ಸೋಮವಾರ, ಮಾರ್ಚ್ 20, 2023
24 °C
ನಾಡಿನ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಶೂನ್ಯ ಪೀಠಾರೋಹಣ

ವಿಜಯಮಹಾಂತ ದೇವರ ಪಟ್ಟಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಗರದ ಗದ್ದುಗೆ ಮಠದಲ್ಲಿ ವಿಜಯಮಹಾಂತ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಶುಕ್ರವಾರ ನೆರವೇರಿತು.

ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸ್ವಾಮೀಜಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಶ್ರೀಗಳು ಶೂನ್ಯ ಪೀಠಾರೋಹಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುರುಬಸವ ಬೃಹನ್ಮಠದ ಶಿವಾನಂದ ಸ್ವಾಮೀಜಿ, ಮುಕ್ತಂಪುರ ಬಡಾವಣೆಯ ಗದ್ದುಗೆ ಮಠ ಹಾಗೂ ಗುರುಬಸವ ಬೃಹನ್ಮಠ ಎರಡು ಕಣ್ಣುಗಳಿದ್ದಂತೆ. ಇಂದು ಸಮಾಜಕ್ಕೆ ಮಹಾಂತ ಶ್ರೀಗಳ ತಂದೆ ತಾಯಿಗಳು ದೊಡ್ಡ ದಾನವನ್ನು ನೀಡಿದ್ದಾರೆ. ಜಗತ್ತಿನಲ್ಲಿ ಹಲವು ದಾನಗಳು ಶ್ರೇಷ್ಠವಾಗಿವೆ. ಅದರಲ್ಲಿ ಬೆಳೆಸಿದ ಮಗನನ್ನು ಸಮಾಜಕ್ಕೆ ದಾನ ನೀಡುವ ಕೆಲಸ ಅತ್ಯಂತ ಶ್ರೇಷ್ಠವಾಗಿದೆ. ಮಠಗಳು ಸಮಾಜವನ್ನು ಸರಿದಾರಿಗೆ ಒಯ್ಯುವ ಕೆಲಸ ಮಾಡುತ್ತಲೇ ಇರಬೇಕು: ಎಂದು ಹೇಳಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಸ್ವಾಮೀಜಿ ಎಂದರೆ ಆತ ಒಡೆಯನಲ್ಲ, ಸಮಾಜದ ಸೇವಕನಾಗಿದ್ದಾನೆ. ನಿತ್ಯ ಕಾಯಕ, ಧರ್ಮೋಪದೇಶ, ಭಕ್ತರಿಗೆ ಅನ್ನ, ಆಶ್ರಯ, ಜ್ಞಾನ, ಶಿಕ್ಷಣ ನೀಡುವ ಕೆಲಸಗಳನ್ನು ಸ್ವಾಮೀಜಿ ಮಾಡಬೇಕು’ ಎಂದರು.

ನಿಂಬಾಳದ ಮೌನ ತಪಸ್ವಿ ಜಡೆ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶೂನ್ಯ ಪೀಠಾರೋಹಣ ನಡೆಯಿತು. ಮಾಡಿಯಾಳದ ಒಪ್ಪತ್ತೇಶ್ವರ ಮಠದ ಮರುಳಸಿದ್ಧ ಸ್ವಾಮೀಜಿ, ಹುಕ್ಕೇರಿಯ ಶಿವಬಸವ ಸ್ವಾಮೀಜಿ, ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ ಬೇಲೂರು, ಪ್ರಭುಕುಮಾರ ಶಿವಾಚಾರ್ಯರು, ಗುಳೇದಗುಡ್ಡದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯರು, ಮಾದನಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಯಡ್ರಾಮಿಯ ಮುರುಘೇಂದ್ರ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಇದ್ದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಭೀಮಳ್ಳಿ, ಶರಣು ಪಪ್ಪಾ, ಶಿವಕಾಂತ ಮಹಾಜನ, ಶಿವಶಂಕರ ಎಸ್. ಹೊಸಗೌಡ, ಧರ್ಮಪ್ರಕಾಶ ಪಾಟೀಲ, ಶರಣಪ್ಪ ಎಸ್.ಗೊಬ್ಬೂರ, ನಾಗರಾಜ ಕೆ. ಖೂಬಾ, ಶಿವಶರಣಪ್ಪ ಎಚ್.ಜಿವಣಗಿ, ಸಂಗಪ್ಪ ಬಿ.ಉದನೂರ, ರೇಣುಕಾ ಚೌಧರಿ, ಅಣವೀರಪ್ಪ ಎಸ್. ಕಾಳಗಿ ಇದ್ದರು.

ಶುಕ್ರವಾರ ನಸುಕಿನ ಜಾವದಲ್ಲಿ ವಿಜಯಮಹಾಂತ ದೇವರ ಅವರಿಗೆ ಚಿನ್ಮಯಾನುಗ್ರಹ ಹಾಗೂ ಷಟಸ್ಥಲ ಬ್ರಹ್ಮೋಪದೇಶವನ್ನು ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾಡಿದರು. ನಂತರ ಚರಲಿಂಗ ಸ್ವಾಮೀಜಿ ಗುರು ರೇವಣಸಿದ್ಧ ಸ್ವಾಮೀಜಿ ಎಂಬ ನಾಮ ಅಭಿದಾನ ಮಾಡಲಾಯಿತು. ಬೆಳಿಗ್ಗೆ ನಿಂಬಾಳದ ಮೌನ ತಪಸ್ವಿ ಜಡೆ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶೂನ್ಯ ಪೀಠಾರೋಹಣ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು