ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಅಡ್ಡಗಾಲು ಹಾಕುವುದು ಮಹಿಳೆಯೇ : ಸಚಿವೆ ಶಶಿಕಲಾ ಜೊಲ್ಲೆ ಅಭಿಮತ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಅಣ್ಣಾರಾವ್ ಜೊಲ್ಲೆ ಅಭಿಮತ
Last Updated 24 ಡಿಸೆಂಬರ್ 2019, 12:31 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಹಿಳೆಯರ ಸಾಧನೆಯ ಹಾದಿಯಲ್ಲಿ ಪುರುಷರು ಎಂದೂ ಅಡ್ಡ ಬಂದಿಲ್ಲ. ಹಾಗೇನಾದರೂ ಅಡ್ಡ ಬರುವುದು ಹೆಣ್ಣುಮಕ್ಕಳೇ ಹೊರತು ಪುರುಷರು ಅಲ್ಲ. ಇದು ಅತ್ಯಂತ ಬೇಸರದ ಸಂಗತಿ’ ಎಂದು ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಶಶಿಕಲಾ ಅಣ್ಣಾಸಾಹೇಬ್ಜೊಲ್ಲೆ ಹೇಳಿದರು.

ಇಲ್ಲಿನ ಖೂಬಾ ಪ್ಲಾಟ್‌ನಲ್ಲಿ ಆಯೋಜಿಸಿದ ಅಕ್ಕ ಅನ್ನಪೂರ್ಣ ತಾಯಿ ಅವರ ಪ್ರವಚನ ವೇದಿಕೆಯಲ್ಲಿ ಸೋಮವಾರ ಬಸವಸೇವಾ ಪ್ರತಿಷ್ಠಾನ ಮತ್ತು ನೀಲಮ್ಮನ ಬಳಗದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ಇಷ್ಟೆಲ್ಲ ಬೆಳೆದ ಮೇಲೂ ಮಹಿಳೆಯರು ಇನ್ನೂ ಹಿಂದಿದ್ದಾರೆ. ಸಾಧನೆ ಹಾದಿಯಲ್ಲಿ ಹಲವು ಅಡತಡೆ ಎದುರಿಸುತ್ತಿದ್ದಾರೆ. ಒಬ್ಬ ಮಹಿಳೆ ಸಾಧನೆಗೆ ಇನ್ನೊಬ್ಬ ಮಹಿಳೆ ಅಡ್ಡಗಾಲು ಹಾಕುವುದು ತಲೆತಲಾಂತರಗಳಿಂದ ನಡೆದುಬಂದಿದೆ. ಇದನ್ನು ಮುರಿದು ಒಮ್ಮತದಿಂದ ಮುನ್ನಡೆಯಬೇಕಿದೆ’ ಎಂದರು.

‘ಈಗಲೂ ಬಹುತೇಕ ತಾಯಂದಿರಿಗೆ, ಅತ್ತೆಯಂದಿರಿಗೆ ಹೆಣ್ಣು ಮಗುವೇ ಬೇಡವಾಗಿದೆ. ಸೊಸೆ ಹೆಣ್ಣು ಹೆತ್ತರೆ ಅತ್ತೆಯೇ ಮುಖ ಸಿಂಡರಿಸಿಕೊಳ್ಳುತ್ತಾಳೆ. ಮಗಳು ಹೆಣ್ಣು ಹೆತ್ತರೆ ತಾಯಿಯೇ ಮುಖ ಕಿವುಚುತ್ತಾಳೆ. ಇಂಥ ಮನಸ್ಥಿತಿಗಳೇ ಹೆಣ್ಣುಭ್ರೂಣ ಹತ್ಯೆಯಂಥ ಕೃತ್ಯ ಮಾಡಿಸುತ್ತಿದೆ. ತಂದೆ ಅಥವಾ ಮಾವ ಹೆಣ್ಣುಮಕ್ಕಳು ಹುಟ್ಟಿದರೆ ಮನೆಯ ಲಕ್ಷ್ಮಿ ಜನಿಸಿದ್ದಾಳೆ ಅಥವಾ ಅವರ ತಾಯಿಯೇ ಮರು ಹುಟ್ಟು ಪಡೆದಿದ್ದಾಳೆ ಎಂಬಷ್ಟು ಸಂತೋಷ ಪಡುತ್ತಾರೆ’ ಎಂದು ಅವರು ವಿವರಿಸಿದರು.

‘ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ‘ಭಾಗ್ಯಲಕ್ಷ್ಮಿ’ ಬಾಂಡ್ ಯೋಜನೆಯನ್ನು ಹಿಂದಿನ ಸರ್ಕಾರ ನಿಲ್ಲಿಸಿತ್ತು. ನಾವು ಅದನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ. ಹೆಣ್ಣು ಮತ್ತು ಗಂಡು ಮಕ್ಕಳ ವಿಷಯದಲ್ಲಿ ನಡೆಯುತ್ತಿರುವ ತಾರತಮ್ಯ ಹೊಗಲಾಡಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದರು.

ಚಿಕ್ಕೋಡಿ ಸಂಸದ, ಶಶಿಕಲಾ ಅವರ ಪತಿ ಅಣ್ಣಾರಾವ್ ಜೊಲ್ಲೆ ಅವರು ‘ಬಸವದರ್ಶನ’ ಗ್ರಂಥ ಬಿಡುಗಡೆ ಮಾಡಿದರು. ಅಕ್ಕ ಅನ್ನಪೂರ್ಣ ತಾಯಿ, ಸರ್ಕಾರಿ ಅಭಿಯೋಜಕಿ ಅನುರಾಧಾ ದೇಸಾಯಿ, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ, ಮಾಜಿ ಸಚಿವ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ, ಸಿದ್ರಾಮ ಪ್ಯಾಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ, ರಾಜಶೇಖರ ಯಂಕಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT