ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಕ್ವಾರಂಟೈನ್‌ ಮುಗಿಸಿದವರಿಗೂ ಕೆಲಸ

ಕೂಲಿ ಕಾರ್ಮಿಕರ ಆಸರೆಯಾದ ಉದ್ಯೋಗ ಖಾತ್ರಿ
Last Updated 12 ಮೇ 2020, 9:50 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಬಡ ಕೃಷಿ ಕಾರ್ಮಿಕರಿಗೆ ವರವಾಗಿ ಪರಿಣಮಿಸಿದೆ. ಉದ್ಯೋಗ ಅರಸಿ ಗುಳೆ ಹೋಗಿ ಮರಳಿ ಬಂದವರಿಗೆ ಉದ್ಯೋಗ ಖಾತ್ರಿ ಯೋಜನೆ ಕೈಹಿಡಿದಿದೆ.

ಕೊರೊನಾ ಹಾವಳಿ ತಡೆಗೆ ಜಾರಿಯಾದ ಲಾಕ್‌ಡೌನ್ ಮಧ್ಯೆ36 ಗ್ರಾ.ಪಂ.ಗಳಲ್ಲಿ 4878 ಮಂದಿ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸ್ವಗ್ರಾಮಕ್ಕೆ ಮರಳಿ ಕ್ವಾರಂಟೈನ್ ಅವಧಿ ಪೂರೈಸಿದವರಿಗೂ ಉದ್ಯೋಗ ನೀಡಲಾಗಿದೆ.

ರೈತರ ಹೊಲಗಳಲ್ಲಿ ಬದು ನಿರ್ಮಾಣ ಮತ್ತು ಕೆರೆಗಳ ಹೂಳು ತೆಗೆಯುವ ಒಟ್ಟು 399 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೊರೊನಾ ಕಾರಣ ದುಡಿಯುವ ಕೈಗಳಿಗೆ ಕೆಲಸ ಇಲ್ಲದಿರುವುದರಿಂದ ಆದ್ಯತೆ ಮೇಲೆ ಉದ್ಯೋಗ ಚೀಟಿ ವಿತರಿಸಿ ಸ್ವಗ್ರಾಮದಲ್ಲೇ ಕೆಲಸ ನೀಡಲಾಗಿದೆ.

ಏಪ್ರಿಲ್ ಒಂದೇ ತಿಂಗಳಲ್ಲಿ 11,500 ಮಾನವ ದಿನಗಳ ಸೃಜನೆ ಮಾಡಲಾಗಿದೆ. ಪ್ರಸಕ್ತ ತಿಂಗಳು ಮುಗಿಯುವವ ವೇಳೆಗೆ 50 ಸಾವಿರ ಮಾನವ ದಿನಗಳ ಸೃಜನೆಯ ಗುರಿ ಹಾಕಿಕೊಳ್ಳಲಾಗಿದೆ ಎಂದು ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಅನಿಲ ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಂಚಾವರಂ ಗ್ರಾಮ ಪಂಚಾಯಿತಿಯಲ್ಲಿ ಅತ್ಯಧಿಕ 1200 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹಸರಗುಂಡಗಿ, ಐನೋಳ್ಳಿ, ಶಾದಿಪುರ, ಸಾಲೇಬೀರನಹಳ್ಳಿ, ಕೆರೋಳ್ಳಿ, ಸಲಗರ ಬಸಂತಪುರ, ರಟಕಲ್, ಕೋಡ್ಲಿ, ಹಲಚೇರಾ ಮೊದಲಾದ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರಿಂದ ಉತ್ತಮ ಸ್ಪಂದನೆ ದೊರಕಿದೆ.

ಚಿಮ್ಮಾಈದಲಾಯಿ, ಜಟ್ಟೂರು, ಕರ್ಚಖೇಡ್, ಗರಗಪಳ್ಳಿ, ಕುಪನೂರ, ವೆಂಕಟಾಪುರ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳು ಚುರುಕುಗೊಳ್ಳಬೇಕಿದೆ.

ತಾಲ್ಲೂಕಿನಲ್ಲಿ ಹೊಸದಾಗಿ 3 ಸಾವಿರ ಜನರಿಗೆ ಉದ್ಯೋಗ ಚೀಟಿ (ಜಾಬ್‌ ಕಾರ್ಡ್) ನೀಡಲಾಗಿದೆ. ಸ್ವಂತ ಊರಲ್ಲಿ ಕೆಲಸ ಮಾಡುತ್ತಿರುವುದು ಈ ಬಾರಿಯ ಉದ್ಯೋಗ ಖಾತ್ರಿ ಯೋಜನೆಯ ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT