ಶುಕ್ರವಾರ, ನವೆಂಬರ್ 27, 2020
24 °C
ಅರಣ್ಯ ರೋದನವಾದ ಹರಳಯ್ಯನಗರ, ರಾಮಜಿನಗರ ಬಡಾವಣೆ ನಿವಾಸಿಗಳ ಗೋಳು

ಸಮಸ್ಯೆಗಳ ಮಧ್ಯೆ ದುಸ್ತರವಾದ ಬದುಕು

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಡಾಂಬರ್ ಕಿತ್ತುಹೋಗಿ ಹದಗೆಟ್ಟಿರುವ ಒಳರಸ್ತೆಗಳು, ಅಪಘಾತಕ್ಕೆ ಕಾರಣವಾಗುವ ಕಬ್ಬಿಣದ ಸರಳುಗಳು, ಕಣ್ಣಿಗೆ ರಾಚುವ ದೂಳು, ಕೊಳಚೆ ನೀರಿನ ದುರ್ನಾತ...

ಇಲ್ಲಿನ ರಾಮಜಿನಗರ ಮತ್ತು ಹರಳಯ್ಯನಗರ ಬಡಾವಣೆಗಳಿಗೆ‌ ಭೇಟಿ ನೀಡಿದರೆ, ಈ ಸಮಸ್ಯೆಗಳು ಕಾಣಸಿಗುತ್ತಿವೆ. ಇಂತಹ ಅವ್ಯವಸ್ಥೆಗಳ ಮಧ್ಯೆ ಜನರು ಬದುಕು ನಡೆಸುತ್ತಿದ್ದು, ಅವರಿಗೆ ಮೂಸೌಕರ್ಯಗಳು ದೊರೆತಿಲ್ಲ.

ವಾರ್ಡ್‌ ಸಂಖ್ಯೆ 11 ಮತ್ತು 12ರ ವ್ಯಾಪ್ತಿಯಲ್ಲಿ ಬರುವ ಈ ಬಡಾವಣೆಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ  ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಇದೆ. 500ಕ್ಕೂ ಹೆಚ್ಚು ಮನೆಗಳಿದೆ. ಆದರೆ, ಮೂಲಸೌಕರ್ಯ ಮಾತ್ರ ಇಲ್ಲ.

ಇಲ್ಲಿನ ಒಳರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ. ರಸ್ತೆಯಲ್ಲಿ ಡಾಂಬರ್ ಕಿತ್ತುಹೋಗಿ, ಆಳವಾದ ಗುಂಡಿಗಳು ನಿರ್ಮಾಣಗೊಂಡಿವೆ. ವಾಹನ ಸವಾರರು ಇಲ್ಲಿ ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ಕೆಲವೆಡೆ ರಸ್ತೆಗಳು ಕುಸಿದು ಕಬ್ಬಿಣದ ಸರಳುಗಳು ಹೊರಬಂದಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ. ಸ್ವಲ್ಪ ಆಯತಪ್ಪಿ ಇವುಗಳ ಮೇಲೆ ಬಿದ್ದರೂ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಮಳೆ ಬಂದಾಗ, ನೀರು ತುಂಬಿಕೊಳ್ಳುವ ಕಾರಣ ಈ ಗುಂಡಿಗಳು ಕಾಣುವುದಿಲ್ಲ. ರಾತ್ರಿ ವೇಳೆ ಹಲವಾರು ಬಾರಿ ಅಪಘಾತಗಳು ಸಂಭವಿಸಿವೆ. 

ರಸ್ತೆಯ ಎರಡೂ ಬದಿ ಇರುವ ಚರಂಡಿಗಳ ಮೇಲ್ಭಾಗಕ್ಕೆ ಹಾಕಿದ್ದ ಸಿಮೆಂಟ್‌ ಹಾಸು ಮುರಿದು ಬಿದ್ದಿವೆ. ಹಲವೆಡೆ ಒಳಚರಂಡಿಗಳಿಗೆ ಸ್ಲ್ಯಾಬ್ ಹಾಕಿಲ್ಲ. ಹಲವು ಬಾರಿ ಬೈಕ್, ಸೈಕಲ್‌ಗಳು ಚರಂಡಿಯ ಬಾಯ್ತೆರೆದ ಗುಂಡಿಯೊಳಗೆ ಸಿಲುಕಿದ ಅವಘಡಗಳು ನಡೆದಿವೆ.

ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೇ ದುರ್ನಾತ ಬೀರುತ್ತಿದೆ. ಮಳೆ ಬಂದಾಗ ಮಳೆ ನೀರಿನೊಂದಿಗೆ ಇಲ್ಲಿನ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಎಲ್ಲೆಡೆ ಹರಡಿಕೊಂಡಿರುವ ಕಸ, ಮೂಗಿಗೆ ತಟ್ಟುವ ಗಬ್ಬು ವಾಸನೆಯಿಂದಾಗಿ ಮಹಿಳೆಯರು ಅಂಗಳದಲ್ಲಿ ಕುಳಿತು
ಕೊಂಡು ಮಾತನಾಡದಂಥ ಸ್ಥಿತಿ ಇದೆ.

ಈ ಬಡಾವಣೆಗಳಲ್ಲಿ ಒಂದು ಉದ್ಯಾನವೂ ಇಲ್ಲ. ಮಕ್ಕಳಿಗಾಗಿ ಆಟದ ಮೈದಾನ ಸಹ ಇಲ್ಲ. ಇದರಿಂದ ಹದಗೆಟ್ಟ ರಸ್ತೆಗಳ ಮಧ್ಯೆಯೇ ಆಟವಾಡುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಸ್ಥಳೀಯರು.

ಮನೆಗೊಂದು ಶೌಚಾಲಯ ನಿರ್ಮಾಣ ಸಾಕಾರವಾಗಿಲ್ಲ. ಇದರಿಂದ ಇಲ್ಲಿ ಬಹಿರ್ದೆಸೆ ಮುಂದುವರೆದಿದೆ ಇದರಿಂದ ಮಹಿಳೆಯರು ಮತ್ತು
ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಮ ಜಿನಗರದಲ್ಲಿರುವ ಮಲ್ಲಮ್ಮಾಯಿ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ ಮತ್ತು ಶಿವಲಿಂಗೇಶ್ವರ ಮಠಗಳು ಮಳೆ ಬಂದಾಗ ಮುಳುಗಿ ಬಿಡುತ್ತವೆ. ಬಡಾವಣೆಗಳ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು