ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಹೆಸರಿನಲ್ಲಿ ಕೋಟ್ಯಂತರ ದೇಣಿಗೆ ಸಂಗ್ರಹಿಸಿದ ಗಾಣಗಾಪುರ ಅರ್ಚಕರು!

ತನಿಖೆಗೆ ಮುಂದಾದ ಜಿಲ್ಲಾಧಿಕಾರಿ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅರ್ಚಕರು ಪರಾರಿ
Last Updated 23 ಜೂನ್ 2022, 13:21 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಅರ್ಚಕರು ದತ್ತಾತ್ರೇಯ ದೇವರ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ಅಕ್ರಮ ಎಸಗಿರುವ ಸಂಗತಿ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಯಶವಂತ ಗುರುಕರ್ ಸೂಚನೆ ಮೇರೆಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಏತನ್ಮಧ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ಅರ್ಚಕರು ಗಾಣಗಾಪುರದಿಂದ ಪರಾರಿಯಾಗಿದ್ದಾರೆ.

ದತ್ತಮಂದಿರ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ದತ್ತಾತ್ರೇಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ರಾಠೋಡ ಅವರು ದೇವಲ ಗಾಣಗಾಪುರ ಠಾಣೆಗೆ ದೂರು ನೀಡಿದ್ದು, ‘ದತ್ತಾತ್ರೇಯ ದೇವಸ್ಥಾನದ ಅಧಿಕೃತ ವೆಬ್‌ಸೈಟ್ (www.devalganagapur.com) ಹೊರತುಪಡಿಸಿ ದತ್ತಾತ್ರೇಯ ದೇವಸ್ಥಾನದ ಹೆಸರಿನಲ್ಲಿ ಅನಧಿಕೃತ ವೆಬ್‌ಸೈಟ್ ತೆರೆದುಕೊಂಡು ವಲ್ಲಭ ದಿನಕರ ಭಟ್ಟ ಪೂಜಾರಿ, ಅಂಕುರ ಆನಂದರಾವ ಪೂಜಾರಿ, ಪ್ರತೀಕ ಸದಾಶಿವ ಪೂಜಾರಿ, ಗಂಗಾಧರ ಶ್ರೀಕಾಂತ ಭಟ್ಟ ಪೂಜಾರಿ, ಶರತ್ ಭಟ್ಟ ನಂದು ಭಟ್ಟ ಪೂಜಾರಿ ಸೇರಿದಂತೆ ಇತರ ಅರ್ಚಕರ ವಿರುದ್ಧ ತನಿಖೆ ನಡೆಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ದತ್ತಾತ್ರೇಯ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳ‍ಪಟ್ಟಿರುವುದರಿಂದ ಅಧಿಕೃತ ವೆಬ್‌ಸೈಟ್‌ ಮೂಲಕವೇ ಭಕ್ತರು ಪೂಜಾ ಸೇವೆಗಳನ್ನು ನೆರವೇರಿಸಬೇಕು. ಆದರೆ, ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಕೆಲ ಅರ್ಚಕರು ನಕಲಿ ವೆಬ್‌ಸೈಟ್‌ಗಳನ್ನು ಆರಂಭಿಸಿ ಆನ್‌ಲೈನ್‌ ಮೂಲಕ ಸೇವೆಗಳನ್ನು ನೀಡುವುದಾಗಿ ಭಕ್ತರನ್ನು ನಂಬಿಸಿದ್ದರು. ಇದಕ್ಕಾಗಿ ₹ 10 ಸಾವಿರದಿಂದ ₹ 50 ಸಾವಿರದವರೆಗೆ ಭಕ್ತರಿಂದ ಹಣವನ್ನು ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.

ವೆಬ್‌ಸೈಟ್‌ ಮೂಲಕ 2 ಸಾವಿರ ಭಕ್ತರು ವಿವಿಧ ಧಾರ್ಮಿಕ ಸೇವೆಗಳನ್ನು ಪಡೆಯಲು ಹಣ ಪಾವತಿ ಮಾಡಿದ್ದಾರೆ. ಅರ್ಚಕರ ಖಾತೆಗಳಲ್ಲಿ ₹ 20 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.

***

ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ ಅಲ್ಲಿನ ಅರ್ಚಕರು ಬೇರೆ ವೆಬ್‌ಸೈಟ್ ತೆರೆದು ಅದರಿಂದ ದೇಣಿಗೆ ಸಂಗ್ರಹಿಸಿದ ಬಗ್ಗೆ ಮಾಹಿತಿ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆಯ ಬಳಿಕ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ
-ಯಶವಂತ ಗುರುಕರ್‌,ಕಲಬುರಗಿಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT