ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕುಗಳ ಉಲ್ಲಂಘನೆ: 5ರಂದು ವಿಚಾರಣೆ

ಕಲಬುರ್ಗಿಯಲ್ಲಿ ಎನ್.ಸಿ.ಪಿ.ಸಿ.ಆರ್. ಪೀಠ
Last Updated 1 ಜುಲೈ 2019, 16:34 IST
ಅಕ್ಷರ ಗಾತ್ರ

ಕಲಬುರ್ಗಿ: ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಕಲಬುರ್ಗಿ ವಿಭಾಗದ ಆರು ಜಿಲ್ಲೆಗಳ ಪ್ರಕರಣಗಳ ವಿಚಾರಣೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದದ್ವಿಸದಸ್ಯ ಪೀಠವು ಜುಲೈ 5ರಂದು ನಗರದಲ್ಲಿ ವಿಚಾರಣೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದ್ದಾರೆ.

ಆಯೋಗದ ಸದಸ್ಯರಾದ ಡಾ.ಆರ್.ಜಿ.ಆನಂದ ಮತ್ತು ಪ್ರಜ್ಞಾ ಪ್ರಾಂಡೆ ಅವರ ನೇತೃತ್ವದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ. ಸಾರ್ವಜನಿಕರು, ಮಕ್ಕಳು ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಅಹವಾಲನ್ನು ಮುಕ್ತವಾಗಿ ಇಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಯೋಗದ ಪೀಠವು ಕೋರ್ಟ್ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಅರ್ಜಿ ಸ್ವೀಕರಿಸಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ, ಕಾರ್ಯ ಕಲಾಪಕ್ಕೆ ಅಗತ್ಯವಿರುವ ಮೇಜು, ಕಂಪ್ಯೂಟರ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಆಯೋಗದ ಅಧಿಕಾರಿಗಳ ತಂಡ ಜುಲೈ 3ರಂದು ನಗರಕ್ಕೆ ಬರಲಿದ್ದು, ಜುಲೈ 3–4ರಂದು ಜಿಲ್ಲಾಡಳಿತದ ಅಧಿಕಾರಿಗಳು ಮ್ತತು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಸ್ಥಳ ಆಯ್ಕೆ ಮಾಡಲಿದ್ದಾರೆ.

ಅಹವಾಲು ಪ್ರಕ್ರಿಯೆ ಹೇಗೆ: ಜುಲೈ 5ರಂದು ಬೆಳಿಗ್ಗೆ 9ಕ್ಕೆ ದೂರನ್ನು ನಿಗದಿಪಡಿಸಿದ ನೋಂದಣಿ ಕೌಂಟರ್‌ಗಳಲ್ಲಿ ಸಲ್ಲಿಸಿ ಟೋಕನ್ ಪಡೆಯಬೇಕು. ಅರ್ಜಿ ಸ್ವೀಕರಿಸಿದ ನಂತರ ಅಧಿಕಾರಿಗಳ ತಂಡ ಅರ್ಜಿ ಪರಾಮರ್ಶಿಸಿ ಸಂಕ್ಷಿಪ್ತ ಟಿಪ್ಪಣಿಯೊಂದಿಗೆ ಆಯೋಗದ ಪೀಠಕ್ಕೆ ಸಲ್ಲಿಸುತ್ತದೆ. ಪೀಠವು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುತ್ತದೆ. ಅರ್ಜಿದಾರರು ಪೀಠದ ಮುಂದೆ ಹಾಜರಾಗಿ ವಾದ ಮಂಡಿಸಬಹುದು.

ಇವುಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಬಹುದು: ಅಪಾಯಕಾರಿ ಉದ್ಯೋಗದಲ್ಲಿ ಮಕ್ಕಳ ತೊಡಗಿಸುವಿಕೆ. ಮಕ್ಕಳಿಗೆ ಪರಿಹಾರ ನೀಡದಿರುವುದು. ಬಾಲಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸದಿರುವುದು. ರಸ್ತೆಯಲ್ಲಿ ಉತ್ಪನ್ನ ಮಾರಾಟದಲ್ಲಿ ತೊಡಗಿರುವ ಮಕ್ಕಳು. ಆ್ಯಸಿಡ್ ದಾಳಿಗೆ ಒಳಗಾದ ಮಕ್ಕಳು ರಸ್ತೆ ಬದಿಯಲ್ಲಿ ಪಾಲಕರು– ಸಂಬಂಧಿಕರೊಂದಿಗೆ ಭಿಕ್ಷೆ ಬೇಡುವ ಮಕ್ಕಳು. ಬಲವಂತದ ಭಿಕ್ಷಾಟನೆ, ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳ. ನಿರ್ಲಕ್ಷ್ಯ, ಗೃಹ ಹಿಂಸಾರಕ್ಕೆ ಮಕ್ಕಳ ಬಲಿಪಶು. ಎಚ್.ಐ.ವಿ.ಭಾದಿತ ಮಕ್ಕಳಿಗೆ ತಾರತಮ್ಯದಿಂದ ಕಾಣುವುದು. ಪೊಲೀಸರಿಂದ ಮಕ್ಕಳ ಮೇಲೆ ಹಲ್ಲೆ ಮತ್ತಿತರ ಸಮಸ್ಯೆಗಳಿಂದ ಸಂಬಂಧಿಸಿದಂತೆ ದೂರು ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT