀವು ಸಹ ಅದೇ ಹಾದಿಯಲ್ಲಿ ಸಾಗಿ, ಸರಿಯಾಗಿ ಅಧ್ಯಯನ ಮಾಡಿ, ಸಮಸ್ಯೆಗಳನ್ನು ಅರಿತು ಜನರಿಗೆ ಮನವರಿಕೆ ಮಾಡಬೇಕು’ ಎಂದರು.

‘ದೇಶದ ಶೇ 50ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಕಾಡುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಪ್ರತಿ ವಾರ ಕಬ್ಬಿಣಾಂಶದ ಮಾತ್ರೆಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಕೊಡುತ್ತಿದೆ. ಆದರೆ, ಹೊಟ್ಟೆ ನೋವು, ತಲೆ ಸುತ್ತು ಬರುತ್ತೆ ಎಂಬ ನೆಪದಿಂದ ಬಹುತೇಕರು ಅದನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಇದನ್ನು ಅರಿತ ಬಯೋಕಾನ್ ಫೌಂಡೇಷನ್‌ ಒಂದು ವರ್ಷ ಕಾಲ ಸಂಶೋಧನೆ ಮಾಡಿ, ಚಾಕೊಲೇಟ್‌ ರೂಪದಲ್ಲಿ ಮಾತ್ರೆ ತಯಾರಿಸಿ ಶಾಲಾ ಮಕ್ಕಳಿಗೆ ನೀಡಿತು. ಆ ಬಳಿಕ ಅವರಲ್ಲಿ ಶೇ 1ರಷ್ಟುಹಿಮೊಗ್ಲೋಬಿನ್ ಪ್ರಮಾಣ ಹೆಚ್ಚಾಯಿತು. ಈ ಬಗ್ಗೆ ಬೀದಿ ನಾಟಕಗಳ ಮೂಲಕ ರಕ್ತಹೀನತೆ ಬಗ್ಗೆ ಅರಿವು ಮೂಡಿಸಿ, ಕಬ್ಬಿಣಾಂಶ ಚಾಕೊಲೇಟ್ ಸೇವೆನೆ ಪರಿಣಾಮದ ಬಗ್ಗೆಯೂ ತಿಳಿವಳಿಕೆ ನೀಡಲಾಯಿತು’ ಎಂದು ವಿವರಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ,‘ವಿದ್ಯಾರ್ಥಿ ಗಳು ಸಮ್ಮೇಳನದ ಪ್ರಯೋಜನ ಪಡೆಯಬೇಕು. ಎಂಜಿನಿಯರಿಂಗ್ ವಿಭಾಗಗಳ ಹೊರತಾಗಿ, ಭವಿಷ್ಯದ ವಿಜ್ಞಾನಿ ಮತ್ತು ತಂತ್ರಜ್ಞರಾಗಿ ರೂಪಿಸುವಲ್ಲಿ ಸಂಶೋಧನೆಯು ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

‘ಆರಂಭದಲ್ಲೇ ತಪಾಸಣೆ ಮಾಡಿಸಿಕೊಳ್ಳಿ’
‘ಬಹುತೇಕ ಕ್ಯಾನ್ಸರ್‌ ರೋಗಿಗಳು 3ನೇ ಅಥವಾ 4ನೇ ಹಂತ ತಲುಪಿದ ಬಳಿಕ ವೈದ್ಯರನ್ನು ಭೇಟಿ ಮಾಡುತ್ತಿದ್ದಾರೆ. ಆ ವೇಳೆಗೆ ಅದು ಗಂಭೀರ ಸ್ವರೂಪಕ್ಕೆ ತಿರುಗಿ, ಚಿಕಿತ್ಸೆ ವೆಚ್ಚವೂ ಹೆಚ್ಚಳವಾಗುತ್ತಿದೆ. ಕೆಲವೊಮ್ಮೆ ಪ್ರಾಣ ಹಾನಿಯೂ ಸಂಭವಿಸುತ್ತದೆ. ಎಲ್ಲರೂ ಈ ಕುರಿತು ಎಚ್ಚರಿಕೆ ವಹಿಸುವ ಕೆಲಸ ಮಾಡಬೇಕು ಎಂದು ಡಾ. ಅನುಪಮಾ ಶೆಟ್ಟಿ ಅವರು ಹೇಳಿದರು.

‘ಆರಂಭಿಕ ಹಂತದಲ್ಲಿ ರೋಗಗಳ ಬಗ್ಗೆ ತಿಳಿಯಲು ಓರಲ್ ಕ್ಯಾನ್ಸರ್ ಸ್ಕ್ರೀನಿಂಗ್ ಪ್ರೋಗ್ರಾಮ್‌ ಸಾಧನ ಅಭಿವೃದ್ಧಿ ಪಡಿಸಲಾಯಿತು. ಆಶಾ ಕಾರ್ಯಕರ್ತೆಯರು ರೋಗಿಯ ಬಾಯಿಯ ಚಿತ್ರ ತೆಗೆದು ಕಳುಹಿಸಿದರೆ, ತಜ್ಞರು ಅದನ್ನು ಪರಿಶೀಲಿಸಿ ತಿಳಿಸುವರು. ಇಂಥ ಸಾಧನಗಳನ್ನು ವಿದ್ಯಾರ್ಥಿಗಳು ಸಂಶೋಧಿಸಬೇಕು’ ಎಂದರು.

ಸರ್ಕಾರ ಜಾರಿಗೆ ತಂದ ಆರೋಗ್ಯ ಯೋಜನೆಗಳ ಕುರಿತು ಜನರಿಗೆ ಅರಿವು ಇಲ್ಲದಂತಾಗಿದೆ. ಭಾರತ ದೇಶದ ಶೇ.76.3 ರಷ್ಟು ಜನ ಗರಿಷ್ಠ ಹಾಗೂ ಉಳಿದವರು ಸರ್ಕಾರ ನಿಗದಿ ಪಡಿಸಿದ ಬೆಲೆಯಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದಾರೆ. ಇದರ ಬಗ್ಗೆಯೂ ಅರಿವು ಮೂಡಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ನಿಷ್ಠಿ ಅವರು ಅಧ್ಯಕ್ಷತೆ ವಹಿಸಿದ್ದರು. ಬಯೋಕಾನ್ ಅಕಾಡೆಮಿಯ ಶೈಕ್ಷಣಿಕ ವ್ಯವಸ್ಥಾಪಕ ಡಾ. ರಾಮಗೋಪಾಲ್ ರಾವ್, ಸಮಕುಲಪತಿ ಪ್ರೊ. ವಿ.ಡಿ.ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ. ಬಸವರಾಜ ಮಠಪತಿ ಅವರು ಇದ್ದರು.

ಇದೇ ಸಂದರ್ಭದಲ್ಲಿ ಚಿರಾಯು ಆಸ್ಪತ್ರೆಯ ಕಿಡ್ನಿ ತಜ್ಞ ಡಾ. ಮಂಜುನಾಥ್ ದೋಶೆಟ್ಟಿ, ಹಿರಿಯ ನೇತ್ರ ತಜ್ಞ ಡಾ. ವಿಶ್ವನಾಥ ರೆಡ್ಡಿ, ಕರ್ನಾಟಕ ವೈದ್ಯಕೀಯ ಪರಿಷತ್ತಿನ ಮಾಜಿ ಅಧ್ಯಕ್ಷ, ಮಕ್ಕಳ ತಜ್ಞ ಡಾ. ಎಚ್.ವೀರಭದ್ರಪ್ಪ, ಎಚ್‌ಸಿಜಿ ಆಸ್ಪತ್ರೆಯ ಓಂಕೊಲಾಜಿಸ್ಟ್ ಡಾ. ನಂದೀಶ್ ಜೀವಣಗಿ, ಯುನೈಟೆಡ್ ಆಸ್ಪತ್ರೆಯ ಡಾ. ಮೊಹಮ್ಮದ್ ಅಬ್ದುಲ್ ಬಷೀರ್ ಮತ್ತು ಡಾ. ಸುದರ್ಶನ ಲಾಖೆ, ಹಿರಿಯ ಮಕ್ಕಳ ತಜ್ಞ ಡಾ. ದಿನಕರ ಮೋರೆ, ಎಂಆರ್‌ಎಂಸಿ ಡೀನ್ ಡಾ. ಎಸ್.ಎಂ.ಪಾಟೀಲ, ಯಶೋಧಾ ಮಕ್ಕಳ ಆಸ್ಪತ್ರೆಯ ಡಾ. ಪ್ರಶಾಂತ ಕುಲಕರ್ಣಿ ಮತ್ತು ನರರೋಗ ತಜ್ಞ ಡಾ. ಶರಣಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

*

ಯಶಸ್ಸಿನ ಕಥೆಗಳನ್ನು ಹೇಳುವುದು ಅತ್ಯಂತ ಸರಳ. ಆದರೆ, ಅದನ್ನು ಸಾಧಿಸಿ ತೋರಿಸುವುದು ಬಹು ಕಠಿಣವಾದ ಕೆಲಸ. ಆ ಸಾಧನೆಯನ್ನು ಜಿಲ್ಲೆಯ ವೈದ್ಯರು ಮಾಡಿ, ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ.
-ಡಾ.ನಿರಂಜನ್ ನಿಷ್ಠಿ, ಶರಣಬಸವ ವಿ.ವಿ. ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT