ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯಿಂದ ವಿದ್ಯಾರ್ಥಿಗಳು ವಂಚಿತ, ಐವರು ಮುಖ್ಯ ಶಿಕ್ಷಕರಿಗೆ ನೋಟಿಸ್‌

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಿಂದ ವಿದ್ಯಾರ್ಥಿಗಳು ವಂಚಿತ
Last Updated 25 ಸೆಪ್ಟೆಂಬರ್ 2020, 1:09 IST
ಅಕ್ಷರ ಗಾತ್ರ

ಚಿತ್ತಾಪುರ: 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಪೂರಕ ಪರೀಕ್ಷೆ ಬರೆಯಲೆಂದು ಶುಲ್ಕ ಪಾವತಿ ಮಾಡಿದರೂ ಹಾಲ್ ಟಿಕೆಟ್ ಬಾರದೆ ತಾಲ್ಲೂಕಿನ ಐದು ಶಾಲೆಗಳ ಐವರು ವಿದ್ಯಾರ್ಥಿಗಳ ಒಂದು ವರ್ಷದ ಶಿಕ್ಷಣ ಭವಿಷ್ಯ ಅತಂತ್ರಗೊಂಡಿದ್ದಕ್ಕೆ ಕಾರಣ ಕೇಳಿ ಐದು ಶಾಲೆಗಳ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆಯು ಸೆ.21 ರಂದು ನೋಟಿಸ್ ಜಾರಿ ಮಾಡಿದೆ.

ದಂಡೋತಿ ಗ್ರಾಮದ ಸರ್ಕಾರಿ ಪ್ರೌಢ (ಉರ್ದು) ಶಾಲೆಯ ವಿದ್ಯಾರ್ಥಿನಿ ಅಂಜುಮ್, ಚಿತ್ತಾಪುರದ ಆದರ್ಶ ಆಂಗ್ಲ ಪ್ರೌಢ ಶಾಲೆಯ ವಿದ್ಯಾರ್ಥಿ ಚಲುವ ಸಿದ್ರಾಮ, ಭಂಕೂರ ಗ್ರಾಮದ ಅನುದಾನಿತ ಪ್ರಕಾಶ ಅಂಬೇಡ್ಕರ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ಭರತ, ಶಹಾಬಾದಿನ ಅನುದಾನಿತ ಶಿವಯೋಗಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ಮಹಾದೇವ ಹಾಗೂ ತೆಂಗಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಹಾಂತಮ್ಮ ಹಾಲ್ ಟಿಕೆಟ್ ಬಾರದೆ ಪೂರಕ ಪರೀಕ್ಷೆ ಬರೆಯಲು ವಂಚಿತರಾಗಿದ್ದಾರೆ.

ಪೂರಕ ಪರೀಕ್ಷೆ ಬರೆಯಲೆಂದು ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿದರೂ ಶಾಲೆಯ ಮುಖ್ಯ ಶಿಕ್ಷಕರು ಶುಲ್ಕವನ್ನು ಪರೀಕ್ಷಾ ಮಂಡಳಿಗೆ ಕಳಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಹಾಲ್ ಟಿಕೆಟ್ ಬಂದಿಲ್ಲ.

ತೆಂಗಳಿ ಶಾಲೆಯ ವಿದ್ಯಾರ್ಥಿನಿಯು ಶುಲ್ಕದ ಅರ್ಧದಷ್ಟು ಹಣ ಮಾತ್ರ ಪಾವತಿಸಿದ್ದಾರೆ. ಉಳಿದರ್ಧ ಪಾವತಿಸಿಲ್ಲ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಿದರೂ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಸರಿಯಾಗಿ ದಾಖಲೆ ಪರಿಶೀಲನೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ತಪ್ಪಿತಸ್ಥ ಶಿಕ್ಷಕರ ವಿರುದ್ಧ ಮುಲಾಜಿಲ್ಲದೆ ಮೇಲಧಿಕಾರಿಗೆ ವರದಿ ಸಲ್ಲಿಸಿ ಕ್ರಮ ಜರುಗಿಸುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಅವರು ಗುರುವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪರೀಕ್ಷೆ ಬರೆಯಲು ಒಂದು ವಿಷಯಕ್ಕೆ ₹260 ಶುಲ್ಕವಿದೆ. ಎರಡು ವಿಷಯಕ್ಕೆ ₹320 ಇದೆ. ಅದಕ್ಕಿಂತ ಹೆಚ್ಚಿನ (ಎಲ್ಲಾ ವಿಷಯ) ವಿಷಯಕ್ಕೆ ₹520 ಇದೆ. ಒಟ್ಟು ₹600 ಶುಲ್ಕ ಪಾವತಿಸಬೇಕಾಗುತ್ತದೆ. ಒಬ್ಬ ವಿದ್ಯಾರ್ಥಿಯ ಶುಲ್ಕ ಸ್ವಂತ ಹಣದಿಂದ ಪಾವತಿಸಿ ಹಾಲ್ ಟಿಕೆಟ್ ಬಂದ ನಂತರ ವಿದ್ಯಾರ್ಥಿಗಳಿಂದ ವಸೂಲಿ ಮಾಡಿಕೊಳ್ಳಲು ಮುಖ್ಯಗುರುಗಳಿಗೆ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT