ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ನಾಯಿಗಳ ನಿಯಂತ್ರಣಕ್ಕೆ ಪಟ್ಟು

ಅಸಮರ್ಪಕ ನೀರು ಪೂರೈಕೆ; ಎಲ್ ಅಂಡ್ ಟಿ ಕಂಪನಿ ಕಪ್ಪು ಪಟ್ಟಿಗೆ ಸೇರಿಸಲು ಪಾಲಿಕೆ ಸದಸ್ಯರ ಒತ್ತಾಯ
Published 29 ಡಿಸೆಂಬರ್ 2023, 6:25 IST
Last Updated 29 ಡಿಸೆಂಬರ್ 2023, 6:25 IST
ಅಕ್ಷರ ಗಾತ್ರ

ಕಲಬುರಗಿ: ಮಿಸ್ಬಾ ನಗರದಲ್ಲಿ ಬುಧವಾರ ರಾತ್ರಿ ಬಾಲಕಿಗೆ ನಾಯಿ ಕಚ್ಚಿದ ಘಟನೆ ಹಿನ್ನೆಲೆಯಲ್ಲಿ ನಾಯಿಗಳ ನಿಯಂತ್ರಣಕ್ಕೆ ಒತ್ತಾಯಿಸಿ ಮಹಾನಗರ ಪಾಲಿಕೆ ಸದಸ್ಯರು ಪಟ್ಟು ಹಿಡಿದರು. ನಾಯಿಗಳ ನಿಯಂತ್ರಣ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ವಿವೇಕಾನಂದ ಅವರನ್ನು ಅಮಾನತು ಮಾಡುವುದಾಗಿ ಮೇಯರ್ ವಿಶಾಲ ದರ್ಗಿ, ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ ಘೋಷಿಸಿದರು.

ಸಭೆ ಆರಂಭವಾಗುವುದಕ್ಕೂ ಮುನ್ನವೇ ಟೌನ್‌ಹಾಲ್‌ನ ಬಾಗಿಲಲ್ಲೇ ಪಾಲಿಕೆ ಮೇಯರ್, ಶಾಸಕರು ಹಾಗೂ ಆಯುಕ್ತರನ್ನು ತಡೆದ ಸದಸ್ಯರು ನಾಯಿಗಳ ಹಾವಳಿ ತಡೆಯುವವರೆಗೂ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಸಭೆಯಲ್ಲಿ ಚರ್ಚಿಸಿ - ನಿರ್ಧಾರ ಕೈಗೊಳ್ಳೊಣ ಎಂದು ಮೇಯರ್ ವಿಶಾಲ ದರ್ಗಿ, ಶಾಸಕ ಅಲ್ಲಮಪ್ರಭು ಪಾಟೀಲ, ಆಯುಕ್ತ ಭುವನೇಶ ಪಾಟೀಲ ಹೇಳಿದರು. ನಂತರ ಸಭೆಗೆ ಅವಕಾಶ ನೀಡಲಾಯಿತು.

ಸಭೆ ಆರಂಭವಾಗುತ್ತಿದ್ದಂತೆಯೇ ನಾಯಿ ಕಡಿತಕ್ಕೊಳಗಾದ ಬಾಲಕಿಯ ಚಿತ್ರವನ್ನು ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯ ಸಯ್ಯದ್ ಅಹ್ಮದ್, ವಿರೋಧ ಪಕ್ಷದ ನಾಯಕ ಅಜ್ಮಲ್ ಗೋಲಾ ಹಾಗೂ ಇತರರು ಕೂಡಲೇ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯಾಧಿಕಾರಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೇಯರ್ ತಿಳಿಸಿದರು. ಎಫ್‌ಐಆರ್‌ನಲ್ಲಿ ಪಾಲಿಕೆಯ ಪರಿಸರ ಎಂಜಿನಿಯರ್ ಹೆಸರನ್ನೂ ಸೇರಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು.

ನಾಯಿ ಕಡಿತ ಹಾವಳಿ ಕಳೆದ 6 ತಿಂಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಾಲಿಕೆ ಆರೋಗ್ಯ ಅಧಿಕಾರಿ ಹಾಗೂ ಪರಿಸರ ಎಂಜಿನಿಯರ್ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ಸುದೀರ್ಘ ಚರ್ಚೆಯ ಬಳಿಕ ಬಾಲಕಿಗೆ ₹ 5 ಲಕ್ಷ ‌ಪರಿಹಾರ ಹಾಗೂ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸುವುದಾಗಿ ಮೇಯರ್ ಘೋಷಿಸಿದರು. ಸಭೆಯಲ್ಲಿ ಎದ್ದು ನಿಂತ ಕೆಲ ಸದಸ್ಯರು, ಬಾಲಕಿಗೆ ₹ 5 ಲಕ್ಷ ನಿಡಿದ್ದನ್ನು ಸ್ವಾಗತಿಸುತ್ತೇವೆ. ಮುಂದೆಯೂ ನಾಯಿ ಕಡಿತಗಳಾದ ಪ್ರಕರಣದಲ್ಲಿ ಇಷ್ಟೇ ಪರಿಹಾರದ ಮೊತ್ತವನ್ನು ನೀಡಬೇಕು. ಕಡಿಮೆ ಮಾಡಬಾರದು ಎಂದು ಒತ್ತಾಯಿಸಿದರು.

ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿ, ‘ನಗರದಲ್ಲಿ ಅಂದಾಜು 18 ಸಾವಿರ ನಾಯಿಗಳಿದ್ದು, ಇವುಗಳಿಗೆ ಸಂತಾನ ಶಕ್ತಿ ನಿಯಂತ್ರಣಕ್ಕೆ ₹ 2ರಿಂದ ₹ 2.5 ಕೋಟಿ ಬೇಕಾಗುತ್ತದೆ. ಇದಕ್ಕೆ ಕೆಕೆಆರ್‌ಡಿಬಿಯಿಂದ ಅನುದಾನ ಕೋರಲಾಗಿದೆ‘ ಎಂದು ವಿವೇಕಾನಂದ ತಿಳಿಸಿದರು.

ಇಡೀ ಸಭೆಯು ನಾಯಿಗಳ ಹಾವಳಿ ಹಾಗೂ ಎಲ್ ಅಂಡ್ ಟಿ ಕಂಪನಿಯು ನೀರು ಪೂರೈಕೆ ಸಂದರ್ಭದಲ್ಲಿ ಮಾಡಿದ ಭಾನಗಡಿಗಳ ಕುರಿತ ಚರ್ಚೆಗೆ ಮೀಸಲಾಗಿಟ್ಟಂತಾಗುತ್ತದೆ. ರಸ್ತೆಯಲ್ಲಿ ಪೈಪ್‌ಗಳನ್ನು ಅಳವಡಿಸಿ ನಾಲ್ಕೈದು ತಿಂಗಳಾದರೂ ಅಗೆದ ರಸ್ತೆಗಳನ್ನು ದುರಸ್ತಿ ಮಾಡದ ಎಲ್ ಅಂಡ್ ಟಿ ಕಂಪನಿಯ ಕ್ರಮಕ್ಕೆ ಮೇಯರ್ ವಿಶಾಲ ದರ್ಗಿ, ಉಪಮೇಯರ್ ಶಿವಾನಂದ ಪಿಸ್ತಿ, ಸದಸ್ಯರಾದ ಸಯ್ಯದ್ ಅಹ್ಮದ್, ಅಜ್ಮಲ್ ಗೋಲಾ, ಸಚಿನ್ ಶಿರವಾಳ, ಯಲ್ಲಪ್ಪ ನಾಯ್ಕೋಡಿ, ಶಾಂತಾಬಾಯಿ, ಸಾಜಿದ್ ಕಲ್ಯಾಣಿ ದನಿಗೂಡಿಸಿದರು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಡಿ. ಮಾಲೆ ಅವರ ನಿಧನಕ್ಕೆ ಎರಡು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು.

ಸಭೆಗೆ ಶಾಸಕಿ ಕನೀಜ್ ಫಾತಿಮಾ, ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಗೈರಾಗಿದ್ದರು. ಹಿಂದಿನ ಸಾಮಾನ್ಯ ಸಭೆಗೂ ಶಾಸಕಿ ಬಂದಿರಲಿಲ್ಲ.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು. ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಪಾಲಿಕೆ ಸದಸ್ಯರು ಇದ್ದರು
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು. ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಪಾಲಿಕೆ ಸದಸ್ಯರು ಇದ್ದರು
ಮಹಾನಗರ ಪಾಲಿಕೆಯ 477 ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದರಿಂದ ಕಸ ವಿಲೇವಾರಿಯಲ್ಲಿ ವ್ಯತ್ಯಯವಾಗಿದೆ. ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡು ನ್ಯಾಯ ಒದಗಿಸಬೇಕು
ಅಲ್ಲಮಪ್ರಭು ‍ಪಾಟೀಲ ಶಾಸಕ
ಅಧಿಕಾರಿಗಳು ಎಲ್‌ ಅಂಡ್ ಟಿ ಕಂಪನಿ ಮಾಡುತ್ತಿರುವ ಕಳ್ಳಾಟದಲ್ಲಿ ಭಾಗಿಯಾಗಬಾರದು. ಕುಡಿಯುವ ನೀರು ಕೊಡುವುದು ಪುಣ್ಯದ ಕೆಲಸ. ಇದರಲ್ಲಿ ಎಡವಿದರೆ ಜನರ ಶಾಪ ನಿಮ್ಮ ಮಕ್ಕಳಿಗೆ ತಟ್ಟುತ್ತದೆ
ತಿಪ್ಪಣ್ಣಪ್ಪ ಕಮಕನೂರ ವಿಧಾನಪರಿಷತ್ ಸದಸ್ಯ
ಎಲ್ಲೆಲ್ಲಿ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದೆಯೋ ಅಲ್ಲಿ ಟ್ಯಾಂಕರ್ ನೀರನ್ನು ಎಲ್ ಅಂಡ್ ಟಿ ಕಂಪನಿ ಪೂರೈಸಬೇಕು. ಇಂತಹ ಸಮಸ್ಯೆಗಳಿರುವ ಜಾಗಕ್ಕೆ ಸ್ವತಃ ಭೇಟಿ ನೀಡುತ್ತೇನೆ
ವಿಶಾಲ ದರ್ಗಿ ಮೇಯರ್
ಪಾಲಿಕೆಯ ಜೆಇ ವಾಲ್ವ್‌ಮನ್‌ಗಳ ನೆರವು ಪಡೆದು ಜನರಿಗೆ ತೊಂದರೆಯಾಗದಂತೆ ನೀರು ಪೂರೈಸಬೇಕು. ಮುಂದೆಯೂ ಸುಧಾರಿಸದಿದ್ದರೆ ಕಂಪನಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ
ಭುವನೇಶ್ ಪಾಟೀಲ ಪಾಲಿಕೆ ಆಯುಕ್ತ

ಆಯುಕ್ತ-ಆರೋಗ್ಯಾಧಿಕಾರಿ ಜಟಾಜಟಿ:

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ ಆರೋಗ್ಯಾಧಿಕಾರಿ ಡಾ. ವಿವೇಕಾನಂದ ಮಧ್ಯೆ ಜಟಾಪಟಿ ನಡೆಯಿತು. ನನಗೆ ಕೆಲಸ ಮಾಡಲು ಒಬ್ಬ ಜವಾನನನ್ನೂ ಕೊಟ್ಟಿಲ್ಲ ಎಂದು ವಿವೇಕಾನಂದ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಭುವನೇಶ್ ವಿವೇಕಾನಂದ ಅವರು ಸ್ಥಳಕ್ಕೆ ಭೇಟಿ ನೀಡದೇ 300 ಟ್ರೇಡ್ ಲೈಸೆನ್ಸ್ ನೀಡಿದ್ದರು. ಹೀಗಾಗಿ ಅಮಾನತು ಮಾಡಲಾಗಿತ್ತು. ನಂತರ ಕೆಎಟಿಗೆ ಹೋಗಿ ತಡೆಯಾಜ್ಞೆ ತಂದಿದ್ದರು. ಅಲ್ಲದೇ ನನ್ನ ವಿರುದ್ಧ ಮಾನನಷ್ಟ ಪ್ರಕರಣವನ್ನೂ ದಾಖಲಿಸಿದ್ದರು. ತಡೆಯಾಜ್ಞೆ ತಂದಿದ್ದರಿಂದ ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಯಿತು. ಆಗ ಮಧ್ಯಪ್ರವೇಶಿಸಿದ ವಿವೇಕಾನಂದ ಮಾನನಷ್ಟ ಮೊಕದ್ದಮೆಯನ್ನು ವಾಪಸ್ ಪಡೆದಿದ್ದೇನೆ. ಅದನ್ನೂ ಹೇಳಿ ಎಂದರು.

ನೀರು ಪೂರೈಕೆ ಇತಿಹಾಸ ಬಿಚ್ಚಿಟ್ಟ ಸಯ್ಯದ್ ಅಹ್ಮದ್:

ಹೇಗೂ ಮೇಯರ್ ಅವರು ಒಳ್ಳೆಯ ಊಟ ಹಾಕಿಸಿದ್ದಾರೆ. ಹೀಗಾಗಿ ಒಂದು ತಾಸು ಮಾತನಾಡುತ್ತೇನೆ ಎಂದು ಎದ್ದು ನಿಂತ ಪಾಲಿಕೆ ಸದಸ್ಯ ಸಯ್ಯದ್ ಅಹ್ಮದ್ ಅವರು ಸುಮಾರು ಒಂದು ಗಂಟೆ ಕಲಬುರಗಿ ನಗರಕ್ಕೆ ನೀರು ಪೂರೈಕೆಯಾಗುತ್ತಿರುವ ಇತಿಹಾಸವನ್ನು ಬಿಚ್ಚಿಟ್ಟರು. 57 ವರ್ಷಗಳ ಹಿಂದೆ ಕೆರೆಬೋಸಗಾ ಗ್ರಾಮದಿಂದ ಕೇವಲ ಗುರುತ್ವಾಕರ್ಷಣ ಬಲದಿಂದ ಇಡೀ ನಗರಕ್ಕೆ ನೀರು ಪೂರೈಕೆಯಾಗುತ್ತಿತ್ತು. ನೀರು ಪೂರೈಕೆ ಜಾಲಕ್ಕೆ ಆಗ ₹ 97 ಲಕ್ಷ ಖರ್ಚು ಮಾಡಲಾಗಿತ್ತು. ಈಗ ನಿರಂತರ ನೀರು ಯೋಜನೆಗಾಗಿ ₹ 840 ಕೋಟಿ ಖರ್ಚು ಮಾಡಲಾಗುತ್ತಿದೆ. ಇಷ್ಟೊಂದು ಹಣ ಖರ್ಚು ಮಾಡುತ್ತಿದ್ದರೂ ಜನರಿಗೆ ಮಾತ್ರ ನೀರು ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. 1999ರಲ್ಲಿ ವಿಎಲ್‌ಒ ಕಂಪನಿ ಪೈಪ್‌ಲೈನ್ ಜಾಲ ಅಳವಡಿಸುವ ಗುತ್ತಿಗೆ ಪಡೆದಿತ್ತು. ಆಗಲೂ ಆ ಕಂಪನಿ ವಿರುದ್ಧ ಯಾವುದೇ ದೂರು ಬಂದಿರಲಿಲ್ಲ. ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಗಳಿಸಿರುವ ಎಲ್ ಅಂಡ್ ಟಿ ಕಂಪನಿ ಮಾತ್ರ ಕಳಪೆ ಕಾಮಗಾರಿ ನಿರ್ವಹಿಸಿ ಸಮಸ್ಯೆ ಸೃಷ್ಟಿಸುತ್ತಿದೆ. ಹೀಗಾಗಿ ಇದರ ಖರ್ಚು ವೆಚ್ಚಗಳ ಪತ್ತೆಗಾಗಿ ಲೋಕಾಯುಕ್ತ ದಾಳಿ ನಡೆಸಬೇಕು ಎಂದು ಒತ್ತಾಯಿಸಿದರು.

56 ನೋಟಿಸ್‌ ನೀಡಿದರೂ ಉತ್ತರವಿಲ್ಲ!‌

ಕಳಪೆ ಕಾಮಗಾರಿ ರಸ್ತೆ ಅಗೆತ ಸಕಾಲಕ್ಕೆ ನೀರು ಪೂರೈಕೆ ಮಾಡದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ನಿರಂತರ ನೀರು ಯೋಜನೆಯ ಹೊಣೆ ಹೊತ್ತುಕೊಂಡ ಎಲ್ ಅಂಡ್ ಟಿ ಕಂಪನಿಗೆ ಇಲ್ಲಿಯವರೆಗೆ 56 ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಕರ್ನಾಟಕ ನಗರ ಕುಡಿಯುವ ನೀರು ಯೋಜನೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕಾಂತರಾಜ್ ಉತ್ತರ ನೀಡಿದರು. ಈ ಉತ್ತರ ಕೇಳಿ ಕೆರಳಿದ ತಿಪ್ಪಣ್ಣಪ್ಪ ಕಮಕನೂರ ‘ಅಷ್ಟೂ ನೋಟಿಸ್‌ನಲ್ಲಿ ನೀವು ಸೌಖ್ಯವಾಗಿದ್ದೀರಾ? ನಿಮ್ಮ ಮಕ್ಕಳು ಆರಾಮಾಗಿದ್ದಾರೆ ಎಂದು ಬರೆದಿದ್ದೀರಾ? ಒಂದು ನೋಟಿಸ್‌ಗೆ ಉತ್ತರ ಬರದಿದ್ದರೆ ಮತ್ತೊಂದು ನೋಟಿಸ್‌ನಲ್ಲಿ ಇನ್ನಷ್ಟು ಖಾರವಾಗಿ ಬರೆಯಬೇಕು’ ಎಂದರು. ಕಂಪನಿಯನ್ನು ಕ‍ಪ್ಪು ಪಟ್ಟಿಗೆ ಸೇರಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ ಎಂದು ಕಾಂತರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT