ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ–ಕೊಲ್ಹಾಪುರ ಮಧ್ಯೆ ರೈಲು ಸಂಚಾರ ಆರಂಭ

ಹಸಿರು ನಿಶಾನೆ ತೋರಿಸಿದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ರಾವ್ ಸಾಹೇಬ್
Last Updated 16 ಸೆಪ್ಟೆಂಬರ್ 2022, 9:52 IST
ಅಕ್ಷರ ಗಾತ್ರ

ಕಲಬುರಗಿ: ಈ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಕಲಬುರಗಿ–ಕೊಲ್ಹಾಪುರ (22115-22116) ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ರಾಜ್ಯ ಸಚಿವ ರಾವ್ ಸಾಹೇಬ್ ಪಾಟೀಲ ದಾನ್ವೆ ಹಾಗೂ ಸ್ಥಳೀಯ ಸಂಸದ ಡಾ. ಉಮೇಶ ಜಾಧವ ಶುಕ್ರವಾರ ಚಾಲನೆ ನೀಡಿದರು.

ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಧಾನ ಕಚೇರಿಯಿಂದ ವರ್ಚುವಲ್ ವೇದಿಕೆ ಮೂಲಕ ರೈಲಿಗೆ ಹಸಿರು ನಿಶಾನೆ ತೋರಿಸಿದ ಸಚಿವ ಜೋಶಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರವು ತಮ್ಮದು ಬಡವರ ಪರವಾಗಿದೆ. ಎಲ್ಲ ಸೌಲಭ್ಯಗಳು ಎಲ್ಲರಿಗೂ ದೊರಕಬೇಕು ಎಂಬ ಆಶಯ ಹೊಂದಿದೆ. ಅದಕ್ಕೆ ತಕ್ಕಂತೆ ಮೋದಿ ಅವರು ಕಳೆದ ಎಂಟು ವರ್ಷಗಳಿಂದ ರೈಲು, ವಾಯು ಹಾಗೂ ರಸ್ತೆ ಸಂಪರ್ಕಗಳನ್ನು ಉತ್ತಮ ಪಡಿಸಿದ್ದಾರೆ. ಹಿಂದಿನ ಸರ್ಕಾರಗಳು ಸಾಧಿಸಿದ್ದಕ್ಕಿಂತ ಹಲವು ಪಟ್ಟು ಸಾಧನೆಯನ್ನು ಈ ಎಂಟು ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿದೆ’ ಎಂದರು.

‘2007–14ರ ಅವಧಿಯಲ್ಲಿ 4360 ಕಿ.ಮೀ. ರೈಲು ಮಾರ್ಗ ವಿದ್ಯುದೀಕರಣಗೊಂಡಿತ್ತು. ನಮ್ಮ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ 2014–22ರ ಅವಧಿಯಲ್ಲಿ 30,446 ಕಿ.ಮೀ. ಮಾರ್ಗ ವಿದ್ಯುದೀಕರಣ ಮಾಡಲಾಗಿದೆ. 2021–22ರ ಅವಧಿಯಲ್ಲೇ 6366 ಕಿ.ಮೀ. ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದೆ. ಇದರಿಂದಾಗಿ ರೈಲ್ವೆಗೆ ಡೀಸೆಲ್ ಖರೀದಿಗೆ ತಗಲುತ್ತಿದ್ದ ವೆಚ್ಚದಲ್ಲಿ ಗಣನೀಯ ಇಳಿಕೆಯಾಗಿದೆ’ ಎಂದು ಹೇಳಿದರು.

ರೈಲುಗಳಲ್ಲಿ ಜೈವಿಕ ಶೌಚಾಲಯಗಳ ನಿರ್ಮಾಣ, ಆಧುನಿಕ ರೈಲ್ವೆ ಬೋಗಿಗಳ ತಯಾರಿಕೆ, ವಂದೇ ಭಾರತ್, ಗತಿ ಶಕ್ತಿ ಯೋಜನೆಗಳಿಂದಾಗಿ ರೈಲ್ವೆ ಪ್ರಯಾಣ ಇನ್ನಷ್ಟು ಆರಾಮದಾಯಕವಾಗಿದೆ’ ಎಂದರು.

‘ಪ್ರತಿ ನಿತ್ಯ 38 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಗಣಿ ಮತ್ತು ಕಲ್ಲಿದ್ದಲು ಇಲಾಖೆಯು ರೈಲ್ವೆಯ ಪ್ರಮುಖ ಗ್ರಾಹಕನಾಗಿದ್ದು, ವಾರ್ಷಿಕವಾಗಿ 700 ಮಿಲಿಯನ್ ಟನ್ ಸಾಗಾಟ ಮಾಡುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಪ್ರಮಾಣ 445 ಮಿಲಿಯನ್ ಟನ್ ಇತ್ತು’ ಎಂದು ಹೇಳಿದರು.

ವರ್ಚುವಲ್ ಮೂಲಕ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ಪಾಟೀಲ ದಾನ್ವೆ, ‘ಈ ರೈಲು ಆರಂಭವಾಗುವ ಮೂಲಕ ಕಲಬುರಗಿ ಜನತೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಕಲಬುರಗಿ, ಗಾಣಗಾಪುರ, ಸೊಲ್ಲಾಪುರ, ಪಂಢರಾಪುರ ಮೂಲಕ ಕೊಲ್ಹಾಪುರ ತಲುಪಲಿದೆ. ಮಿರಜ್–ಸೋಲಾಪುರ ಮಧ್ಯೆ ಸಂಚರಿಸುತ್ತಿದ್ದ ರೈಲನ್ನು ಕಲಬುರಗಿ–ಕೊಲ್ಹಾಪುರದವರೆಗೆ ವಿಸ್ತರಿಸಲಾಗಿದೆ’ ಎಂದರು.

ಸಂಸದ ಡಾ. ಉಮೇಶ ಜಾಧವ್ ಮಾತನಾಡಿ, ‘ಈ ರೈಲನ್ನು ಆರಂಭಿಸುವಂತೆ ಮನವಿ ಮಾಡಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಬಳಿ ತೆರಳಿದ್ದವು. ತಕ್ಷಣವೇ ಸ್ಪಂದಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕರೆ ಮಾಡಿ ರೈಲು ಆರಂಭಿಸುವಂತೆ ಮನವಿ ಮಾಡಿದರು. ಪೂರಕವಾಗಿ ಶಿಫಾರಸು ಪತ್ರವನ್ನೂ ನೀಡಿದರು’ ಎಂದು ತಿಳಿಸಿದರು.

ಮುಂಬೈನ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅನಿಲ್‌ ಕುಮಾರ್ ಲಹೋಟಿ, ಸೋಲಾಪುರ ವಿಭಾಗದ ವಿಭಾಗೀಯ ವ್ಯವಸ್ಥಾಪಕ ಶೈಲೇಶ್ ಗುಪ್ತಾ, ಹಿರಿಯ ಕಾರ್ಯಾಚರಣೆ ವ್ಯವಸ್ಥಾಪಕ ಪ್ರದೀಪ ಹಿರಡೆ ವೇದಿಕೆಯಲ್ಲಿದ್ದರು.

ರೈಲ್ವೆ ವಿಭಾಗ ಪ್ರಸ್ತಾಪಿಸದ ಸಂಸದ!

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ಪಾಟೀಲ ದಾನ್ವೆ, ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಲಹೋಟಿ ಅವರು ಭಾಗವಹಿಸಿದ್ದ ಸಭೆಯಲ್ಲಿ ಸಂಸದ ಡಾ. ಉಮೇಶ ಜಾಧವ್ ಅವರು ತಮ್ಮ ಭಾಷಣದಲ್ಲಿ ಕಲಬುರಗಿ ಜಿಲ್ಲೆಯ ಜನರ ಬೇಡಿಕೆಯಾದ ಪ್ರತ್ಯೇಕ ರೈಲ್ವೆ ವಿಭಾಗದ ಬೇಡಿಕೆ ಪ್ರಸ್ತಾಪಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಆ ಕುರಿತು ಯಾವುದೇ ಪ್ರಸ್ತಾಪ ಮಾಡಲಿಲ್ಲ.

‘ಸಂಸದರು ಈ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ್ದರೆ ಸಚಿವರಿಗೂ ಈ ಬೇಡಿಕೆಯ ಗಂಭೀರತೆ ಅರ್ಥವಾಗುತ್ತಿತ್ತು. ಅಲ್ಲದೇ, ಚುನಾವಣೆ ಸಂದರ್ಭದಲ್ಲಿ ಈ ವಿಚಾರವನ್ನೇ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ್ದರು. ಪ್ರಮುಖ ಸಭೆಯಲ್ಲಿ ಪ್ರಸ್ತಾಪಿಸದೇ ಇರುವ ಮೂಲಕ ಸಂಸದರು ಒಂದು ಸುವರ್ಣ ಅವಕಾಶವನ್ನು ಕಳೆದುಕೊಂಡರು’ ಎಂದು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯರೊಬ್ಬರು ತಿಳಿಸಿದರು.

ನೂತನ ರೈಲಿನ ವೇಳಾಪಟ್ಟಿ

ಕಲಬುರಗಿಯಿಂದ ನಿತ್ಯ ಬೆಳಿಗ್ಗೆ 6.40ಕ್ಕೆ ಹೊರಡುವ ರೈಲು ಗಾಣಗಾಪುರ, ಅಕ್ಕಲಕೋಟ, ಸೋಲಾಪುರ, ಕುರ್ದವಾಡಿ, ಪಂಢರಪುರ, ಮಿರಜ್, ಜೈಸಿಂಗ್‌ಪುರ, ಹಾತಕಲಂಗಲಿ ಮಧ್ಯೆ ಸಂಚರಿಸಿ ಮಧ್ಯಾಹ್ನ 2.15ಕ್ಕೆ ಕೊಲ್ಹಾಪುರ ಸಂಚರಿಸಲಿದೆ.

ಅಲ್ಲಿಂದ ಅದೇ ದಿನ ಮಧ್ಯಾಹ್ನ 3ಕ್ಕೆ ಹೊರಡುವ ರೈಲು ರಾತ್ರಿ 10.45ಕ್ಕೆ ಕಲಬುರಗಿ ತಲುಪಲಿದೆ. 10 ದ್ವಿತೀಯ ದರ್ಜೆ ಕುಳಿತುಕೊಳ್ಳುವ ಬೋಗಿಗಳಿ, ಎರಡು ಜನರಲ್ ಬೋಗಿಗಳು ಈ ರೈಲಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT