ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಗ್ರಂಥ ಆಧರಿಸಿ ಶಿವಲಿಂಗದ ಮೇಲೆ ಪಾದ: ಸಿದ್ಧವೀರ ಶಿವಾಚಾರ್ಯರು

ದಿಗ್ಗಾಂವ ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರ ಸಮರ್ಥನೆ
Published : 11 ಸೆಪ್ಟೆಂಬರ್ 2024, 5:35 IST
Last Updated : 11 ಸೆಪ್ಟೆಂಬರ್ 2024, 5:35 IST
ಫಾಲೋ ಮಾಡಿ
Comments

ಚಿತ್ತಾಪುರ: ಸೇಡಂ ತಾಲ್ಲೂಕಿನ ಕಲಕಂಬ ಗ್ರಾಮದ ದಿಗ್ಗಾಂವದ ಶಾಖಾ ಮಠದಲ್ಲಿ ಸೆ.7ರಂದು ನಡೆದಿರುವ ಶಿವಲಿಂಗದ ಪ್ರಾಣ ಪ್ರತಿಷ್ಠಾಪನೆಗೆ ಮುಂಚೆ ವೀರಶೈವ ಧರ್ಮಗ್ರಂಥಗಳನ್ನು ಆಧರಿಸಿಯೇ ಶಿವಲಿಂಗದ ಮೇಲೆ ಪಾದವಿಟ್ಟು, ಪೂಜೆಗೈಯ್ಯಲಾಗಿದೆ’ ಎಂದು ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರು ಸಮರ್ಥನೆ ನೀಡಿದ್ದಾರೆ.

ಶಿವಲಿಂಗದ ಮೇಲೆ ಪಾದವಿಟ್ಟು ಪಾದಪೂಜೆ ಮಾಡಿಸಿಕೊಂಡಿದ್ದ ವಿಡಿಯೊ ಆಧರಿಸಿ ಪ್ರಜಾವಾಣಿ ಸೆ.10ರ ಸಂಚಕೆಯಲ್ಲಿ ಪ್ರಕಟಿಸಿದ ‘ಶಿವಲಿಂಗದ ಮೇಲೆ ಪಾದ ಇರಿಸಿ ಪೂಜೆ’ ಸುದ್ದಿ ಹಾಗೂ ಶಿವಾಚಾರ್ಯರು ಅನುಸರಿಸಿದ ಪದ್ಧತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಸಿದ್ಧವೀರ ಶಿವಾಚಾರ್ಯರು, ದಿಗ್ಗಾಂವ ಗ್ರಾಮದ ಅವರ ಮಠದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

‘ಇಲ್ಲಿನ ಈಶ ಬಸವೇಶ್ವರ ದೇವಾಲಯದ ಲಿಂಗ ಭಕ್ತರಿಗೆ ಕಾಣದಂತಾಗಿತ್ತು. ಭಕ್ತರು ಹೊಸ ಶಿವಲಿಂಗ ಪ್ರತಿಷ್ಠಪಿಸಿದರು. ಪ್ರತಿಷ್ಠಾಪನೆಗೆ ಮುಂಚೆ ಅದೊಂದು ಕಲ್ಲಾಗಿತ್ತು. ಗುರುವಿನ ಪಾದೋದಕ ಪೂಜೆಯ ನಂತರವೇ ಶಿಲೆಯ ಆಕಾರದಿಂದ ಮುಕ್ತಿ ಹೊಂದಿ ಲಿಂಗಕ್ಕೆ ದೈವತ್ವ ಪ್ರಾಪ್ತಿಯಾಗುತ್ತದೆ. ನಂತರ ಪೂಜೆಗೆ ಅರ್ಹವಾಗುತ್ತದೆ. ಧರ್ಮಗ್ರಂಥಗಳ ಆಧಾರವನ್ನಿಟ್ಟುಕೊಂಡೇ ಕ್ರಿಯಾಬದ್ಧವಾಗಿ ಪಾದ ಇರಿಸಿ, ಪಾದೋದಕದಿಂದ ಲಿಂಗದ ಶಿಲೆಗೆ ಶುದ್ಧೀಕರಣ ಮಾಡಿದ್ದೇವೆ’ ಎಂದು ಸಮರ್ಥಿಸಿಕೊಂಡರು.

ಶಿವಲಿಂಗ ಸ್ಥಾಪನೆಗೆ ಧಾನ್ಯ, ಜಲ, ಶಯನ, ಪುಷ್ಪವಾಸ ಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಗುರುವಿನ ಪಾದೋದಕದ ಪೂಜೆಯಿಲ್ಲದೆ, ಶಿವಲಿಂಗ ಸ್ಥಾಪನೆ ಹಾಗೂ ಪೂಜೆಗೆ ಯೋಗ್ಯವಲ್ಲ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಕಾಶಿ ಪೀಠದ ಜಗದ್ಗುರುಗಳು ಇದನ್ನೇ ಹೇಳಿದ್ದಾರೆ ಎಂದು ತಿಳಿಸಿದರು.

ಶಿವಲಿಂಗದ ಮೇಲೆ ಪಾದವಿಟ್ಟು ಪೂಜೆ ಮಾಡುವ ಪದ್ದತಿಯ ಉಲ್ಲೇಖ ಯಾವ ಧರ್ಮಗ್ರಂಥದಲ್ಲಿದೆ ಎನ್ನುವ ಪ್ರಜಾವಾಣಿ ಪ್ರಶ್ನೆಗೆ ಉತ್ತರಿಸಿದ ಸಿದ್ಧವೀರ ಶಿವಾಚಾರ್ಯರು, 'ಗದಗದ ಎಚ್.ಟಿ. ಮಹಾಂತೇಶ ಶಾಸ್ತ್ರಿಗಳು 1967ರಲ್ಲಿ ರಚಿಸಿದ ‘ವೀರಶೈವ ನವರತ್ನ’ ಗ್ರಂಥದ ಪುಟ ಸಂಖ್ಯೆ 80ರಲ್ಲಿ ಹಾಗೂ ಹುಬ್ಬಳ್ಳಿಯ ಚೆನ್ನವೀರ ಶಾಸ್ತ್ರೀ ಸಾಲಿಮಠ ಅವರು ರಚಿಸಿದ ‘ವೀರಶೈವ ದಶರತ್ನ’ ಗ್ರಂಥದಲ್ಲಿ ಉಲ್ಲೇಖವಿದೆ ಎಂದು ಪ್ರತಿಕ್ರಿಯಿಸಿದರು.

ಮಠದ ವಕ್ತಾರ ಶರಣು ಊಡಗಿ, ನಾಗಭೂಷಣ ಸ್ವಾಮಿ, ಸೋಮಶೇಖರಯ್ಯ, ಬಸವಂತರಾಯ ಮಾಲಿಪಾಟೀಲ, ಚಂದ್ರಶೇಖರ ಪಾಟೀಲ, ಮಹಾದೇವಪ್ಪ ಹಣಿಕೇರಿ, ಶಂಭುಲಿಂಗಪ್ಪ ಸಂಗಾವಿ, ಶಿವರಾಜ ಸಂಗಾವಿ, ಚೆನ್ನಪ್ಪ ಪಲ್ಲೇದ, ಕಾಶಪ್ಪ ದುಗನೂರು, ಶಿವನಾಗಪ್ಪ ಮುತಲಗಡ್ಡಿ, ರೇವಣಸಿದ್ದಯ್ಯ ಕಲಕಂಬ, ಶಿವಶರಣಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT