ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾಪುರ | ಹದಗೆಟ್ಟ ರಸ್ತೆ: ವಾಹನ ಸಂಚಾರ ಸ್ಥಗಿತ

ಗೋಗಿ (ಕೆ) ಗ್ರಾಮಕ್ಕಿಲ್ಲ ಸುಗಮ ಸಂಪರ್ಕ: ಕೆಸರು ಗದ್ದೆಯಲ್ಲೆ ಸಾಗಬೇಕು ಜನ
ತೀರ್ಥಕುಮಾರ ಬೆಳಕೋಟಾ
Published 12 ಜೂನ್ 2024, 6:16 IST
Last Updated 12 ಜೂನ್ 2024, 6:16 IST
ಅಕ್ಷರ ಗಾತ್ರ

ಕಮಲಾಪುರ: ‘ಎಲ್ಲೆಂದರಲ್ಲಿ ಹೊಂಡ, ಮೊಣಕಾಲವರೆಗೆ ಕೆಸರು ರಾಡಿ, ಮಳೆಗಾಲದಲ್ಲಿ ನಾಲೆಯಂತೆ ಹರಿಯುವ ನೀರು, ಅಕ್ಕಪಕ್ಕ ಮುಳ್ಳು ಕಂಟಿ. ಇದು ಕಮಲಾಪುರ ತಾಲ್ಲೂಕಿನ ಗೋಗಿ (ಕೆ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಚಿತ್ರಣ.

ಗೋಗಿ (ಕೆ) ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. 8ನೇ ತರಗತಿವರೆಗೆ ಶಾಲೆ, ಎರಡು ಅಂಗನವಾಡಿ ಕೇಂದ್ರಗಳಿವೆ. ಕಮಲಾಪುರ–ರೇವಣಸಿದ್ದೇಶ್ವರ ಗುಡ್ಡ ಸಂಪರ್ಕ ರಸ್ತೆಯಿಂದ 3 ಕಿ.ಮೀ ಒಳಗಡೆ ಗೋಗಿ (ಕೆ) ಗ್ರಾಮವಿದೆ. ಇದರಲ್ಲಿ ಗ್ರಾಮದ ಸಮೀಪದ 1 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮೊಣಕಾಲವರೆಗೆ ಹೊಂಡ ಬಿದ್ದಿದ್ದು, ಪಕ್ಕದ ಹೊಲಗಳಿಂದ ನೀರು ಹರಿದು ಬಂದು ರಸ್ತೆಯೆಲ್ಲಾ ಕೆಸರು ಗದ್ದೆಯಂತಾಗುತ್ತದೆ. ನೀರಿನ ಪ್ರವಾಹ ಉಂಟಾಗುತ್ತದೆ. ರಸ್ತೆಯ ಎರಡು ಇಕ್ಕೆಲಗಳಲ್ಲಿ ಮುಳ್ಳು ಕಂಟಿ ಬೆಳೆದಿದ್ದು ಆಚೆ–ಈಚೆ ಸರಿಯಲು ಜಾಗವಿಲ್ಲ.

ಮಳೆಗಾಲದಲ್ಲಿ ವಾಹನ ಸಂಚಾರ ವಿರಳ, ಮಳೆಯಾದರೆ ವಾರದವರೆಗೆ ಬಸ್ ಬರುವುದಿಲ್ಲ. ಬಂದರೂ ಒಂದೇ ಸಮನೆ ಅಳ್ಳಾಡುತ್ತದೆ. ಪಲ್ಟಿಯಾಗುವ ಭಯ ಕಾಡುತ್ತದೆ. ಬಸ್ ರಸ್ತೆಯಿಂದ ಆಚೆ ಸರಿದು ಕೆಸರಲ್ಲಿ ಚಕ್ರಗಳು ಸಿಕ್ಕಿಕೊಳ್ಳುತ್ತವೆ. ಹರಸಾಹಸ ಮಾಡಿ ಸಂಚರಿಸಲು ಪ್ರಯತ್ನಿಸಿದ ಅನೇಕ ಬೈಕ ಸವಾರರು ಬಿದ್ದು ಗಾಯಗೊಂಡಿದ್ದಾರೆ.

‘8ನೇ ತರಗತಿಯ ಮುಗಿದ ನಂತರ ಪ್ರೌಢಶಾಲೆ, ಕಾಲೇಜುಗಳಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಕಲಬುರಗಿ, ಕಮಲಾಪುರ ಮತ್ತಿತರ ಕಡೆಗೆ ತೆರಳುತ್ತಾರೆ. ಅಗತ್ಯ ಕಾರ್ಯಗಳಗಾಗಿ ಸಾರ್ವಜನಿಕರು ಸಂಚರಿಸುತ್ತಾರೆ. ರಸ್ತೆ ಹದಗೆಟ್ಟ ಕಾರಣದಿಂದಾಗಿ ವಾಹನ ವ್ಯವಸ್ಥೆ ಇಲ್ಲದೇ ಇವರೆಲ್ಲ ಕಾಲ್ನಡಿಗೆಯಲ್ಲೆ ಸಂಚರಿಸಬೇಕು. ಅವಘಡ, ಅಪಘಾತ, ಅನಾರೋಗ್ಯ, ಪ್ರಸವ ಮತ್ತಿತರ ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಮತ್ತಿತರ ಕಡೆ ತೆರಳಬೇಕಾದರೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ತುರ್ತು ಸೇವೆ ಒದಗಿಸುವ ಆಂಬುಲೆನ್ಸ್‌ ಸಹ ಬರುವುದಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ಅನೇಕ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಸಲ್ಲಿಸಿದ್ದೇವೆ. ಇದುವರೆಗೆ ಯಾರೊಬ್ಬರೂ ಸ್ಪಂದಿಸಿಲ್ಲ’ ಎಂಬುದು ಗ್ರಾಮಸ್ಥರ ಆರೋಪ. ಸದ್ಯ ಮುರುಮ ಹಾಕಿ ಹೊಂಡಗಳನ್ನು ಮುಚ್ಚಿಸಬೇಕು, ಮುಳ್ಳು ಜಾಲಿಗಳನ್ನು ತೆರವುಗೊಳಿಸಬೇಕು. ಆದಷ್ಟು ಬೇಗ ಡಾಂಬರ್‌ ಹಾಕಿ ಪಕ್ಕಾ ರಸ್ತೆ ಅಭಿವೃದ್ಧಿ ಪಡಿಸಬೇಕು. ವಿಳಂಬವಾದರೆ ಕಮಲಾಪುರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. 

ರಸ್ತೆ ಹದಗೆಟ್ಟು ವಾಹನ ಸಂಚಾರವಿಲ್ಲದೆ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಆಗುತ್ತಿಲ್ಲ. ಮೂರ್ನಾಲ್ಕು ವರ್ಷದಿಂದ ಅನೇಕ ಮಕ್ಕಳ ಶೈಕ್ಷಣಕ ಗುಣಮಟ್ಟ ಕುಸಿಯುತ್ತಿದೆ.
ಉದಯ ಬಿ.ಸೂರಿ, ಶಿಕ್ಷಕ
ಕಳೆದ ಬಾರಿ ಅನೇಕ ಗ್ರಾಮಗಳ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಈ ಬಾರಿ ಅನುದಾನ ಕೊರತೆಯುಂಟಾಗುತ್ತಿದೆ. ಬರುವ ಅನುದಾನದಲ್ಲಿ ಮೊದಲ ಆದ್ಯತೆ ನೀಡಿ ಗೋಗಿ (ಕೆ) ರಸ್ತೆ ಅಭಿವೃದ್ಧಿಪಡಿಸಲಾಗುವುದು.
ಬಸವರಾಜ ಮತ್ತಿಮಡು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT