ಮಂಗಳವಾರ, ಅಕ್ಟೋಬರ್ 26, 2021
21 °C
ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅಂಬಾಭವಾನಿ ಪ್ರತಿಷ್ಠಾಪ‍ನೆ, ಮಂದಿರಗಳಲ್ಲೂ ಒಂಬತ್ತು ದಿನಗಳ ವಿವಿಧ ಅಲಂಕಾರ, ಹರಿದುಬಂದ ಭಕ್ತರ ದಂಡು

ಕಲಬುರಗಿ: ನವರಾತ್ರಿ ವೈಭವಕ್ಕೆ ನವೋಲ್ಲಾಸದ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಎರಡು ವರ್ಷಗಳ ನಂತರ ನವರಾತ್ರಿ ಉತ್ಸವಕ್ಕೆ ಜಿಲ್ಲೆಯಲ್ಲಿ ಹೊಸ ಹುಮ್ಮಸ್ಸು ಬಂದಿದೆ. ನಗರವೂ ಸೇರಿ ಎಲ್ಲ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗ ಹಬ್ಬದ ವಾತಾವರಣ ಮನೆ ಮಾಡಿದೆ.

ಶಕ್ತಿದಾತೆ, ಜಗನ್ಮಾತೆ, ಕಾತ್ಯಾಯಿನಿ, ಭವಾನಿ, ಮಹಿಷಾಸುರ ಮರ್ದಿನಿ... ಎಂದೆಲ್ಲ ಕರೆಸಿಕೊಳ್ಳುವ ನವದುರ್ಗೆಯ ಪೂಜಾ ಕೈಂಕರ್ಯಗಳು ಸಂಭ್ರಮದಿಂದ ನಡೆದಿವೆ.

ಮೊದಲ ದಿನವಾದ ಗುರುವಾರ ಮೆರವಣಿಗೆ ಮೂಲಕ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಲಾಯಿತು. ನಗರದ ಬಹುತೇಕ ವೃತ್ತಗಳಲ್ಲಿ ಬೃಹತ್‌ ಪೆಂಡಾಲ್‌ಗಳನ್ನು ಹಾಕಿ, ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಹಬ್ಬದ ವೈಭವ ಮರುಕಳಿಸಿದೆ. ಝಗಮಗಿಸುವ ವಿದ್ಯುದ್ದೀಪಾಲಂಕಾರ, ತಳಿರುತೋರಣ, ಭಕ್ತಿ ಸಂಗೀತದ ನಾದವೇ ಮೊದಲಾಗಿದೆ.

ಅಂಬಾಭವಾನಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದು ಕಲ್ಯಾಣ ಕರ್ನಾಟಕ ಭಾಗದ ವೈಶಿಷ್ಟ್ಯ. ಉಳಿದ ಕಡೆ ದೇವಿಪೂಜೆ ಮಂದಿರ ಮತ್ತು ಮನೆಗಳಿಗೆ ಮಾತ್ರ ಸೀಮಿತ. ಈ ಬಾರಿ ಕೂಡ ನಗರದ ಯುವತಿ ಮಂಡಳಗಳು, ತರುಣ ಸಂಘಗಳು, ಗೆಳೆಯರ ಬಳಗಗಳು ತಮ್ಮ ಶಕ್ತಾನುಸಾರ ನವದುರ್ಗೆ ಮೂರ್ತಿ ಪ್ರತಿಷ್ಠಾಪನೆ ಮಾಡಿವೆ.

ಎಲ್ಲೆಲ್ಲಿ ಇವೆ ಮೂರ್ತಿಗಳು: ಜೇವರ್ಗಿ ಕಾಲೊನಿಯ ಜೈ ಭವಾನಿ ಸಂಘದವರು 25 ವರ್ಷಗಳಿಂದ ಭವಾನಿ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದಾರೆ. ಹಳೆ ಜೇವರ್ಗಿ ರಸ್ತೆ, ಹೊಸ ಜೇವರ್ಗಿ ರಸ್ತೆ, ಎನ್‌ಜಿಒ ಕಾಲೊನಿ, ಬ್ರಹ್ಮಪುರ, ಗೌಳಿಗರ ಗಲ್ಲಿ, ಮರಾಠಾ ಗಲ್ಲಿ, ಶಹಾಬಜಾರ್‌ ಮುಂತಾದ ಕಡೆ ಶಕ್ತಿಮಾತೆಯ ಆರಾಧನೆ ಜೋರಾಗಿ ನಡೆದಿದೆ.

ನಗರದ ಟ್ಯಾಂಕ್‌ ಬಂಡ್‌ ರಸ್ತೆಯ ಯಲ್ಲಮ್ಮ ದೇವಸ್ಥಾನ, ಲಾಳಗೇರಿಯ ತುಳಜಾಭವಾನಿ ದೇವಸ್ಥಾನ, ಮಕ್ತುಂಪುರದ ಅಂಬಾಭವಾನಿ, ಅಯ್ಯಾರವಾಡಿಯ ಭವಾನಿ ಮಂದಿರ, ಗುಬ್ಬಿ ಕಾಲೊನಿ, ಆಳಂದ ಚೆಕ್‌ಪೋಸ್ಟ್‌ ಬಳಿಯ ವೈಷ್ಣೋದೇವಿ ಮಂದಿರಗಳಲ್ಲಿಯೂ ಭಕ್ತರ ದಂಡು ಹರಿದುಬಂತು.

ಶಹಾಬಜಾರ್‌ನ ಜಗದಂಬಾ ದೇವಸ್ಥಾನದಲ್ಲಿ ಗುರುವಾರ ನಸುಕಿನಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಮಧ್ಯಾಹ್ನ 3 ಗಂಟೆಗೆ ಗೌರಿ–ಗಣೇಶ ಅಲಂಕಾರ ಮಾಡಲಾಯಿತು. ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ವಿದ್ಯುತ್‌ ಬಲ್ಬ್‌, ದೀಪದಾರತಿಗಳಿಂದ ಮಂದಿರ ಕಂಗೊಳಿಸಿತು.

ಮಂದಿರದ ಅರ್ಚಕರು ಹಾಗೂ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಮುಖಂಡರು ಆರತಿ ಮಾಡಿದರು. ಒಂಬತ್ತು ದಿನಗಳವರೆಗೂ ಒಂದೊಂದು ದಿನ ಒಂದು ಅಲಂಕಾರ ಮಾಡುವುದು ಈ ಮಂದಿರದ ವಿಶೇಷತೆ. ಪ್ರತಿ ವರ್ಷ ಆಚರಿಸುತ್ತಿದ್ದ ಸಂಗೀತ, ಸ್ಪರ್ಧೆ, ಭಜನೆಗಳನ್ನು ಈ ಬಾರಿ ಕೈಬಿಡಲಾಗಿದೆ. ಆದರೆ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಭಕ್ತರ ದಂಡು ಹರಿದುಬಂದಿದೆ.

ಬ್ರಹ್ಮಪುರದ ಮೋಚೆ ಗಲ್ಲಿಯ ಈಶ್ವರಿ ತರುಣ ಸಂಘದ ಆಚರಣೆ ಇನ್ನೂ ವಿಶಿಷ್ಟ. ಇಲ್ಲಿನ ನವರಾತ್ರಿ ಉತ್ಸವ ಐದೇ ದಿನಕ್ಕೆ ಸೀಮಿತ. ಹಿರಿಯರು ಮೊದಲಿನಿಂದ ಇದೇ ರೀತಿ ಆಚರಿಸಿಕೊಂಡು ಬಂದಿದ್ದಾರೆ. ಪ್ರತಿದಿನವೂ ಫಲ, ತಾಂಬೂಲ, ಪುಷ್ಪ, ವಸ್ತ್ರ, ವಿವಿಧ ದ್ರವ್ಯಗಳ ಅಲಂಕಾರ ನೆರವೇರಿಸಲಾಗುತ್ತಿದೆ. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಫಲ ಅಲಂಕಾರ, ಮಂಗಳಾರತಿ, ನೈವೇದ್ಯ ಇರುತ್ತದೆ. ರಾತ್ರಿ ಕೂಡ ಭಜನೆ– ಪೂಜಾಕಾರ್ಯ ನಿರಂತರವಾಗಿರುತ್ತವೆ ಎನ್ನುವುದು ದೇವಸ್ಥಾನದ ಅರ್ಚಕರ ಮಾಹಿತಿ.

ಅಯ್ಯಾರವಾಡಿಯ ಅಂಬಾಭವಾನಿ ಮಂದಿರದಲ್ಲೂ ಪ್ರತಿದಿನ ಒಂದೊಂದು ರೀತಿಯ ಹೋಮ– ಹವನಗಳನ್ನೂ ಏರ್ಪಡಿಸಲಾಗಿದೆ. ತುಳಜಾಭವಾನಿಯ ಪ್ರತಿರೂಪದಂತೆಯೇ ಈ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ವಿಶೇಷ.

ನವದುರ್ಗೆ ಅಲಂಕಾರಗಳು
* ಶೃಂಗೇರಿ ಶಾರದಾಂಬೆ
* ಕಂಚಿ ಕಾಮಾಕ್ಷಿ
* ಮಧುರೈ ಮೀನಾಕ್ಷಿ
* ಅನ್ನಪೂರ್ಣೇಶ್ವರಿ
* ಪಾರ್ವತಿ
* ಸರಸ್ವತಿ
* ಸಂತಾನಲಕ್ಷ್ಮಿ
* ದುರ್ಗಾಪರಮೇಶ್ವರಿ
* ಸಂತೋಷಿಮಾತಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.