ಶನಿವಾರ, ಡಿಸೆಂಬರ್ 3, 2022
27 °C
ಗ್ರಾಮೀಣ ಜನರ ಒಡನಾಡಿಯಾಗಿದ್ದ ಟ್ರೇನ್‌; 38 ಸ್ಟೇಷನ್‌ಗಳಲ್ಲಿ ನಿಲುಗಡೆ

ಆರಂಭವಾಗದ ಸೊಲ್ಲಾಪುರ–ಗುಂತಕಲ್ ರೈಲು

ವಿಶ್ವರಾಧ್ಯ ಎಸ್‌.ಹಂಗನಳ್ಳಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದ ಕಾರಣ ರದ್ದುಪಡಿಸಲಾದ ಸೊಲ್ಲಾಪುರ-ಗುಂತಕಲ್ ಡೆಮು ಪ್ಯಾಸೆಂಜರ್‌ ರೈಲು (ಸಂಖ್ಯೆ: 71301) ಸೇವೆ ಎರಡು ವರ್ಷಗಳಾದರೂ ಪುನಃ ಆರಂಭವಾಗಿಲ್ಲ. ಕೋವಿಡ್‌ ದಿನಗಳಿಗೂ ಮುಂಚೆ ರದ್ದಾದ ರೈಲು ಸೇವೆ ಸದ್ಯ ಪುನರಾರಂಭ ಆಗುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. 

ಸೊಲ್ಲಾಪುರದಿಂದ ನಸುಕಿನ 3.50ಕ್ಕೆ ಹೊರಡುತ್ತಿದ್ದ ಈ ರೈಲು, ಮಧ್ಯಾಹ್ನ 1ಕ್ಕೆ ಗುಂತಕಲ್ ತಲುಪುತ್ತಿತ್ತು. ಅಕ್ಕಲಕೋಟ ರೋಡ್, ಗಾಣಗಾಪುರ ರೋಡ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಸೈದಾಪುರ, ಕೃಷ್ಣ, ರಾಯಚೂರು, ಮಂತ್ರಾಲಯ ರೋಡ್, ಆದೋನಿ ಪ್ರಮುಖ ನಿಲ್ದಾಣ ಸೇರಿ 38 ನಿಲ್ದಾಣಗಳಲ್ಲಿ ನಿಲುಗಡೆ ಆಗುತಿತ್ತು. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಈ ರೈಲು ಒಟ್ಟು 380 ಕಿ.ಮೀ. ಸಂಚರಿಸುತ್ತಿತ್ತು.

ಪ್ರಯಾಣ ದರ ಕಡಿಮೆ ಮತ್ತು ಈ ಮಾರ್ಗದ ಸಣ್ಣಪುಟ್ಟ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಆಗುತ್ತಿದ್ದ ಕಾರಣ ಪ್ರಯಾಣಿಕರಿಗೆ ಅನುಕೂಲಕರ ಆಗಿತ್ತು. ಗ್ರಾಮೀಣ ಜನರ ಒಡನಾಡಿ ಆಗಿತ್ತು. ಕೂಲಿಕಾರ್ಮಿಕರು, ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದರು. ‘ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಈ ರೈಲಿನಿಂದ ಅನುಕೂಲವಾಗಿತ್ತು. ರಾತ್ರಿ ಪಾಳಿ ಕೆಲಸ ಮಾಡುವವರಿಗೂ ಪ್ರಯೋಜನಕಾರಿ ಆಗಿತ್ತು. ಆದರೆ, ರೈಲು ರದ್ದು ಆದ ನಂತರ ದುಬಾರಿ ಹಣ ಕೊಟ್ಟು ಬಸ್ ಮತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಾದ ಸ್ಥಿತಿಯಿದೆ. ಅವು ಕೂಡ ಸಕಾಲಕ್ಕೆ ಸಿಗುವುದಿಲ್ಲ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.

‘ಕಲಬುರಗಿಯಲ್ಲಿ ರಾತ್ರಿ ಸೆಕ್ಯುರಿಟಿ ಕೆಲಸ ಮಾಡುವ ನಾನು ನನ್ನೂರು ಕುಂಬಾರಹಳ್ಳಿಗೆ ಈ ರೈಲಿನಲ್ಲಿ ಹೋಗುತ್ತಿದ್ದೆ. ರೈಲಿನಲ್ಲಿ ಪ್ರಯಾಣ ದರ ₹ 35 ಇತ್ತು. ಈಗ ಬಸ್‌ಗೆ ₹ 65 ಕೊಟ್ಟು ಪ್ರಯಾಣಿಸಬೇಕಾದ ಸ್ಥಿತಿಯಿದೆ’ ಎಂದು ಭೀಮರಡ್ಡಿ ತಿಳಿಸಿದರು.

‘ಯಾದಗಿರಿ ಜಿಲ್ಲೆಯ ಬಹುತೇಕ ಜನ ರಾಯಚೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಾರೆ. ಕೋವಿಡ್‌ಗೂ ಮೊದಲು ಬೆಳಿಗ್ಗೆ ಹೋಗಿ, ಸಂಜೆ ಅದೇ ರೈಲಿಗೆ ಮರಳುತ್ತಿದ್ದರು. ರದ್ದು ಆಗಿದ್ದರಿಂದ ಸಮಸ್ಯೆಯಾಗಿದೆ. ಬಡಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಠಾಣಗುಂದಿ ಗ್ರಾಮದ ಉಸ್ಮಾನ್‌ಸಾಬ್‌ ಶೇಖ್‌ ತಿಳಿಸಿದರು.

ಗುಂತಕಲ್–ಕಲಬುರಗಿ ರೈಲು ಕೂಡ ರದ್ದು:

ಸೊಲ್ಲಾಪುರ–ಗುಂತಕಲ್‌ ರೈಲು 71302 ಸಂಖ್ಯೆ (ಗುಂತಕಲ್‌–ಕಲಬುರಗಿ ಡೆಮು) ಹೆಸರಿನಲ್ಲಿ ವಾಪಸ್ಸಾಗುತ್ತಿತ್ತು. ಮಧ್ಯಾಹ್ನ 1.30ಕ್ಕೆ ಆರಂಭವಾಗಿ ರಾತ್ರಿ 9.40ಕ್ಕೆ ಕಲಬುರಗಿ ತಲುಪುತ್ತಿತ್ತು. ಈ ರೈಲು ಕೂಡ ರದ್ದಾಗಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಆಗಿದೆ.‌ ಬೆಳಿಗ್ಗೆ ಹೋಗುವ ಜನರು ಸಂಜೆ ಇದೇ ರೈಲಿನಲ್ಲಿ ಮರಳಿ ತಮ್ಮ ಊರುಗಳನ್ನು ಸೇರುತ್ತಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು