ಭಾನುವಾರ, ಮೇ 9, 2021
28 °C
ಆಸ್ಪತ್ರೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು; ಪೊಲೀಸ್ ಬಂದೋಬಸ್ತ್

ಕೆಬಿಎನ್‌ ಐಸಿಯುನಲ್ಲಿ ಆತಂಕ, ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಸ್ಟೇಶನ್ ರಸ್ತೆಯಲ್ಲಿರುವ ಖಾಜಾ ಬಂದಾನವಾಜ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ (ಕೆಬಿಎನ್)ಯಲ್ಲಿ ಶನಿವಾರ ಸಂಜೆ ಆಕ್ಸಿಜನ್ ಕೊರತೆಯಿಂದ ಮೂವರು ಕೋವಿಡ್ ರೋಗಿಗಳು ಸಾವನಪ್ಪಿರುವ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ರೋಗಿಗಳನ್ನು ದಾಖಲಿಸಲಾದ ಐಸಿಯು ವಾರ್ಡ್‌ನಲ್ಲಿ ಕೆಲ ಹೊತ್ತು ಆತಂಕ, ಗೊಂದಲ ಉಂಟಾಗಿತ್ತು.

ಬೆಡ್‌ ಪಕ್ಕದಲ್ಲಿದ್ದ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ತಮ್ಮ ಕುಟುಂಬ ಸದಸ್ಯರ ಆರೈಕೆಯಲ್ಲಿದ್ದ ಕೆಲವರು ಆಸ್ಪತ್ರೆಯ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೈದ್ಯರು, ನರ್ಸ್‌ಗಳು ಕಂಡು ಬರಲಿಲ್ಲ. ಇದರಿಂದ ಕಂಗಾಲಾದ ರೋಗಿಗಳ ಸಂಬಂಧಿಗಳು ಚೀರಾಡಿದರು. ಅಸಮಾಧಾನ ವ್ಯಕ್ತಪಡಿಸಿದರು.

ಆಕ್ಸಿಜನ್ ಪೂರೈಕೆ: ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದರೂ ಜಿಲ್ಲೆಯಲ್ಲಿ ಆಕ್ಸಿಜನ್ ಪೂರೈಕೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಅವರು ತಕ್ಷಣ ಕೆಬಿಎನ್‌ ಆಸ್ಪತ್ರೆಗೆ ಆಕ್ಸಿಜನ್‌ಗಳನ್ನು ಪೂರೈಕೆ ಮಾಡಿದರು.

ದೌಡಾಯಿಸಿದ ಜನರು: ಘಟನೆಯ ಮಾಹಿತಿ ಪಡೆಯುತ್ತಿದ್ದಂತೆಯೇ ವಾರ್ಡ್‌ನಲ್ಲಿರುವ ತಮ್ಮ ಸಂಬಂಧಿಗಳ ಏನಾಗಿದೆ ಎಂಬ ದುಗುಡದಿಂದ ಹತ್ತಾರು ಜನರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಬಂದರು. ಇವರನ್ನು ನಿಯಂತ್ರಿಸಲು ಡಿಸಿಪಿ ಶ್ರೀಕಾಂತ ಕಟ್ಟಿಮನಿ, ಬ್ರಹ್ಮಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಕಪಿಲದೇವ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್ ನೀಡಲಾಯಿತು.

ಇಎಸ್‌ಐಸಿಯಲ್ಲೂ ನಡೆದಿತ್ತು: ಕಳೆದ ವರ್ಷದ ಜುಲೈನಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಎಂಟು ಜನ ರೋಗಿಗಳು ಮೃತಪಟ್ಟಿದ್ದರು. ವಿರೋಧ ಪಕ್ಷಗಳಿಂದ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಸರ್ಕಾರ ತನಿಖಾ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯ ವರದಿ ಬರುವುದಕ್ಕೆ ಮುನ್ನವೇ ಇಎಸ್‌ಐಸಿ ಆಸ್ಪತ್ರೆಯ ಡೀನ್ ಡಾ. ನಾಗರಾಜ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು