ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಆದ್ಯತೆ: ಯಡಿಯೂರಪ್ಪ ಭರವಸೆ

₹ 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ
Last Updated 11 ಜುಲೈ 2021, 12:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾ ಗಿದ್ದು, ಹೆಸರಷ್ಟೇ ಬದಲಾಯಿಸದೇ ಬಜೆಟ್‌ನಲ್ಲಿ ಈ ಭಾಗದ ಜಿಲ್ಲೆಗಳಿಗೆ ಹಣವನ್ನು ಮೀಸಲಿಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ‘ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ₹ 83 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಲೋಕೋಪಯೋಗಿ ಭವನದ ಉದ್ಘಾಟನೆಯನ್ನು ಶನಿವಾರ ನೆರವೇರಿಸಿ ಮಾತನಾಡಿದ ಅವರು, ‘ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಭೀಕರ ಪ್ರವಾಹ ನಂತರ ಕೊರೊನಾ ಮೊದಲ ಹಾಗೂ ಎರಡನೇ ಅಲೆಗಳು ಬಂದಿದ್ದರಿಂದ ಸಾಕಷ್ಟು ತೆರಿಗೆ ನಷ್ಟವಾಯಿತು. ಕೋವಿಡ್–19 ಸಾಂಕ್ರಾಮಿಕ ತಂದೊಡ್ಡಿದ ಸಂಕಷ್ಟಗಳ ನಡುವೆಯೂ ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಅನುದಾನವನ್ನು ಕಡಿತಗೊಳಿಸಿಲ್ಲ’ ಎಂದರು.

‘ಕೋವಿಡ್ ಎರಡನೇ ಅಲೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಿದೆ. ಸಂಭಾವ್ಯ 3ನೇ ಅಲೆಯನ್ನು ತಡೆಗಟ್ಟಲು ಈಗಾಗಲೇ ಸನ್ನದ್ಧವಾಗಿದ್ದು, ಪೂರಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. 3ನೇ ಅಲೆ ಇನ್ನಷ್ಟು ಕಠಿಣವಾದ ಸಂದರ್ಭವನ್ನು ಸೃಷ್ಟಿಸಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸ್ಚಚ್ಛತೆ, ದೈಹಿಕ ಅಂತರ, ಸ್ಯಾನಿಟೈಜರ್ ಹಾಕಿಕೊಳ್ಳುವ ಮೂಲಕ ಕೋವಿಡ್ ನಿಯಮಗಳನ್ನು ಪಾಲಿಸಬೇಕು’ ಎಂದು ಹೇಳಿದರು.

ಲೋಕೋಪಯೋಗಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ‘1.62 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ₹ 83 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಲೋಕೋಪಯೋಗಿ ಭವನವನ್ನು ನಿರ್ಮಿಸಲಾಗಿದೆ. ಬೆಂಗಳೂರಿನ ಕೇಂದ್ರ ಕಚೇರಿಗೆ ಮಾತ್ರ ಮಾಡಲಾದ ಫರ್ನಿಷಿಂಗ್ ಕೆಲಸವನ್ನು ಈ ಕಟ್ಟಡಕ್ಕೂ ಮಾಡಲಾಗಿದೆ. ಇದು ನಮ್ಮ ಸರ್ಕಾರದಿಂದ ಕಲಬುರ್ಗಿಗೆ ನೀಡಿದ ಕೊಡುಗೆಯಾಗಿದೆ’ ಎಂದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಂಭವಿಸಿದ ಭಾರಿ ಪ್ರವಾಹದಲ್ಲಿ ₹ 35 ಸಾವಿರ ಕೋಟಿ ಮೊತ್ತದ ಸರ್ಕಾರಿ ಆಸ್ತಿಪಾಸ್ತಿ ಹಾನಿಯಾಯಿತು. ಕಳೆದ ವರ್ಷ ಸಂಭವಿಸಿದ ನೆರೆಯಿಂದಾಗಿ ₹ 25 ಸಾವಿರ ಕೋಟಿ ನಷ್ಟವಾಯಿತು. ನಂತರ ಕೊರೊನಾ ಅಲೆಯಿಂದಾಗಿ ಜನರು ಉದ್ಯೋಗ ಕಳೆದುಕೊಂಡರು. ಕುಲಕಸುಬನ್ನೇ ನಂಬಿದ್ದ ಸಮುದಾಯಗಳಿಗೆ, ಆಟೊ, ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ನೆರವು ನೀಡಲು ₹ 6 ಸಾವಿರ ಕೋಟಿ ಖರ್ಚು ಮಾಡಿದರು’ ಎಂದು ಹೇಳಿದರು.

‘ಲೋಕೋಪಯೋಗಿ ಇಲಾಖೆ ಯಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಮುಖ್ಯಮಂತ್ರಿ ಅವರು ₹ 5,083 ಕೋಟಿ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ವಿಕಾಸ್ ಎಂಬ ತತ್ವದಲ್ಲಿ ನಂಬಿಕೆಯಿಟ್ಟು ಸರ್ಕಾರ ಕೆಲಸ ಮಾಡುತ್ತಿದೆ’ ಎಂದರು.

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾತನಾಡಿ, ‘ಮುಖ್ಯಮಂತ್ರಿ ಅವರು ಪರಿಶಿಷ್ಟರ ಮೇಲಿನ ವಿಶೇಷ ಕಾಳಜಿಯಿಂದಾಗಿ ₹ 500 ಕೋಟಿ ವೆಚ್ಚದಲ್ಲಿ 25 ಕ್ರೈಸ್ ಶಾಲೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದಾರೆ. ರಾಜ್ಯದಲ್ಲಿರುವ 826 ಶಾಲೆಗಳಲ್ಲಿ 1.5 ಲಕ್ಷ ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಜೊತೆಗೆ ಉತ್ತಮ ಸಾಧನೆಯನ್ನೂ ಮಾಡಿದ್ದಾರೆ. ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 71ರಷ್ಟಿದ್ದರೆ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಾಲೆಗಳಲ್ಲಿ ಓದಿದ ಮಕ್ಕಳು ಶೇ 94ರಷ್ಟು ಫಲಿತಾಂಶ ಪಡೆದಿದ್ದಾರೆ. ಪಿಯುಸಿಯಲ್ಲಿ ರಾಜ್ಯದ ಫಲಿತಾಂಶ ಶೇ 69ರಷ್ಟಿದ್ದರೆ ವಸತಿ ಶಾಲೆಯಲ್ಲಿ ಓದಿದವರು ಶೇ 86ರಷ್ಟು ಫಲಿತಾಂಶ ಪಡೆದಿದ್ದಾರೆ’ ಎಂದು ವಿವರಿಸಿದರು.

‘ನಮ್ಮ ಸರ್ಕಾರ ಪರಿಶಿಷ್ಟರ ಕಾಲೊನಿಗಳ ಅಭಿವೃದ್ಧಿಗಾಗಿ ₹ 26 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ’ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿದರು.

ನಗರಾವೃದ್ಧಿ ಸಚಿವ ಭೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಸಂಸದ ಡಾ. ಉಮೇಶ ಜಾಧವ, ಶಾಸಕರಾದ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ. ಅವಿನಾಶ್ ಜಾಧವ, ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ. ಪಾಟೀಲ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಇದ್ದರು.

–––

ಕಪ್ಪು ಟೀ ಶರ್ಟ್‌ ಕಳಚಿರಿ!

ಕಲಬುರ್ಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಿದ್ದ ಕಣ್ಣಿ ಮಾರ್ಕೆಟ್‌ ಕಟ್ಟಡದ ಅಡಿಗಲ್ಲು ಸಮಾರಂಭದ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬರಿಗೆ ಶಾಕ್ ಕಾದಿತ್ತು.

ಕಾರ್ಯಕ್ರಮ ಸ್ಥಳಕ್ಕೆ ತೆರಳುವ ಸಂದರ್ಭದಲ್ಲಿ ಅವರನ್ನು ತಡೆದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು, ಕಪ್ಪು ಟೀ ಶರ್ಟ್‌ ತೆಗೆದು ಬೇರೆ ಬಟ್ಟೆ ಹಾಕಿಕೊಂಡು ಬಂದರೆ ಒಳಗೆ ಹೋಗಲು ಅವಕಾಶ ನೀಡುವುದಾಗಿ ತಿಳಿಸಿದರು. ಇದರಿಂದ ತಬ್ಬಿಬ್ಬುಕೊಂಡ ಆ ವ್ಯಕ್ತಿ ಏಕೆ ಎಂದಾಗ, ‘ಆ ಟೀ ಶರ್ಟ್‌ ಕಳಚಿ ಧ್ವಜದ ರೀತಿ ಬಳಸಿ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಬಹುದು’ ಎಂದು ಪ್ರತ್ಯುತ್ತರ ಕೊಟ್ಟರು.

ಇದರಿಂದ ಕಕ್ಕಾಬಿಕ್ಕಿಯಾದ ಆ ವ್ಯಕ್ತಿ, ಅಂತಹ ಯಾವ ಉದ್ದೇಶವೂ ತಮಗಿಲ್ಲ ಎಂದು ತಮ್ಮ ಪರಿಚಯ ಹೇಳಿಕೊಳ್ಳಲು ಮುಂದಾದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿ ಅವರನ್ನು ಗುರುತು ಹಿಡಿದು ಒಳಗೆ ಕಳಿಸಿದರು.

ಲೋಕೋಪಯೋಗಿ ಇಲಾಖೆಯ ಕಟ್ಟಡ ಉದ್ಘಾಟನೆಗೆ ತೆರಳಿದ್ದ ಸಾರ್ವಜನಿಕರು ಹಾಕಿದ್ದ ಕಪ್ಪು ಮಾಸ್ಕ್ ತೆಗೆಸಿ ನೀಲಿ ಮಾಸ್ಕ್‌ಗಳನ್ನು ವಿತರಿಸಿದರು.

ಬೀಗರ ಮನೆಯಲ್ಲಿ ಊಟ...

ಹಲವು ತಿಂಗಳ ಬಳಿಕ ಕಲಬುರ್ಗಿಗೆ ಬಂದ ಬಿ.ಎಸ್‌. ಯಡಿಯೂರಪ್ಪ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ ಅವರ ಆಹ್ವಾನದ ಮೇರೆಗೆ ರಾಮಮಂದಿರ ಬಳಿಯ ಅವರ ಮನೆಗೆ ತೆರಳಿ ಮಧ್ಯಾಹ್ನದ ಊಟ ಸೇವಿಸಿದರು.

ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ನಗರಕ್ಕೆ ಬಂದ ಯಡಿಯೂರಪ್ಪ ಅವರು ಕಣ್ಣಿ ಮಾರ್ಕೆಟ್ ಕಟ್ಟಡದ ಅಡಿಗಲ್ಲು ಹಾಗೂ ಲೋಕೋಪಯೋಗಿ ಇಲಾಖೆಯ ಭವನ ಉದ್ಘಾಟಿಸಿ ನೇರವಾಗಿ ತಮ್ಮ ಸಂಪುಟದ ಸದಸ್ಯರೊಂದಿಗೆ ಮಾನಕರ ಅವರ ಮನೆಗೆ ತೆರಳಿ ಊಟ ಮಾಡಿ ನಂತರ ಐವಾನ್ ಇ ಶಾಹಿ ಅತಿಥಿಗೃಹಕ್ಕೆ ಬಂದು ವಿಶ್ರಾಂತಿ ಪಡೆದರು.

ಪ್ರಗತಿ ಪರಿಶೀಲನಾ ಸಭೆ ರದ್ದು

ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯಡಿಯೂರಪ್ಪ ಅವರು ಕೋವಿಡ್‌–19 ಹಾಗೂ ಇತರ ವಿಚಾರಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಬೇಕಿತ್ತು. ಆದರೆ ಊಟ ಮುಗಿಸಿಕೊಂಡು ಬಂದಾಗ ತಡವಾಗಿತ್ತು. ಅಲ್ಲದೇ, ಸಂಜೆ ಬಳಿಕ ವಿಮಾನ ಟೇಕಾಫ್‌ ಮಾಡಲು ಅಗತ್ಯ ಸೌಕರ್ಯಗಳು ಇಲ್ಲದಿರುವುದು ಹಾಗೂ ಭಾರಿ ಮಳೆಯಾಗುವ ಸಂಭವವಿದ್ದು, ರನ್‌ವೇದಲ್ಲಿ ವಿಮಾನ ಜಾರುವ ಸಾಧ್ಯತೆ ಇರುವ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮುಖ್ಯಮಂತ್ರಿ ಅವರ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಹೀಗಾಗಿ, ಸಭೆಯನ್ನು ರದ್ದುಗೊಳಿಸಿ ವಿಮಾನ ನಿಲ್ದಾಣದತ್ತ ತೆರಳಿದರು.

ಹೀಗಾಗಿ, ಮಧ್ಯಾಹ್ನ 2.30ಕ್ಕೇ ಬಂದು ಕಾಯುತ್ತಾ ಕುಳಿತಿದ್ದ ಜಿಲ್ಲಾಮಟ್ಟದ ಅಧಿಕಾರಿಗಳು ಅನಿವಾರ್ಯವಾಗಿ ಅಲ್ಲಿಂದ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT