ಮಂಗಳವಾರ, ಜೂನ್ 2, 2020
27 °C
ದಾಸೋಹ ಭಂಡಾರಿ ದೊಡ್ಡಪ್ಪ ಅಪ್ಪ, ವಿದ್ಯಾ ಭಂಡಾರಿ ಡಾ.ಶರಣಬಸವಪ್ಪ ಅಪ್ಪಗೆ ಮೊಳಗಿದ ಜೈಕಾರ

ಊರ ಬೆಳಗಿದ ಉಚ್ಚಾಯಿ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಸಂಜೆ ಉಚ್ಚಾಯಿ ಮಹೋತ್ಸವ ವೈಭೋಗದೊಂದಿಗೆ ನೆರವೇರಿತು. ಮಹಾದಾಸೋಹ ಪೀಠ ಸ್ಥಾಪಿಸಿದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ‘ಶಿವಜೀವನ‌’ ಪ್ರತೀಕವಾಗಿ ನಡೆದ ಈ ಮಹೋತ್ಸವವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು.

ಶರಣಬಸವೇಶ್ವವರರ ಜಾತ್ರಾ ಮಹೋತ್ಸವದ ಮುನ್ನುಡಿಯಾಗಿ ಈ ಉಚ್ಚಾಯಿ ಸಡಗರ ನಡೆಯುತ್ತದೆ. ಸಂಪ್ರದಾಯದಂತೆ ಈ ಬಾರಿ ನಡೆದ 198ನೇ ಉಚ್ಚಾಯಿಗೆ ಮಹಾದಾಸೋಹ ಪೀಠದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು, ಗುರುವಾರ ಸಂಜೆ ಸರಿಯಾಗಿ 7.30ಕ್ಕೆ ಚಾಲನೆ ನೀಡಿದರು. ಅಪ್ಪ ಅವರ ಆದೇಶ ಸಿಕ್ಕ ತಕ್ಷಣಕ್ಕೆ ಭಕ್ತರು ಜೈಕಾರ ಹಾಕುತ್ತ ಚಿಕ್ಕ ರಥವನ್ನು ಎಳೆದರು. ಅಪಾರ ಭಕ್ತರ ಹರ್ಷೋದ್ಘಾರ ಮೇರೆ ಮೀರಿತು. ಶರಣಬಸವೇಶ್ವವರ ಮಾಹಾರಾಜ್‌ ಕಿ ಜೈ, ಆದಿ ದೊಡ್ಡಪ್ಪ ಅಪ್ಪ ಮಹಾರಾಜ್‌ ಕಿ ಜೈ, ಡಾ.ಶರಣಬವಸಪ್ಪ ಅಪ್ಪ ಮಹಾರಾಜ್‌ ಕಿ ಜೈ, ಚಿರಂಜೀವಿ ದೊಡ್ಡಪ್ಪ ಅಪ್ಪ ಮಹಾರಾಜ್‌ ಕಿ ಜೈ... ಎಂಬ ಘೋಷಣೆಗಳು ನಿರಂತರ ಮೊಳಗಿದವು.

ಪಲ್ಲಕ್ಕಿ ಉತ್ಸವವು ರಥದ ಹಿಂದೆ ಸಾಗಿತು. ಅದಕ್ಕೂ ಮುಂದೆ ಸಾಗಿದ ವಾಲಗದವರು ಹಾಗೂ ಪುರುವಂತರ ಕುಣಿತ ಗಮನ ಸೆಳೆಯಿತು. ಮಧ್ಯೆಮಧ್ಯೆ ಶಸ್ತ್ರಗಳನ್ನು ಝಳಪಿಸಿದ ಪುರುವಂತರು ಒಡಬುಗಳನ್ನು ಹೇಳಿ ಭಕ್ತಿ ಮೆರೆದರು. ಪಲ್ಲಕ್ಕಿ ಸಾಗುತ್ತಿದ್ದಂತೆಯೇ ಅದನ್ನು ಮುಟ್ಟಿ ನಮಸ್ಕರಿಸಲು ಭಕ್ತರು ಮುಗಿಬಿದ್ದರು. ಛತ್ರ– ಚಾಮರಗಳನ್ನು ಹಿಡಿದವರ ತಂಡ ಪಲ್ಲಕ್ಕಿ ಹಿಂದೆ ಓಡಿತು.

ದೇವಸ್ಥಾನದ ಆವರಣದಲ್ಲಿಯ ಪಾದಗಟ್ಟೆವರೆಗೆ ಸಾಗಿದ ಉಚ್ಚಾಯಿ, ಆರ್ಧ ಗಂಟೆಯೊಳಗೆ ಸ್ವಸ್ಥಾನಕ್ಕೆ ಮರಳಿತು. ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಭಕ್ತರು ಬಾಳೆಹಣ್ಣು, ಕಾರೀಕ್‌ ಮುಂತಾದ ಪದಾರ್ಥಗಳನ್ನು ರಥಕ್ಕೆ ಎಸೆದು ನಮಸ್ಕರಿಸಿದರು. ವಧು– ವರರು ತಮ್ಮ ಕಂಕಣಬಲಕ್ಕಾಗಿ, ನವವಿವಾಹಿತರು ಸಂತಾನಕ್ಕಾಗಿ, ಹಿರಿಯರು ಆರೋಗ್ಯಕ್ಕಾಗಿ ಪ್ರಾರ್ಥಿಸಿ ಹರಕೆ ಹೊರುವುದು ಇಲ್ಲಿನ ಸಂಪ್ರದಾಯ. ಅದರಂತೆ ಈ ಬಾರಿ ಕೂಡ ಅಪಾರ ಮಹಿಳೆಯರು ಕೂಡ ರಥಕ್ಕೆ ಹಣೆಹಚ್ಚಿ ಹರಕೆ ಹೊತ್ತರು.

ಬರಿಗಾಲಲ್ಲಿ ಬಂದ ಭಕ್ತ ಸಮೂಹ

ಇಳಿ ಸಂಜೆ ಆಗುತ್ತಿದ್ದಂತೆಯೇ ನಗರದ ಮೂಲೆಮೂಲೆಯಿಂದ ಜನ ಶರಣಬಸವೇಶ್ವರ ದೇವಸ್ಥಾನದತ್ತ ಹರಿದುಬಂದರು. ಮಕ್ಕಳು, ಹಿಳೆಯರು, ವೃದ್ಧರು ಕೂಡ ಬರಿಗಾಲಲ್ಲಿ ನಡೆದುಕೊಂಡೇ ಬರುತ್ತಿದ್ದು ಸಾಮಾನ್ಯವಾಗಿತ್ತು. ದೇವಸ್ಥಾನದ ಆವರಣದಲ್ಲಿ ಅಲ್ಲಲ್ಲಿ ಕುಳಿತು ಹಲವರು ಭಕ್ತಿಗೀತೆಗಳನ್ನು ಹಾಡಿದರು.

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ದೇವಸ್ಥಾನದ ಮುಂದೆ ನಿಂತು ಸೆಲ್ಫಿ, ಫೋಟೊ ತೆಗೆಸಿಕೊಳ್ಳುವವರ ಖುಷಿಯೂ ಇಮ್ಮಡಿಸಿತು. ವಿವಿಧ ಹೂವುಗಳಿಂದ ಅಲಂಕರಿಸಿದ ರಥವು ಹತ್ತಿರ ಬಂದಾಗಿ ಯುವಜನರು ವಿಡಿಯೊ, ಫೋಟೊಗಳನ್ನು ಕ್ಲಿಕ್ಕಿಸಿ ಸಂಭ್ರಮಿಸಿದರು.

ನಂತರ, ಮಂದಿರದ ಆವರಣದಲ್ಲಿ ಹಾಕಿದ ವೇದಿಕೆಯಲ್ಲಿ ದೈನಂದಿನ ಪುರಾಣ ಪ್ರವಚ, ವಚನ ಗಾಯನ ಹಾಗೂ ವಿಶೇಷ ಉಪ‍ನ್ಯಾಸ ಕಾರ್ಯಕ್ರಮ ಮುಂದುವರಿದವು. ರಾತ್ರಿಯವರೆಗೂ ಗೊಂದಲಿಗರ ಜನಪದ ಹಾಡುಗಾರಿಕೆ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು