ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವುಗಳಿಗೆ ಬೇಡಿಕೆ, ಬೆಲೆಯೂ ಏರಿಕೆ

ನಾಗರ ಪಂಚಮಿ: ಹಬ್ಬಗಳ ಮಾಸದ ಆರಂಭದಲ್ಲೇ ಹೂವು, ಹಣ್ಣುಗಳ ಬೆಲೆ ಹೆಚ್ಚಳ
ಕಿರಣ ನಾಯ್ಕನೂರ
Published : 9 ಆಗಸ್ಟ್ 2024, 5:22 IST
Last Updated : 9 ಆಗಸ್ಟ್ 2024, 5:22 IST
ಫಾಲೋ ಮಾಡಿ
Comments

ಕಲಬುರಗಿ: ಹಬ್ಬಗಳ ಮಾಸ ಶ್ರಾವಣ ಮೆಲ್ಲಗೆ ಅಡಿ ಇಡುತ್ತಿದ್ದಂತೆ ಹೂವು, ಹಣ್ಣುಗಳಿಗೆ ಬೇಡಿಕೆಯೊಂದಿಗೆ ಬೆಲೆಯೂ ಕೊಂಚ ಹೆಚ್ಚಾಗಿದೆ. ನಗರದ ಸೂಪರ್ ಮಾರುಕಟ್ಟೆ, ಕಣ್ಣಿ ಮಾರುಕಟ್ಟೆ, ಶಾಹಾ ಬಜಾರ್, ರೈಲು ನಿಲ್ದಾಣ ರಸ್ತೆ, ಆಳಂದ ರಸ್ತೆ ವಿವಿಧೆಡೆ ಖರೀದಿ ಭರಾಟೆ ಕಂಡುಬಂತು.

ಶ್ರಾವಣ ಆರಂಭದಿಂದ ಬೆನಕನ ಅಮಾವಾಸ್ಯೆವರೆಗೂ ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ಮಂಗಳ ಗೌರಿ ವ್ರತ, ರಕ್ಷಾಬಂಧನ, ಶ್ರೀಕೃಷ್ಣ ಜನ್ಮಾಷ್ಟಮಿ ಸೇರಿ ವಿವಿಧ ಆಚಣೆಗಳು ನಡೆಯುತ್ತವೆ. ಅಲ್ಲದೆ ಬಹುತೇಕ ದೇಗುಲ, ಧಾರ್ಮಿಕ ಕೇಂದ್ರಗಳಲ್ಲಿ ಪುರಾಣ, ಪ್ರವಚನ, ಜಾತ್ರೆಗಳು ನಡೆಯುವುದರಿಂದ ಹೂವು, ಹಣ್ಣುಗಳ ದರ ಸಹಜವಾಗಿ ಏರುಮುಖ ಮಾಡಿದೆ.

ಬೆಲೆ ದುಪ್ಪಟ್ಟು: ಆಷಾಢ ಮಾಸಕ್ಕೆ ಹೋಲಿಕೆ ಮಾಡಿದರೆ ಬಹುತೇಕ ಹೂವುಗಳ ದರ ದುಪ್ಪಟ್ಟಾಗಿದೆ. ಪ್ರತಿ ಕೆ.ಜಿಗೆ ₹600 ರಿಂದ ₹800ಕ್ಕೆ ಮಾರಾಟವಾಗುತ್ತಿದ್ದ ಕನಕಾಂಬರ ಶ್ರಾವಣ ಆರಂಭದಲ್ಲೇ ₹1000 ಗಡಿ ಮುಟ್ಟಿದೆ. ದೇವರ ಪೂಜೆ, ಉಡಿ ತುಂಬಲು ಅಗತ್ಯವಾಗಿ ಬೇಕಾಗುವ ಮಲ್ಲಿಗೆಯ ಬೆಲೆಯೂ ಅರ್ಧಕ್ಕಿಂತ ಹೆಚ್ಚಾಗಿದ್ದು ಪ್ರತಿ ಕೆ.ಜಿಗೆ ₹800ರ ಮೇಲೆಯೇ ಬೆಲೆ ಇದೆ. ಜಾಜಿ ಮಲ್ಲಿಗೆ ₹450 ಇದೆ. ಮಲ್ಲಿಗೆಯನ್ನು ಬಹುತೇಕರು ಮೊಳ, ಮಾರುಗಳ ಲೆಕ್ಕದಲ್ಲಿ ಖರೀದಿಸುತ್ತಿದ್ದಾರೆ.

ಮನೆ, ದೇವರ ಕೋಣೆ ಅಲಂಕಾರಕ್ಕೆ ಹೆಚ್ಚಾಗಿ ಬಳಸುವ ಚೆಂಡು ಹೂವು ₹30 ರಿಂದ ₹50ನಂತೆ ಮಾರಾಟವಾಗುತ್ತಿದೆ. ಸೇವಂತಿಗೆ ₹100 ರಿಂದ ₹150ಕ್ಕೆ ಇದೆ. ಹಳದಿ ಸೇವಂತಿಗೆ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಗುಣಮಟ್ಟ, ಗಾತ್ರ, ವಿಧಗಳ ಆಧಾರದಲ್ಲಿ ಗುಲಾಬಿ ದರ ₹100 ರಿಂದ ₹200 ರವರೆಗೂ ಇದ್ದು ಬಹುತೇಕರು ಬಿಡಿಯಾಗಿ ಖರೀದಿಸುತ್ತಿದ್ದಾರೆ.

ಹಣ್ಣುಗಳ ಬೆಲೆ: ಈ ವಾರ ಹಣ್ಣುಗಳ ಬೆಲೆಯಲ್ಲಿ ದೊಡ್ಡ ವ್ಯತ್ಯಾಸ ಕಂಡು ಬಂದಿಲ್ಲ. ಸೇಬು ಕಳೆದ ವಾರದಂತೆ ಈ ವಾರವೂ ₹100ಗೆ 5–6ರಂತೆ ಮಾರಟವಾಗುತ್ತಿವೆ. ದಾಳಿಂಬೆ ಬೆಲೆ ತುಸು ಏರಿಕೆಯಾಗಿದ್ದು ₹100ಗೆ 4–5ರಂತೆ ಮಾರಾಟವಾಗುತ್ತಿವೆ. ಉಳಿದಂತೆ 10–12 ಪೇರಲ, ಪಪ್ಪಾಯ 3, ಮೂಸಂಬೆ 6–8 ರಂತೆ ಇವೆ. ಪೂಜೆ ಮತ್ತು ಉಡಿ ತುಂಬಲು ಅಗತ್ಯವಾಗಿ ಬೇಕಾಗುವ ಬಾಳೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು ಡಜನ್‌ಗೆ ₹40–50 ಇದೆ. ಏಲಕ್ಕಿ ಬಾಳೆ ₹70–80ನಂತೆ ಮಾರಾಟವಾಗುತ್ತಿದೆ (ಎಲ್ಲ ಹಣ್ಣುಗಳ ಬೆಲೆ ಮಾರುಕಟ್ಟೆ, ಗಾತ್ರ, ಗುಣಮಟ್ಟವನ್ನು ಅವಲಂಬಿಸಿರುತ್ತದೆ)

ಹಾಲೆರೆಯುವ ವಸ್ತುಗಳಿಗೆ ಬೇಡಿಕೆ: ಹಾಲೆರೆಯಲು ಬೇಕಾಗುವ ಒಣ ಕೊಬ್ಬರಿ, ಅರಿಸಿನ ಬೇರು, ಎಳ್ಳು, ಹತ್ತಿಯ ಸರಗಳನ್ನು ಪ್ಯಾಕೆಟ್‌ ಮಾಡಿ ಮಾರಾಟ ಮಾಡಲಾಗುತ್ತಿದೆ. ಒಣ ಕೊಬ್ಬರಿಯ ಎರಡು ಹೊಳು, ಐದು ಅರಿಸಿನ ಬೇರು, ಹತ್ತಿಯ ಒಂದು ಸರದ ಜತೆ ಒಂದು ಪ್ಯಾಕೆಟ್‌ ಎಳ್ಳು ಸೇರಿ ₹80–₹100 ಇದೆ.

ಹಾಲು ಎರೆದ ಬಳಿಕ ಮಕ್ಕಳಿಗೆ ಕೊಬ್ಬರಿ ಹೊಳುಗಳ ಬುಗುರಿ ಮಾಡಿ ಕೊಡಲಾಗುತ್ತದೆ. ಹೀಗಾಗಿ ಕೆಲವರು ಕೆ.ಜಿ ಲೆಕ್ಕದಲ್ಲಿ ಒಣ ಕೊಬ್ಬರಿ ಖರೀದಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT