ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ವೃತ್ತಗಳಲ್ಲಿ ಪಾರ್ಗಿಂಗ್‌ ನಿಷೇಧ; ಅನುಷ್ಠಾನ

ಎರಡು ವಾರ ಪ್ರಯೋಗಿಕ, ನಂತರ ದಂಡ– ವಾಹನ ಜಪ್ತಿ ಕ್ರಮ
Last Updated 24 ಸೆಪ್ಟೆಂಬರ್ 2021, 3:26 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಎಲ್ಲ ವೃತ್ತ ಹಾಗೂ ಚೌಕಗಳಲ್ಲಿ ಜನಸಂಚಾರ ಸುಗಮಗೊಳಿಸುವ ಸಂಬಂಧ ವಾಹನಗಳ ಪಾರ್ಕಿಂಗ್‌ ನಿಷೇಧಿಸಿ ಹೊರಡಿಸಿದ ಆದೇಶವನ್ನು ಗುರುವಾರ ಅನುಷ್ಠಾನಗೊಳಿಸಲಾಯಿತು.

ದೊಡ್ಡ ವೃತ್ತಗಳ ಸುತ್ತ 50 ಮೀಟರ್‌ ವ್ಯಾಪ್ತಿಯಲ್ಲಿ ಹಾಗೂ ಚಿಕ್ಕ ವೃತ್ತಗಳಲ್ಲಿ (ಫ್ರೀ ಲೆಫ್ಟ್‌) 25 ಮೀಟರ್‌ ವ್ಯಾಪ್ತಿಯ ಒಳಗೆ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ. ನಿಷೇಧಿತ ಸ್ಥಳಗಳನ್ನು ಹೊರತುಪಡಿಸಿ ಗುರುತಿಸಿದ ಜಾಗದಲ್ಲೇ ಪಾರ್ಕಿಂಗ್‌ ಮಾಡುವುದು ಕಡ್ಡಾಯ ಎಂದು ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಅದರಂತೆ,ಮೊದಲ ಹಂತದಲ್ಲಿ 20 ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಈ ಆದೇಶವನ್ನು ಜಾರಿಗೆ ತರಲಾಗುತ್ತಿದೆ. ಅದಕ್ಕಾಗಿ ವೃತ್ತಗಳ ಸುತ್ತ ಹಾಗೂ ಎಲ್ಲ ಮಾರ್ಗಗಳಲ್ಲಿ ಪೊಲೀಸ್‌ ಬ್ಯಾರಿಕೇಡ್‌ ಇಟ್ಟು, ರಿಬ್ಬನ್‌ ಕೂಡ ಕಟ್ಟಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ವೃತ್ತದ ದಡದಲ್ಲಿ ಫುಟ್‌ಪಾತ್‌ಗೆ ಹೊಂದಿಕೊಂಡಂತೆ ಯಾವುದೇ ವಾಹನ ನಿಲ್ಲಿಸದಂತೆ ಪೊಲೀಸರು ಕಾವಲು ಕಾದರು.

ಆದರೂ ಕೆಲವರು ತಮ್ಮ ಬೈಕ್‌ ಹಾಗೂ ಕಾರ್‌ಗಳನ್ನು ಬ್ಯಾರಿಕೇಡ್‌ ಪಕ್ಕದಲ್ಲೇ ನಿಲ್ಲಿಸಿದ್ದು ಕಂಡುಬಂತು. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಂತೂ ರಿಬ್ಬನ್‌ ಪಟ್ಟಿಗಳನ್ನು ತುಂಡರಿಸಿ, ಬ್ಯಾರಿಕೇಡ್‌ಗಳನ್ನು ಬದಿಗೆ ಸರಿಸಿ ಕೆಲವರು ವಾಹನ ನಿಲ್ಲಿಸಿದರು. ವೃತ್ತದಲ್ಲಿರುವ ಹೋಟೆಲ್‌, ಬಾರ್‌, ರೆಸ್ಟೊರೆಂಡ್‌, ವಿವಿಧ ಅಂಗಡಿಗಳ ಮುಂದೆ ಕೂಡ 50 ಮೀಟರ್‌ ವ್ಯಾಪ್ತಿಯಲ್ಲೇ ವಾಹನಗಳನ್ನು ನಿಲ್ಲಿಸಿದ್ದು ಕಂಡುಬಂತು.

ಇಂಥ ವಾಹನಗಳ ಜಪ್ತಿಗಾಗಿ ಪೊಲೀಸರು ವಾಹನ ಸಮೇತ ಸಜ್ಜಾಗಿದ್ದರು. ಕೆಲವರ ಬೈಕ್‌ಗಳನ್ನು ಠಾಣೆಗೆ ಸಾಗಿಸಿದರು. ರಸ್ತೆ ಬದಿ ಕಾರ್‌ ನಿಲ್ಲಿಸಿದ ಚಾಲಕರಿಗೂ ಎಚ್ಚರಿಕೆ ನೀಡಿದರು.

‘ಆರಂಭದಲ್ಲಿ ಅರಿವು, ನಂತರ ಕ್ರಮ’

‘ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಗುರುವಾರದಿಂದಲೇ ಕ್ರಮ ಜಾರಿಗೊಳಿಸಲಾಗಿದೆ. ಆರಂಭದ ಎರಡು ವಾರ ಈ ಬಗ್ಗೆ ಅರಿವು ಮೂಡಿಸುತ್ತೇವೆ. ದಂಡ ಹಾಕುವುದಿಲ್ಲ. ಬಳಿಕ ದಂಡ, ವಾಹನ ಜಪ್ತಿ, ಪ್ರಕರಣ ದಾಖಲಿಸುವಂಥ ಕ್ರಿಯೆಗಳು ಆರಂಭವಾಗುತ್ತವೆ’ ಎಂದು ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ವಲಯ 1ರಲ್ಲಿ 22 ವೃತ್ತ ಹಾಗೂ ರಸ್ತೆ, ವಲಯ 2ರಲ್ಲಿ 55 ವೃತ್ತ, ರಸ್ತೆ ಹಾಗೂ ಚೌಕಗಳು, ವಲಯ 3ರಲ್ಲಿ 17 ಸರ್ಕಲ್‌ಗಳನ್ನು ಗುರುತಿಸಲಾಗಿದ್ದು, ಅಲ್ಲಿ ವಾಹನ ನಿಲುಗಡೆ ನಿಷೇಧವಿರಲಿದೆ’ ಎಂದರು.

‘ಅತ್ಯಂತ ಜನನಿಬಿಡ ರಸ್ತೆ, ವೃತ್ತ, ಮಾರ್ಕೆಟ್‌, ಸರ್ಕಾರಿ ಕಚೇರಿ, ಕೋರ್ಟ್‌ ಮುಂತಾದ ಸ್ಥಳಗಳಲ್ಲಿ ಜನರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು ಮುಂದುವರಿದಿದೆ. ಅದರಲ್ಲೂ ಬೈಕ್‌, ಆಟೊ, ಕಾರ್‌ ನಿಲ್ಲಿಸಿ ಜನರ ಓಡಾಟಕ್ಕೆ ತೊಂದರೆ ಮಾಡಲಾಗುತ್ತಿದೆ. ಈ ಬಗ್ಗೆ ನಗರವಾಸಿಗಳಿಂದ ಪದೇಪದೇ ದೂರುಗಳು ಬಂದಿದ್ದು, ಅದನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಇದನ್ನು ಎಲ್ಲ ವಾಹನ ಸವಾರರೂ ಕಡ್ಡಾಯವಾಗಿ ಪಾಲಿಸಬೇಕು‘ ಎಂದೂ ಸ್ನೇಹಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT