ಮಂಗಳವಾರ, ಅಕ್ಟೋಬರ್ 26, 2021
26 °C
ಸಾವಯವ ಪದ್ಧತಿಯಲ್ಲಿ ಮಿಶ್ರ ಬೇಸಾಯ ಅಳವಡಿಕೆ; ಪಟ್ಟಣ ಗ್ರಾಮದ ರೈತ ಗುಂಡೇರಾಯ ಸಾಧನೆ

3.5 ಎಕರೆಯಲ್ಲಿ ₹ 7.5 ಲಕ್ಷ ಗಳಿಸಿದ ರೈತ!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ತಾಲ್ಲೂಕಿನ ಪಟ್ಟಣ ಗ್ರಾಮದ ರೈತ ಗುಂಡೇರಾಯ ದೂಳಗೊಂಡ ಅವರು ತಮಗೆ ಹಿರಿಯರಿಂದ ಬಂದ 3 ಎಕರೆ 25 ಗುಂಟೆ ಹೊಲದಲ್ಲಿ ಸಾವಯವ ಪದ್ಧತಿಯಡಿ ಮಿಶ್ರ ಬೇಸಾಯ ಅಳವಡಿಸಿಕೊಂಡು ವಾರ್ಷಿಕವಾಗಿ ₹ 7.5 ಲಕ್ಷ ಆದಾಯ ಗಳಿಸಿದ್ದಾರೆ.

ಮೂವತ್ತು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಗುಂಡೇರಾಯ ತಮಗೆ ಬಂದಿರುವ ಅಲ್ಪ ಪ್ರಮಾಣದ ಜಮೀನಿನಲ್ಲಿಯೇ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ರೇಷ್ಮೆ, ಕಬ್ಬು, ಅರಿಶಿನ, ಶುಂಠಿ, ಸೀಡ್‌ಲೆಸ್‌ ನಿಂಬೆ, ಚಿಕ್ಕು, ಪೇರಲ ಹಣ್ಣಿನ ಗಿಡಗಳನ್ನು ಬೆಳೆದಿರುವ ಈ ರೈತ ಆಕಳುಗಳನ್ನು ಸಾಕಿ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಹಾಲನ್ನು ಕಲಬುರ್ಗಿಗೆ ಬಂದು ಮಾರಾಟ ಮಾಡುತ್ತಾರೆ.

ಒಂದು ಎಕರೆಯಲ್ಲಿ ಕಬ್ಬು ಬೆಳೆದ ಗುಂಡೇರಾಯ ಅದನ್ನು ಸಕ್ಕರೆ ಕಾರ್ಖಾನೆಗೆ ಸಾಗಿಸುವುದಿಲ್ಲ. ಬದಲಾಗಿ ಕಲಬುರ್ಗಿ–ಆಳಂದ ರಸ್ತೆಯ ಪಟ್ಟಣ ಕ್ರಾಸ್‌ನಲ್ಲಿ ತಾವೇ ನಿಂತು ಕಬ್ಬಿನ ಹಾಲನ್ನು ಮಾರಾಟ ಮಾಡುತ್ತಾರೆ. ಅದರಿಂದ ನಿತ್ಯ ₹ 3 ಸಾವಿರದಿಂದ ₹ 5 ಸಾವಿರದವರೆಗೆ ಆದಾಯವನ್ನೂ ಪಡೆಯುತ್ತಿದ್ದಾರೆ.

ಅವರ ಹೊಲಕ್ಕೆ ಕೊಳವೆಬಾವಿ ಇಲ್ಲ. ಯಾವುದೇ ನಾಲೆಯೂ ಇಲ್ಲ. ಆದರೂ, ನೀರಾವರಿಗಾಗಿ ತಾವು ಮತ್ತು ಪತ್ನಿ ಶಶಿಕಲಾ ಅವರು ಸೇರಿಕೊಂಡು ಬಾವಿಯನ್ನು ತೋಡಿದ್ದಾರೆ. ಅದರ ಜೊತೆಗೆ ಹೊಲದ ಒಂದು ಬದುವಿನಲ್ಲಿ ಬೃಹತ್ ಕೃಷಿ ಹೊಂಡವನ್ನು ನಿರ್ಮಾಣ ಮಾಡಿದ್ದಾರೆ. ಅದರ ಕೆಳಭಾಗದಲ್ಲಿ ಪೈಪ್‌ಲೈನ್‌ ಅಳವಡಿಸಿಕೊಂಡಿದ್ದು, ಮಳೆಯಾದರೆ ಮೇಲ್ಭಾಗದಿಂದ ನೀರು ಹರಿದು ಬಂದು ಕೃಷಿ ಹೊಂಡ ಭರ್ತಿಯಾಗುತ್ತದೆ. ಕಬ್ಬು, ಹಿಪ್ಪು ನೇರಳೆಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದರಿಂದ ಅಷ್ಟಾಗಿ ನೀರು ವ್ಯರ್ಥವಾಗುವುದಿಲ್ಲ.

ಕಬ್ಬಿನ ಸುತ್ತ ತಂತಿ ಬೇಲಿ ಹಾಕಿದ್ದು, ಹಂದಿಗಳ ಹಾವಳಿಯಿಂದ ಬೆಳೆಗೆ ರಕ್ಷಣೆ ಸಿಕ್ಕಂತಾಗಿದೆ. ಹೊಲದ ಇನ್ನೊಂದು ಬದಿಯಲ್ಲಿ ಒಂದು ಎಕರೆಯಲ್ಲಿ ಅರಣ್ಯ ಕೃಷಿಯನ್ನು ಮಾಡಿದ್ದು, 100ಕ್ಕೂ ಅಧಿಕ ಸಾಗವಾನಿ ಮರಗಳನ್ನು ಬೆಳೆದಿದ್ದಾರೆ.

‘ಸರ್ಕಾರಿ ನೌಕರರಿಗಾದರೆ ನಿವೃತ್ತಿಯ ಬಳಿಕ ಪಿಂಚಣಿ ಬರುತ್ತದೆ. ರೈತರಿಗೆ ಯಾವ ಪಿಂಚಣಿಯೂ ಬರುವುದಿಲ್ಲ. ಆದ್ದರಿಂದ ಮುಂಚೆಯೇ ಯೋಚನೆ ಮಾಡಿ ನನಗೆ 60 ವರ್ಷವಾದ ಬಳಿಕ ನಿರಂತರವಾಗಿ ಆದಾಯ ಪಡೆಯಲು ಸಾಗವಾನಿ ಗಿಡಗಳನ್ನು ಬೆಳೆದಿದ್ದೇನೆ. ಊರಿನ ಕೆಲವರು ನಾನು ಅರಣ್ಯ ಕೃಷಿ ಮಾಡಿದ್ದನ್ನು ಕಂಡು ಕುಹಕವಾಡಿದರು. ಈಗ ಅವು ಬಹಳಷ್ಟು ಎತ್ತರವಾಗಿವೆ. ಉತ್ತಮ ಬೆಲೆಯೂ ಬರುತ್ತದೆ’ ಎನ್ನುತ್ತಾರೆ ಗುಂಡೇರಾಯ ದೂಳಗೊಂಡ.

ಇತ್ತೀಚೆಗೆ ಎರೆಹುಳು ಗೊಬ್ಬರ ಘಟಕವನ್ನೂ ನಿರ್ಮಿಸಿಕೊಂಡು ಹೊಲಕ್ಕೆ ಎರೆಹುಳುವಿನ ಗೊಬ್ಬರವನ್ನೇ ಹಾಕುತ್ತಾರೆ. ಗುಂಡೇರಾಯ ಅವರ ಯಶಸ್ಸಿನಲ್ಲಿ ಪತ್ನಿ ಶಶಿಕಲಾ, ಮಗ ಸಿದ್ದು, ಮಗಳು ಸುಧಾ, ಸೊಸೆ ಕೋಮಲಾಬಾಯಿ ಅವರ ಸಹಕಾರವೂ ಇದೆ. ಅದರಲ್ಲೂ ಶಶಿಕಲಾ ಅವರು ಹೊಲದಲ್ಲೇ ಇದ್ದು, ಪತಿ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಹೊರಗೆ ತೆರಳಿದ ಸಂದರ್ಭದಲ್ಲಿ ಕೃಷಿ ಚಟುವಟಿಕೆಯನ್ನು ಮುಂದುವರಿಸುತ್ತಾರೆ.

ವೃದ್ಧಾಶ್ರಮ, ಅನಾಥಾಶ್ರಮ ಆಶಯ
ಕೃಷಿಯಿಂದ ಬಂದ ಆದಾಯವನ್ನು ತಮ್ಮ ಕುಟುಂಬಕ್ಕೆ ಕೊಂಚ ಉಳಿಸಿಕೊಂಡು ಉಳಿದ ಹಣದಿಂದ ಸ್ವಂತ ಊರು ಪಟ್ಟಣದಲ್ಲಿಯೇ ನಿವೇಶನ ಖರೀದಿಸಿರುವ ಗುಂಡೇರಾಯ ಅವರು ಅಲ್ಲಿ ವೃದ್ಧಾಶ್ರಮ, ಅನಾಥಾಶ್ರಮ ಆರಂಭಿಸಲು ಮುಂದಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡ ಅವರು, ‘ಕೆಲ ವರ್ಷಗಳವರೆಗೆ ಮಾತ್ರ ಕೃಷಿ ಚಟುವಟಿಕೆ ಮಾಡುತ್ತೇನೆ. ನಂತರ ಹೊಲದ ನಿರ್ವಹಣೆಯನ್ನು ಮಗನಿಗೆ ವಹಿಸಿ ಹೆಂಡತಿಯೊಂದಿಗೆ ನಾನು ವೃದ್ಧಾಶ್ರಮ, ಅನಾಥಾಶ್ರಮ ನಿರ್ವಹಣೆ ಮಾಡುತ್ತೇನೆ. ಮಗನ ಮದುವೆಯ ಸಂದರ್ಭದಲ್ಲಿ 10 ಜನ ಬಡ ಜೋಡಿಯ ಮದುವೆ ಮಾಡಿದ್ದೆ. ಇದೀಗ ವಯಸ್ಸಾದವರು, ಅನಾಥರಾದವರನ್ನು ನೋಡಿಕೊಳ್ಳಲು ಆಶ್ರಮ ಆರಂಭಿಸುತ್ತಿದ್ದೇನೆ. ಇದಕ್ಕೆಲ್ಲ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಬಸವರಾಜ ಪಾಟೀಲ ಸೇಡಂ ಅವರೇ ಪ್ರೇರಣೆ’ ಎನ್ನುತ್ತಾರೆ ಗುಂಡೇರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು