ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದ್ಯಕೀಯ ಕ್ಷೇತ್ರಕ್ಕೆ ಕೃತಕ ಬುದ್ಧಿವಂತಿಕೆ ಅಗತ್ಯ’

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐದು ದಿನಗಳ ಆನ್‍ಲೈನ್ ಕಾರ್ಯಾಗಾರಕ್ಕೆ ಚಾಲನೆ
Last Updated 9 ನವೆಂಬರ್ 2020, 15:42 IST
ಅಕ್ಷರ ಗಾತ್ರ

ಕಲಬುರ್ಗಿ: ‘ವೈದ್ಯಕೀಯ ಕ್ಷೇತ್ರದಲ್ಲಿ ತಪಾಸಣೆ ಮತ್ತು ಚಿಕಿತ್ಸಾ ವಿಭಾಗದಲ್ಲಿ ಕೃತಕ ಬುದ್ಧಿವಂತಿಕೆ ಕೊಡುಗೆ ಅತ್ಯಂತ ಮಹತ್ವದ್ದು. ಕೋವಿಡ್‌ನಂಥ ಸಾಂಕ್ರಾಮಿಕ ಸ್ಥಿತಿಯಲ್ಲಿ ಕೃತಕ ಬುದ್ಧಿವಂತಿಕೆಯೇ ಹೆಚ್ಚು ಪರಿಣಾಮ ಮತ್ತು ಫಲಶ್ರುತಿ ಬೀರುತ್ತಿದೆ‘ ಎಂದು ಇಂದೋರನ ಉಪನ್ಯಾಸಕ ಡಾ.ಆರ್‌.ಬಿ. ಪಚೋರಿ ಅಭಿಪ್ರಾಯ ಪಟ್ಟರು.

ಇಲ್ಲಿನ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಶನ್‌ ವಿಭಾಗದಿಂದ ಆಯೋಜಿಸಿದ ಐದು ದಿನಗಳ ಆನ್‌ಲೈನ್‌ ಉಪನ್ಯಾಸ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಸ್ತುತ ಸಾಂಕ್ರಾಮಿಕ ಸಂದರ್ಭದಲ್ಲಿ ಕೃತಕ ಬುದ್ಧಿವಂತಿಕೆಯನ್ನು ಹಲವು ಕ್ಷೇತ್ರಗಳಲ್ಲಿ ಉಪಯೋಗಿಸಲಾಗುತ್ತಿದೆ. ವೈರಸ್‍ನ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ, ಆರೋಗ್ಯ ಕೇಂದ್ರಗಳಲ್ಲಿ ಸೇವೆಗಳು ಹಾಗೂ ಸಂಪನ್ಮೂಲಗಳ ನಿರ್ವಹಣೆ, ಸಾರ್ವಜನಿಕ ನೀತಿ ನಿರ್ಧಾರಗಳನ್ನು ಬೆಂಬಲಿಸುವಲ್ಲಿಯೂ ಕೃತಕ ಬುದ್ಧಿವಂತಿಕೆ ಪ್ರಯೋಜನಕಾರಿ ಆಗಿದೆ. ಸೈಕಾಲಾಜಿ, ಜೀವಶಾಸ್ತ್ರ, ಆರೋಗ್ಯ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿಯೂ ಇದು ಉಪಯೋಗಿಸಲಾಗುತ್ತಿದೆ’ ಎಂದರು.

ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಮಾತನಾಡಿ, ‘ಕೃತಕ ಬುದ್ಧಿವಂತಿಕೆ ಮತ್ತು ಅದರ ಉಪಯೋಗಗಳು ಕುರಿತು ಐದು ದಿನಗಳ ಕಾಲ ನಡೆಯಲಿರುವ ಆನ್‍ಲೈನ್ ಕಾರ್ಯಾಗಾರದ ಸದುಪಯೋಗ ಪಡಿಸಿಕೊಂಡು ಉನ್ನತ ಮಟ್ಟದ ಸಂಶೋಧನೆ ಪೂರಕವಾಗಿ ಶ್ರಮಿಸಬೇಕು‘ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್. ಹೆಬ್ಬಾಳ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥರಾದ ಡಾ.ರಾಜು ಯಾನಮಶೆಟ್ಟಿ ಮಾತಿನಾಡಿದರು. ಸಂಚಾಲಕ ಡಾ.ಎಚ್‌. ನಾಗೇಂದ್ರ ಉಪನ್ಯಾಸ ನೀಡಿದರು. ಡಾ.ಕೆ.ಶ್ರೀಧರ ನಿರೂಪಿಸಿದರು. ಪ್ರೊ.ರಾಜಕುಮಾರ ಬೈನೋರು ವಂದಿಸಿದರು.

ಉಪ ಪ್ರಾಚಾರ್ಯ ಡಾ.ಎಸ್.ಎಸ್. ಕಲಶೆಟ್ಟಿ, ಅಕಾಡೆಮಿಕ್ ಡೀನ್ ಡಾ.ಎಸ್.ಆರ್. ಪಾಟೀಲ, ಡಾ.ಬಾಬುರಾವ ಶೇರಿಕರ, ವಿಭಾಗದ ಉಪನ್ಯಾಸಕರು ಮತ್ತು ಸಂಶೋಧಕ ಮೈನೋದ್ದಿನ್, ಶ್ವೇತಾ ನಾಶಿಕರ್ ಇದ್ದರು.

150 ಪರಿಣತರು ಭಾಗಿ: ದೇಶದ ವಿವಿಧ ರಾಜ್ಯಗಳಿಂದ ಸುಮಾರು 150 ತಾಂತ್ರಿಕ ಶಿಕ್ಷಕರು, ಸಂಶೋಧಕರು ಇದರಲ್ಲಿ ಭಾಗಿಯಾಗಿದ್ದಾರೆ. ಐಐಟಿ, ಎನ್‍ಐಟಿ ಹಾಗೂ ಬೇರೆಬೇರೆ ವಿಶ್ವವಿದ್ಯಾಲಯಗಳ ಎಂಜಿನಿಯರಿಂಗ್ ಕಾಲೇಜುಗಳಿಂದ ಕೃತಕ ಬುದ್ಧಿವಂತಿಕೆ ಕ್ಷೇತ್ರದಲ್ಲಿ ನುರಿತ ಸಂಪನ್ಮೂಲ ತಜ್ಞರು ತಮ್ಮ ಸಂಶೋಧನೆ ಮತ್ತು ಅದರ ಉಪಯುಕ್ತತೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

‌ಎಐಸಿಟಿಇ ಅಟಲ್ ಪಠ್ಯ ಮತ್ತು ಕಲಿಕಾ ಅಕಾಡೆಮಿಯು ದೇಶದಾದ್ಯಂತ ಎಂಜಿನಿಯರಿಂಗ್ ಕಾಲೇಜಿನ ಶಿಕ್ಷಕರಿಗೆ, ಸಂಶೋಧಕರಿಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಹಾಗೂ ಪ್ರಸ್ತುತ ತಂತ್ರಜ್ಞಾನದ ತಿಳಿವಳಿಕೆ ನೀಡುವ ಗುರಿಯೊಂದಿಗೆ ಈ ಕಾರ್ಯಾಗಾರ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT