ಕಲಬುರಗಿ: ‘ಹಿಂದೂ ಸಮಾಜಕ್ಕೆ ಶಾಸ್ತ್ರದ ಅಧ್ಯಯನದ ಜೊತೆಗೆ ಶಸ್ತ್ರದ ಬಗ್ಗೆಯೂ ಅರಿವಿದೆ. ಇಂದಿಗೂ ಸಮಾಜದ ಮೂಲೆ ಮೂಲೆಗಳಲ್ಲಿ ಅಧರ್ಮ, ಅಸತ್ಯ, ಅಜ್ಞಾನ ತಾಂಡವಾಡುತ್ತಿವೆ. ಹೀಗಾಗಿ ಅವುಗಳ ವಿರುದ್ಧ ಹಿಂದೂ ಸಮಾಜ ತೊಡೆ ತಟ್ಟಿ ನಿಲ್ಲಬೇಕಾಗಿದೆ ಎಂದು ಬೀದರ್ ಜಿಲ್ಲೆಯ ವಿದ್ಯಾಭಾರತೀಯ ಕಾರ್ಯದರ್ಶಿ ಭಗುಸಿಂಗ್ ಜಾಧವ್ ಹೇಳಿದರು.
ಭಾನುವಾರ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಆಕರ್ಷಕ ಪಥಸಂಚಲನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಅಧರ್ಮದ ಮೇಲೆ ಧರ್ಮದ ಜಯ, ಅಸತ್ಯದ ಮೇಲೆ ಸತ್ಯದ ಜಯ ಹಾಗೂ ಅಜ್ಞಾನದ ಮೇಲೆ ಜ್ಞಾನದ ಜಯ ಯಾವತ್ತಿಗೂ ನಿಶ್ಚಿತವಾಗಿ ಆಗಲಿದೆ’ ಎಂದು ಹೇಳಿದರು.
‘ಸಂಘದ ಶಕ್ತಿಯ ಅರಿವು ಇಡೀ ವಿಶ್ವಕ್ಕೆ ಪರಿಚಯವಾಗಿದೆ. ವಿಶ್ವದ ವಿವಿಧ ಸ್ಥರಗಳಲ್ಲಿ ಸಂಘದ ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದು, ಹಿಂದೂ ಧರ್ಮದ ಉಳಿವಿಗಾಗಿ ವಿಶ್ವದಾದ್ಯಂತ ಜಾಗೃತಿ ಅಭಿಯಾನ, ಧರ್ಮ ರಕ್ಷಣೆಯ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಕೆಲ ದೇಶ ವಿರೋಧಿಗಳು ರಾಮಮಂದಿರ ಕಟ್ಟುವ ಕುರಿತಾಗಿ ಅಪಹಾಸ್ಯ ಮಾಡುತ್ತಿದ್ದರು, ಆದರೆ, ಇಂದೂ ಅವರಿಗೆ ಮಂದಿರ ಕಟ್ಟಡ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ನುಂಗಲಾರದ ತುತ್ತಾಗಿದೆ’ ಎಂದರು.
‘ಇಡೀ ವಿಶ್ವ ಭಾರತದ ಕಡೆಗೆ ತಿರುಗಿ ನೋಡುವ ಹಾಗೆ ದೇಶದ ಪ್ರಧಾನಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ’ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮನೀಶ್ ವೈಕುಂಠ ವಹಿಸಿದ್ದರು. ನಗರದ ವ್ಯವಸ್ಥಾ ಪ್ರಮುಖ್ ಶರಣರಾಜ್ ಖೇಳೆಗಾಂವಕರ್ ಸ್ವಾಗತಿಸಿದರು.
ಇದಕ್ಕೂ ಮುನ್ನ ನಗರದ ಗಂಜ್ ಪ್ರದೇಶದ ಎಪಿಎಂಸಿಯಿಂದ ಆರಂಭವಾದ ಪಂಥಸಂಚಲನ ಮಿಜಗುರಿ ವೃತ್ತ, ಚಡ್ಡಿ ಹೋಟೆಲ್, ಡಂಕಾ ಕ್ರಾಸ್, ಮಾತಾ ಹಿಂಗುಲಾಂಬಿಕಾ ಮಂದಿರ, ಗಣೇಶ ಮಂದಿರ, ಕಪಡಾ ಬಜಾರ್, ಚೌಕ, ಭಾಂಡೆ ಬಜಾರ್, ಜನತಾ ಬಜಾರ್ ಮಾರ್ಗವಾಗಿ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸಮಾವೇಶಗೊಂಡಿತು. ಪಥಸಂಚಲನದಲ್ಲಿ ಸುಮಾರು 500 ಸ್ವಯಂಸೇವಕರು ಗಣವೇಷದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ವಿಭಾಗ ಪ್ರಚಾರಕರಾದ ವಿಜಯ್ ಮಹಾಂತೇಶ, ಕಿರಣ್ ಸುವರ್ಣಕಾರ್, ಸುರೇಶ್ ಹೆರೂರ, ಚಿದಾನಂದ ಹಿರೇಮಠ, ಶ್ರೀಕಾಂತ್ ಸರಾಫ್, ನಿತ್ಯಾನಂದ ಬಂಡಿ, ಸುನೀಲ್ ರಾಶೀಂಕರ, ಶರಣಬಸವೇಶ್ವರ ಸಂಸ್ಥಾನದ ಕಾಯದರ್ಶಿ ಬಸವರಾಜ ದೇಶಮುಖ, ಅಮರನಾಥ ಪಾಟೀಲ, ಸಿದ್ದಾಜಿ ಪಾಟೀಲ, ದಯಾಘನ್ ಧಾರವಾಡಕರ್, ಗಿರಿರಾಜ್ ಯಳಮೇಲಿ, ಅವಿನಾಶ್ ರೇವೂರ ಇದ್ದರು.
ಚಂದ್ರಯಾನ–3ರ ಯಶಸ್ಸಿನ ನಂತರ ಭಾರತವು ಇತಿಹಾಸದ ಪುಟಗಳಲ್ಲಿ ಮೊಹರನ್ನು ಒತ್ತಿ ಬಿಟ್ಟಿದೆ. 2014ರಿಂದ ಇಲ್ಲಿಯವರೆಗೆ ಭಾರತ ದೇಶದ ಚಿತ್ರಣವೇ ಬದಲಾಗಿ ಹೋಗಿದೆಭಗುಸಿಂಗ್ ಜಾಧವ್ ವಿದ್ಯಾ ಭಾರತೀಯ ಕಾರ್ಯದರ್ಶಿ ಬೀದರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.