ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ| ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ದತ್ತಾತ್ರೇಯ ಆಗ್ರಹ

ಸಾವಳಗಿ ಗ್ರಾಮ ಪಂಚಾಯಿತಿ ಸದಸ್ಯೆ ನಾಗಮ್ಮ ಅಪಹರಣ ಯತ್ನ ಪ್ರಕರಣ
Published 3 ಆಗಸ್ಟ್ 2023, 14:22 IST
Last Updated 3 ಆಗಸ್ಟ್ 2023, 14:22 IST
ಅಕ್ಷರ ಗಾತ್ರ

ಕಲಬುರಗಿ: ‘ಸಾವಳಗಿ ಗ್ರಾಮ ಪಂಚಾಯಿತಿ ಸದಸ್ಯೆ, ಸಿಂದಗಿ(ಬಿ) ಗ್ರಾಮದ ನಿವಾಸಿ ನಾಗಮ್ಮ ರಾಜಶೇಖರ ಅವರ ಅಪಹರಣ ಯತ್ನ ಪ್ರಕರಣದ ಹಿಂದೆ ಕಾಂಗ್ರೆಸ್‌ ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಅವರ ಬೆಂಬಲಿಗರ ಕೈವಾಡವಿದೆ’ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿ ಚುನಾವಣೆ ಪ್ರಜಾಪ್ರಭುತ್ವದ ಉತ್ಸವ. ಆದರೆ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ವೇಳೆ ಜರುಗಿದಂಥ ಹಿಂಸಾಕೃತ‌್ಯಗಳು ಕಲಬುರಗಿ ದಕ್ಷಿಣ ಮತ ಕ್ಷೇತ್ರದಲ್ಲಿ ನಡೆಯುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ನಾಗಮ್ಮ ಹಾಗೂ ಅವರ ಪುತ್ರನ ಮೇಲಿನ ಹಲ್ಲೆ ಯತ್ನವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಈ ಸಂಬಂಧ ನಾಗಮ್ಮ ಅವರಿಂದ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು. ಮಹಿಳಾ ಮೋರ್ಚಾದಿಂದ ಪೊಲೀಸ್‌ ಕಮಿಷನರ್‌ ಅವರಿಗೂ ದೂರು ನೀಡಲು ಕ್ರಮವಹಿಸಲಾಗುವುದು’ ಎಂದರು.

‘ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಎಲ್ಲ ಸದಸ್ಯರ ಬೆಂಬಲ ಕೋರುವುದು ಸಹಜ. ಆದರೆ, ಈ ಪ್ರಕರಣದಲ್ಲಿ ಕ್ಷೇತ್ರವ್ಯಾಪ್ತಿಗೆ ಒಳಪಡದವರೂ ಬೆಂಬಲ ಕೋರಲು ಬಂದಿದ್ದಾಗಿ ಹೇಳುವ ಜನರು ಗುಂಪಿನಲ್ಲಿದ್ದರು. ಹೊಲಕ್ಕೆ ಹೋಗಿ ಬೆಂಬಲ ಕೋರುವ ಅಗತ್ಯವೇನಿತ್ತು?’ ಎಂದು ಪ್ರಶ್ನೆಯೊಂದಕ್ಕೆ ಅವರು ಮರು ಪ್ರಶ್ನೆಹಾಕಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ‘ಸಾವಳಗಿ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಯು ಆಗಸ್ಟ್‌ 4ರಂದು ನಡೆಯಲಿದ್ದು, ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಮುಖಂಡರು ಹವಣಿಸುತ್ತಿದ್ದಾರೆ. ಬಿಜೆಪಿ ಬೆಂಬಲಿತ 13, ಕಾಂಗ್ರೆಸ್‌ ಬೆಂಬಲಿತ 7 ಸದಸ್ಯರಿದ್ದರು. ಮೂವರಿಗೆ ಆಮಿಷವೊಡ್ಡಿ ಕಾಂಗ್ರೆಸ್‌ ಬೆಂಬಲಿಗರು ತಮ್ಮತ್ತ ಸೆಳೆದಿದ್ದಾರೆ. ಇದೀಗ ಎರಡೂ ಪಕ್ಷಗಳ ಬೆಂಬಲಿಗರು ಸಮಬಲದಲ್ಲಿದ್ದಾರೆ. ಇಂಥ ಸನ್ನಿವೇಶದಲ್ಲಿ ಮಹಿಳಾ ಸದಸ್ಯರೊಬ್ಬರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಅಪಹರಿಸಲು ಯತ್ನಿಸಲಾಗಿದೆ’ ಎಂದು ಆರೋಪಿಸಿದರು.

ಕಲಬುರಗಿ ಮಹಾನಗರ ಪಾಲಿಕೆ ಮೇಯರ್‌ ವಿಶಾಲ್ ದರ್ಗಿ ಮಾತನಾಡಿ, ‘ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಚುನಾವಣೆಯಲ್ಲೂ ಈ ಮಟ್ಟದ ರಾಜಕಾರಣ ನಡೆದಿರಲಿಲ್ಲ. ಈ ಪ್ರಕರಣದಲ್ಲಿ ಪೊಲೀಸರೂ ಒತ್ತಡದಲ್ಲಿ ಇದ್ದಂತೆ ಕಾಣುತ್ತಿದೆ. ಈ ಘಟನೆಯ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT